ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಓದುವುದು ಎಂದರೆ ನನಗೆ ಅಚ್ಚುಮೆಚ್ಚು. ಅದರಲ್ಲೂ ಹೊಸ-ಹೊಸ ವಿಷಯಗಳ ಪುಸ್ತಕಗಳೆಂದರೆ ಬಲು ಇಷ್ಟ. ಇತ್ತೀಚೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆಯ ಪುಸ್ತಕ ಓದಿದಾಗ ಅವರ ಖಾಸಗಿ ಜೀವನದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ಆಶ್ಚರ್ಯವೂ ಉಂಟಾಯಿತು.
ಶಾಸ್ತ್ರಿಯವರು ಭಾರತ ದೇಶದ ಪ್ರಧಾನಿಯಾಗಿದ್ದರು. ಅವರಿಗೆ ಇಡೀ ರಾಷ್ಟ್ರದ ಬಗ್ಗೆ ಚಿಂತೆ, ಚಿಂತನೆಗಳು, ಒತ್ತಡಗಳಿರುವುದು ಸಾಮಾನ್ಯ. ಆದರೆ ಅವರು ಮನೆಗೆ ಬಂದಾಗ ಪ್ರಧಾನಿಯಾಗಿರುತ್ತಿರಲಿಲ್ಲ. ರಾಷ್ಟçದ ಉನ್ನತ ಅಧಿಕಾರ ಸ್ಥಾನವನ್ನು ಏರಿದ್ದೇನೆ ಎಂಬ ಭಾವನೆಯೇ ಇರಲಿಲ್ಲವಂತೆ. ಕಚೇರಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಒತ್ತಡವಿರಲಿ, ಎಂತಹ ಸಮಸ್ಯೆಗಳೇ ಇರಲಿ ಅಥವಾ ದಣಿದಿರಲಿ, ಬಾಹ್ಯ ಒತ್ತಡವಿರಲಿ ಅದನ್ನು ಮನೆಯಲ್ಲಿ ಸ್ವಲ್ಪವೂ ವ್ಯಕ್ತಪಡಿಸುತ್ತಿರಲಿಲ್ಲ. ಸಂಬಂಧಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದರು. ಮನೆಯಲ್ಲಿ ತಾಯಿಗೆ ಮಗ, ಪತ್ನಿಗೆ ಪತಿ ಮತ್ತು ಮಕ್ಕಳಿಗೆ ತಂದೆಯಾಗಿ ಬಿಡುವಿಲ್ಲದಷ್ಟು ಕೆಲಸದ ನಡುವೆಯೂ ತಾವು ನಿರ್ವಹಿಸಬೇಕಾದ ಮನೆ, ಕುಟುಂಬದ ಕರ್ತವ್ಯ ಅಥವಾ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿರ್ವಹಿಸುತ್ತಿದ್ದರು. ಶಾಸ್ತ್ರಿಯವರು ಕಚೇರಿಯಿಂದ ಮನೆಗೆ ಬಂದಾಗ ಧ್ಯಾನದ ಕೊಠಡಿಯಲ್ಲಿರುತ್ತಿದ್ದ ಅವರ ತಾಯಿ ರಾಮ್ ದುಲಾರಿ ದೇವಿ ಅವರು ಮೆಲುವಾಗಿ; ‘ಮಗೂ, ಬಂದೆಯಾ?’ ಎಂದು ಕೇಳುತ್ತಿದ್ದರಂತೆ. ಆಗ ಶಾಸ್ತಿçಯವರು ತಾಯಿಯ ಕೊಠಡಿಗೆ ಹೋಗಿ ಅವರ ಪಕ್ಕದಲ್ಲಿ ಕುಳಿತು 5-10 ನಿಮಿಷ ಮಾತನಾಡಿದ ಬಳಿಕವಷ್ಟೇ ಅವರು ವಿಶ್ರಾಂತಿ ಪಡೆಯುತ್ತಿದ್ದರಂತೆ.
ಶಾಸ್ತ್ರಿಯವರು ಪ್ರಧಾನಿಯಾಗಿ ಸೋವಿಯಟ್, ರಷ್ಯಾ ಮುಂತಾದ ಕಡೆ ಭೇಟಿ ಕೊಟ್ಟಾಗಲೂ ತಮ್ಮ ಜೊತೆಯಲ್ಲಿ ತಮ್ಮ ಪತ್ನಿ ಲಲಿತಾ ದೇವಿಯವರನ್ನು ಕರೆದುಕೊಂಡು ಹೋಗಿದ್ದರಂತೆ. ಲಲಿತಾರವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ಅವರ ಸೌಮ್ಯತೆ, ನಗುಮುಖಕ್ಕೆ ಎಲ್ಲ ದೇಶದವರೂ ಅವರನ್ನು ಗೌರವಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ದೆಹಲಿಯಲ್ಲಿ ಸೈಂಟ್ ಕೊಲಂಬಸ್ ಶಾಲೆಯ ಆಡಳಿತ ಮಂಡಳಿ ನಿಗದಿಪಡಿಸಿದ ದಿನ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕೆಂಬ ನಿಯಮವಿತ್ತು. ಅನೇಕ ಮಕ್ಕಳ ತಂದೆ ಅಥವಾ ತಾಯಿ ತಾವು ಅನ್ಯ ಕಾರ್ಯ ನಿಮಿತ್ತ ಒತ್ತಡದಲ್ಲಿದ್ದೇವೆ. ಹಾಗಾಗಿ ಶಾಲೆಗೆ ಬರಲಾಗುವುದಿಲ್ಲ ಎಂದು ಶಾಲೆಗೆ ಹೋಗದೆ ಬೇರೆ ಯಾರನ್ನಾದರು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಪಡೆದುಕೊಳ್ಳಲು ಕಳುಹಿಸಿಬಿಡುತ್ತಿದ್ದರು. ಆದರೆ ಶಾಸ್ತ್ರಿಯವರು ಪ್ರಧಾನಿಯಾಗಿದ್ದುಕೊಂಡು ಎಷ್ಟೇ ಕೆಲಸಗಳ ಒತ್ತಡವಿದ್ದರೂ ಬಿಡುವು ಮಾಡಿಕೊಂಡು ತಾವೇ ಶಾಲೆಗೆ ಹೋಗಿ ಮಗನ ವರದಿ ಪಡೆದುಕೊಳ್ಳುತ್ತಿದ್ದರು.
ಒಂದು ಬಾರಿ ಶಾಲಾ ಅಧಿಕಾರಿಗಳು ಪೋಷಕರು ತಮ್ಮ ಮಕ್ಕಳ ವರದಿಯನ್ನು ಪಡೆದುಕೊಳ್ಳುವ ದಿನವನ್ನು ನಿಗದಿಪಡಿಸಿದ್ದರಂತೆ. ಶಾಸ್ತ್ರಿಯವರು ಆಗ ಪ್ರಧಾನಿಯಾಗಿದ್ದರೂ ಅಧಿಕಾರಿಗಳನ್ನು ಭೇಟಿ ಮಾಡಲು ಶಾಲೆಗೆ ತೆರಳಿದ್ದರಂತೆ. ಶಾಲೆಯ ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡೇ ಶಾಲೆ ಆವರಣಕ್ಕೆ ತೆರಳಿದ್ದರು. ಕಾವಲುಗಾರನು ‘ಕಾರನ್ನು ಒಳಕ್ಕೆ ತೆಗೆದುಕೊಂಡು ಹೋಗಿ’ ಎಂದು ಒತ್ತಾಯಿಸಿದರೂ ಕೇಳಲಿಲ್ಲವಂತೆ. ಶಾಲೆಗೆ ಅವರು ಹೋಗಿರುವುದು ವಿದ್ಯಾರ್ಥಿಯ ತಂದೆಯಾಗಿಯೇ ಹೊರತು ಪ್ರಧಾನಿಯಾಗಿ ಅಲ್ಲ ಅನ್ನುವುದು ಅವರ ನಿಲುವಾಗಿತ್ತು.
ಶಾಸ್ತ್ರಿಯವರ ಮಗ ಅನಿಲ್ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ. ಶಾಲೆಯಲ್ಲಿ ಆತನ ತರಗತಿ ಕೋಣೆ ಒಂದನೇ ಮಹಡಿಯಲ್ಲಿತ್ತು. ಶಾಸ್ತ್ರಿಯವರು ಮಗನ ಜೊತೆ ಮೆಟ್ಟಿಲು ಹತ್ತಿಕೊಂಡೇ ಅಲ್ಲಿಗೆ ಹೋದರು. ಅವರನ್ನು ನೋಡಿ ತರಗತಿಯ ಉಪಾಧ್ಯಾಯರಾದ ರೆವೆರೆಂಡ್ ಬ್ರದರ್ ಟೈನನ್‌ರವರು ಅವಾಕ್ಕಾದರು. ಅವರು ವಿನಯವಾಗಿ ‘ವರದಿ ಪಡೆಯುವುದಕ್ಕೆ ನೀವೇ ಬರುವ ಅವಶ್ಯಕತೆ ಇರಲಿಲ್ಲ. ಬೇರೆ ಯಾರನ್ನಾದರು ಕಳುಹಿಸಬಹುದಾಗಿತ್ತು’ ಎಂದರಂತೆ. ಆಗ ಶಾಸ್ತಿçಯವರು ‘ನಾನು ಹಿಂದೆಯೂ ಹೀಗೇ ಮಾಡುತ್ತಿದ್ದೆ. ಅದನ್ನೇ ಮುಂದುವರೆಸುತ್ತೇನೆ’ ಎಂದರು. ‘ಆದರೆ ಈಗ ನೀವು ಪ್ರಧಾನ ಮಂತ್ರಿ’ ಎಂದರು ಟೈನನ್‌ರವರು. ‘ಬ್ರದರ್ ಟೈನನ್, ಪ್ರಧಾನ ಮಂತ್ರಿಯಾದ ಮೇಲೆ ನಾನು ಬದಲಾಗಿಲ್ಲ. ಆದರೆ ನೀವು ಬದಲಾಗಿರುವ ಹಾಗೆ ಕಾಣುತ್ತದೆ’ ಎಂದು ಶಾಸ್ತ್ರಿಯವರು ನಕ್ಕರಂತೆ. ಶಾಸ್ತಿçಯವರಿಗೆ ಅವರ ಕರ್ತವ್ಯವೇನು ಎನ್ನುವ ಸ್ಪಷ್ಟತೆ ಇತ್ತು. ಅವರ ವಿನಯವಂತಿಕೆ ಎಲ್ಲರಿಗೂ ಮಾದರಿಯಾಗಿದೆ.
ಶಾಸ್ತ್ರಿಯವರ ಬಳಿ ಸ್ವಂತ ಕಾರು ಇರಲಿಲ್ಲ. ಅವರ ಮಕ್ಕಳು ಸ್ವಂತ ಕಾರಿಗಾಗಿ ಆಸೆ ಪಡುತ್ತಿದ್ದರು. ಆದರೆ ಶಾಸ್ತ್ರಿಯವರ ಒಪ್ಪಿರಲಿಲ್ಲ. ಅವರು ಪ್ರಧಾನ ಮಂತ್ರಿಯಾದಾಗ ಮಕ್ಕಳು ತಮ್ಮ ಬೇಡಿಕೆಯನ್ನು ಮತ್ತೆ ತಂದೆಯ ಮುಂದಿಟ್ಟರು. ಆಗ ಶಾಸ್ತಿçಯವರು ಯೋಚಿಸಿ ಮಕ್ಕಳನ್ನೆಲ್ಲಾ ಕರೆದು ‘ಕಾರು ಕೊಳ್ಳುವುದಾಗಿ ತೀರ್ಮಾನಿಸಿದ್ದೇನೆ’ ಎಂದರು. ಮಕ್ಕಳಿಗೆ ಸಂತೋಷವಾಯಿತು. ಶಾಸ್ತ್ರಿಯವರಿಗೆ ಮನಸ್ಸು ಮಾಡಿದರೆ ಅತ್ಯಂತ ದುಬಾರಿ ಬೆಲೆ ಬಾಳುವ ಕಾರು ಖರೀದಿಸಬಹುದಿತ್ತು. ಕಾರು ಮಾತ್ರವಲ್ಲದೆ ಸಾಕಷ್ಟು ಆಸ್ತಿ ಪಾಸ್ತಿಯನ್ನೂ ಗಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ತಮ್ಮ ಒಬ್ಬ ಸಿಬ್ಬಂದಿಯನ್ನು ಕರೆದು ಒಂದು ಸಾಧಾರಣ ಫಿಯಟ್ ಕಾರಿನ ಬೆಲೆ ಎಷ್ಟಾಗುತ್ತದೆ ಮತ್ತು ತಮ್ಮ ಬ್ಯಾಂಕಿನಲ್ಲಿ ಎಷ್ಟು ಹಣ ಇದೆ ಎಂದು ವಿಚಾರಿಸಿ ಹೇಳುವಂತೆ ಸೂಚಿಸಿದರು. ಆಗ ಒಂದು ಫಿಯಟ್ ಕಾರಿನ ಬೆಲೆ ರೂ. 12 ಸಾವಿರವಿತ್ತು. ಅವರ ಬ್ಯಾಂಕ್ ಬ್ಯಾಲೆನ್ಸ್ ಕೇವಲ ರೂ 7 ಸಾವಿರ ಇತ್ತು. ಶಾಸ್ತಿçಯವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ರೂ. 5 ಸಾವಿರ ಸಾಲ ಪಡೆದು ಕಾರನ್ನು ಕೊಂಡುಕೊಂಡರು. ಬ್ಯಾಂಕ್‌ನಿಂದ ಸಾಲ ಪಡೆದು ಕಾರು ಖರೀದಿಸಿದ ಪ್ರಧಾನ ಮಂತ್ರಿ ಇಡೀ ವಿಶ್ವದಲ್ಲಿ ಶಾಸ್ತಿçಯವರೊಬ್ಬರೇ ಎಂದು ನನಗನಿಸುತ್ತದೆ. ಸರಕಾರ ತಮ್ಮ ಬಳಕೆಗಾಗಿ ನೀಡಿರುವ ಕಾರನ್ನು ತನ್ನ ಖಾಸಗಿ ಕೆಲಸಕ್ಕೆ ಶಾಸ್ತ್ರಿಯವರು ಎಂದು ಬಳಸುತ್ತಿರಲಿಲ್ಲ ಎನ್ನುವುದು ಅವರ ನಿಷ್ಠೆಗೆ ಮತ್ತೊಂದು ನಿದರ್ಶನ.
ಶಾಸ್ತಿçಯವರ ಎರಡನೆಯ ಮಗ ತಂದೆಯ ಕಾರು ಚಾಲಕನ ಮೂಲಕ ಗುಟ್ಟಾಗಿ 14ನೇ ವರ್ಷಕ್ಕೆ ಕಾರು ಚಲಾಯಿಸಲು ಕಲಿತ್ತಿದ್ದನು. ಒಬ್ಬನೇ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ಸರಕಾರದ ನಿಯಮದ ಪ್ರಕಾರ ಹದಿನೆಂಟು ವರ್ಷ ತುಂಬುವ ಮೊದಲು ಚಾಲನಾ ಪರವಾನಿಗೆ ದೊರೆಯುತ್ತಿರಲಿಲ್ಲ. ಆದರೆ ಅವರ ಮಗನು ಹದಿನಾಲ್ಕನೆ ವಯಸ್ಸಿನಲ್ಲಿ ಚಾಲನಾ ಪರವಾನಿಗೆ ಪಡೆಯಲು ಶಾಸ್ತಿçಯವರ ಆಪ್ತ ಕಾರ್ಯದರ್ಶಿಯವರ ಸಹಾಯವನ್ನು ಕೋರಿದನು. ಅವರು ಒಂದೇ ದಿನದಲ್ಲಿ ಅವನಿಗೆ ಪರವಾನಿಗೆಯನ್ನು ಮಾಡಿಸಿಕೊಟ್ಟಿದ್ದರು. ಅಂದು ರಾತ್ರಿ ಶಾಸ್ತ್ರಿಯವರು ಮನೆಗೆ ಬಂದಾಗ ಅನಿಲ್ ಹೆಮ್ಮೆಯಿಂದ ಅವರಿಗೆ ತನ್ನ ವಾಹನ ಚಾಲನೆಯ ಪರವಾನಿಗೆಯನ್ನು ತೋರಿಸಿದನು. ಅದನ್ನು ಕಂಡ ಶಾಸ್ತ್ರಿವರಿಗೆ ನೋವು ಮತ್ತು ಬೇಸರ ಉಂಟಾಯಿತು. ಅವರು ಅದನ್ನು ಮಾತಿನಲ್ಲಿ ತೋರಲಿಲ್ಲ. ಮಾರನೇ ದಿನ ಬೆಳಗ್ಗೆ ತನ್ನ ಆಪ್ತ ಕಾರ್ಯದರ್ಶಿಯವರನ್ನು ಕರೆಸಿ ತಮ್ಮ ಮನೆಯಲ್ಲೇ ಕಾನೂನಿನ ಉಲ್ಲಂಘನೆ ಆದದ್ದು ಬಹಳ ನೋವನ್ನು ಉಂಟುಮಾಡಿದೆ. ಕನಿಷ್ಟ ವಯೋಮಿತಿ ಇಲ್ಲದವನಿಗೆ ಯಾವ ಪರೀಕ್ಷೆಯನ್ನೂ ನಡೆಸದೆ ವಾಹನ ಚಾಲನಾ ಪರವಾನಿಗೆಯನ್ನು ನೀಡಿ ನಿಯಮಗಳನ್ನು ಮುರಿಯಲಾಗಿದೆ ಎಂದು ಶಾಸ್ತಿçಯವರು ಗೃಹ ಇಲಾಖೆಗೆ ಟಿಪ್ಪಣಿ ಕಳುಹಿಸಿ ಮಗನ ಪರವಾನಿಗೆಯನ್ನು ರದ್ದು ಮಾಡಿಸಿದ್ದರು.
ಸೈಂಟ್ ಕೊಲಂಬಸ್ ಶಾಲೆಯಲ್ಲಿ ವ್ಯಾಸಂಗ ಮುಗಿದ ನಂತರ ಅವರ ಮಗ ಅನಿಲ್ ಸ್ಟೀಫನ್ ಕಾಲೇಜು ಸೇರಲು ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ನೀಡಿದನು. ಅವನು ತನ್ನ ಹೆಸರನ್ನು ‘ಅನಿಲ್ ಕುಮಾರ್’, ತಂದೆಯ ಹೆಸರನ್ನು ಎಲ್.ಬಿ. ಶಾಸ್ತ್ರಿ ಅವರ ಉದ್ಯೋಗವನ್ನು ‘ಸರಕಾರಿ’, ವಿಳಾಸವನ್ನು ದೆಹಲಿ ‘ನಂ.೧೦ ಜನ್‌ಪಥ್’ ಎಂದು ನಮೂದಿಸಿದ್ದನು. ‘ನಂ.10 ಜನ್‌ಪಥ್’ ಪ್ರಧಾನ ಮಂತ್ರಿಯವರ ನಿವಾಸ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಅದರಿಂದ ಅನಿಲ್ ಸರದಿ ಬಂದಾಗ ಸಂದರ್ಶಕ ನೀನು ‘ನಂ.10 ಜನ್‌ಪಥ್’ ಬರೆದಿದ್ದೀಯ ಅದು ನಿನ್ನ ನಿವಾಸವೇ ಎಂದು ಪ್ರಶ್ನಿಸಿದರು. ಅನಿಲ್ ‘ಹೌದು’ ಎಂದನು. ನಂತರ ಸಂದರ್ಶಕ ರಾಬರ್ಟ್; ‘ನಿಮ್ಮ ತಂದೆ ಜೀವನಕ್ಕೆ ಏನು ಮಾಡುತ್ತಿದ್ದಾರೆ?’ ಎಂದಾಗ ಅನಿಲ್ ಅವರು ಸರಕಾರದಲ್ಲಿ ಒಂದು ಸ್ಥಾನ ಪಡೆದಿದ್ದಾರೆ ಎಂದು ಉತ್ತರಿಸಿದನು. ಆತನ ಉತ್ತರದಿಂದ ರಾಬರ್ಟ್ಗೆ ಸಮಾಧಾನವಾಗದಿದ್ದಾಗ ಅವರು, ‘ನಿಮ್ಮ ತಂದೆ ಹೊಂದಿರುವ ಸ್ಥಾನದ ಹೆಸರೇನು?’ ಎಂದು ಖಚಿತವಾಗಿ ಕೇಳಿದರು. ಅನಿಲ್, ‘ಭಾರತದ ಪ್ರಧಾನ ಮಂತ್ರಿ’ ಎಂದನು. ಅದನ್ನು ಕೇಳಿ ರಾಬರ್ಟ್ ತಕ್ಷಣ ಅವನನ್ನು ಪ್ರಿನ್ಸಿಪಾಲರ ಕೊಠಡಿಗೆ ಕರೆದುಕೊಂಡು ಹೋದರು. ನಂತರ ಮತ್ತೊಬ್ಬ ಅಧಿಕಾರಿ ಅನಿಲ್‌ನನ್ನು ಸ್ವಾಗತಿಸಿ ಅವನ ಸಂದರ್ಶನವನ್ನು ಬೇಗನೆ ಮುಗಿಸಿ ಕಳುಹಿಸಿದರು. ಮನೆಯಲ್ಲಿ ರಾತ್ರಿ ವೇಳೆ ಅನಿಲ್ ಕಾಲೇಜಿನಲ್ಲಿ ನಡೆದ ಸಂಗತಿಯನ್ನು, ತನಗೆ ಕಾಲೇಜಿನಲ್ಲಿ ವಿಶೇಷ ಆದ್ಯತೆ ನೀಡಿದುದನ್ನೂ ತನ್ನ ತಂದೆಗೆ ತಿಳಿಸಿದನು. ಶಾಸ್ತ್ರಿಯವರು, ‘ನೀನು ಸರದಿಯಲ್ಲಿ ಕಾದು ಸಂದರ್ಶನಕ್ಕೆ ಹೋದದ್ದು ಮೊದಲನೆಯ ಭಾಗ ಸರಿಯಾಗಿದೆ. ಆದರೆ ಆನಂತರ ನಿನ್ನ ಹಿನ್ನೆಲೆಯ ಆಧಾರದ ಮೇಲೆ ತಕ್ಷಣ ಸಂದರ್ಶನ ನಡೆಸಿದ್ದು ಅಷ್ಟು ಸರಿಹೋಗಲಿಲ್ಲ, ಅವರು ಹಾಗೆ ಮಾಡಬಾರದಿತ್ತು’ ಎಂದು ಮಗನಲ್ಲಿ ತಿಳಿಸಿದ್ದರಂತೆ.
ಶಾಸ್ತ್ರಿಯವರು ಪ್ರಧಾನಿ ಆಗಿದ್ದಾಗ ಆಹಾರದ ಕೊರತೆ ಬಹಳ ಇತ್ತು. ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಲಿಂಡನ್ ಜಾನ್‌ಸನ್‌ರವರು ಅಮೆರಿಕವು ಭಾರತಕ್ಕೆ ಕೊಡುತ್ತಿದ್ದ ಗೋಧಿಯನ್ನು ನಿಲ್ಲಿಸಿದ್ದರು. ಆಹಾರದ ಕೊರತೆಯನ್ನು ಸರಿದೂಗಿಸಲು ಶಾಸ್ತ್ರಿಯವರು ತೆಗೆದುಕೊಂಡ ಕ್ರಮಗಳಲ್ಲಿ ‘ಜನರು ಒಂದು ಹೊತ್ತು ಊಟ ಬಿಡುವುದು’ ಒಂದು ವಿಧಾನವಾಗಿತ್ತು. ಅದರಂತೆ ಪ್ರತಿ ಸೋಮವಾರ ರಾತ್ರಿ ಒಂದು ಹೊತ್ತು ಊಟ ಬಿಡಬೇಕೆಂದು ಶಾಸ್ತಿçಯವರು ಜನರಿಗೆ ಮನವಿ ಮಾಡಿದರು. ಹಾಗೆ ಮನವಿ ಮಾಡುವುದಕ್ಕೆ ಮುನ್ನ ತಮ್ಮ ಮಕ್ಕಳ ಪ್ರತಿಕ್ರಿಯೆ ಗಮನಿಸಲು ಬಯಸಿದರು. ಒಂದು ಹೊತ್ತು ಅಡುಗೆ ಮಾಡದಿರುವಂತೆ ತಮ್ಮ ಪತ್ನಿಗೆ ಅವರು ಸೂಚಿಸಿ, ಉಪವಾಸವಿರುವಂತೆ ನೋಡಿಕೊಂಡರು. ಮಕ್ಕಳು ಆರಾಮವಾಗಿ ಉಪವಾಸ ಇದ್ದುದನ್ನು ನೋಡಿದ ಮೇಲೆ ದೇಶದ ಜನರಲ್ಲಿ ಮನವಿ ಮಾಡಿದರು. ಜನರೂ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತಿ ಸೋಮವಾರ ಉಪವಾಸ ಮಾಡಿದರು. ಹೀಗೆ ಶಾಸ್ತ್ರಿಯವರು ಯಾವುದೇ ಕೆಲಸ ಮಾಡುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ಆಲೋಚಿಸುತ್ತಿದ್ದರು. ವಿವೇಚನೆಯ ಮೂಲಕ ತರ್ಕಿಸಿ, ಮುಂದಾಲೋಚಿಸಿ ತಮ್ಮ ಕಾರ್ಯವನ್ನು ಮಾಡುತ್ತಿದ್ದರು ಎಂದು ಈ ಮೂಲಕ ತಿಳಿಯುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಉನ್ನತ ಅಧಿಕಾರದಲ್ಲಿದ್ದವರು. ಆಸೆ ಪಟ್ಟಿದ್ದರೆ ಅಥವಾ ಮನಸ್ಸು ಮಾಡಿದ್ದರೆ ಸಾಕಷ್ಟು ಆಸ್ತಿ-ಪಾಸ್ತಿಗಳನ್ನು ಹೊಂದಬಹುದಾಗಿತ್ತು. ಆಳು-ಕಾಳುಗಳನ್ನು ಇಟ್ಟುಕೊಂಡು ಕಷ್ಟಪಡದೇ ಬದುಕನ್ನು ನಡೆಸಬಹುದಾಗಿತ್ತು. ಆದರೆ ಸರಳ ವ್ಯಕ್ತಿಯಾಗಿ ಸತ್ಯ, ನ್ಯಾಯ, ನೀತಿಗಳಿಗೆ ಬೆಲೆ ಕೊಡುವುದರ ಜೊತೆಗೆ ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡು ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದ್ದರು. ಶಾಸ್ತಿçಯವರು ಭಾರತ ಕಂಡ ಓರ್ವ ಅಪೂರ್ವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಬದುಕು ಹಾಗೂ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾದರಿ ಹಾಗೂ ಪ್ರೇರಣೆಯಾಗಬೇಕಿದೆ.
