ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು


ಸೀರೆ, ಚೂಡಿದಾರ್, ಹೊದಿಕೆ, ಪ್ಯಾಂಟ್, ಅಂಗಿ, ಲುಂಗಿ ಮೊದಲಾದ ಬಟ್ಟೆಬರೆಗಳು ಒಂದಷ್ಟು ಸಮಯ ಉಪಯೋಗವಾದ ಬಳಿಕ ಅಥವಾ ಅವುಗಳ ಬಣ್ಣ ಕೊಂಚ ಮಾಸಿದ ನಂತರ ಕಸದ ಬುಟ್ಟಿಯನ್ನು ಸೇರುವುದೇ ಹೆಚ್ಚು. ಒಂದಷ್ಟು ಮನೆಗಳಲ್ಲಿ ಅವುಗಳನ್ನು ಎಸೆಯಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಮನೆಮಂದಿ ಪರಿತಪಿಸುತ್ತಾರೆ. ಹಳೆಯ ಬಟ್ಟೆಗಳಿಗೆ ಹೊಸ ಮೆರುಗನ್ನು ತುಂಬಿ ನವನವೀನ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ, ಫ್ಯಾಷನ್‌ಪ್ರಿಯರಿಗೆ ಇಷ್ಟವೆನಿಸುವಂತೆ ಬಗೆಬಗೆಯ ವಸ್ತುಗಳನ್ನು ತಯಾರಿಸುವ ಕಲೆಯೂ ಜನಪ್ರಿಯವಾಗುತ್ತಿದೆ.
ಧಾರವಾಡದ ಕಮಲಾಪುರದ ಪತ್ರೇಶ್ವರ ನಗರದ ಪ್ರಿಯಾ ಖೋದಾನ್‌ಪುರವರು ಕಳೆದ ಹತ್ತು ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಸ್ಫೂರ್ತಿ’ ಸ್ವಸಹಾಯ ಸಂಘದ ಸದಸ್ಯರಾಗಿದ್ದು ಸೃಜನಶೀಲತೆ ಮತ್ತು ಕೌಶಲ್ಯದಿಂದ ನಿರುಪಯುಕ್ತ ಬಟ್ಟೆಗಳಿಗೆ ಹೊಸ ಸ್ಪರ್ಶ ನೀಡಿ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟವನ್ನೂ ಮಾಡುತ್ತಿದ್ದಾರೆ. ‘ಕಸದಿಂದ ರಸ’ ಎಂಬ ಮಾತಿನಂತೆ ಇವರ ಕೈಚಳಕದಿಂದ ಹೊಸ ರೂಪ ಪಡೆದ ವಸ್ತುಗಳು ನಿತ್ಯೋಪಯೋಗಿ ವಸ್ತುಗಳಾಗಿ ಜನರ ಕೈ ಸೇರುತ್ತಿವೆ.
ಏನೇನು ತಯಾರಿ?
ಸಿಲ್ಕ್ ತರಹದ ಬಟ್ಟೆಗಳು, ಪ್ರಿಂಟೆಡ್ ಬಟ್ಟೆಗಳು, ಕಾಟನ್ ಅಕ್ಕಿ ಚೀಲಗಳೆಲ್ಲ ಒಮ್ಮೆ ಬಳಕೆಯಾದ ಮೇಲೆ ವ್ಯರ್ಥವೆನಿಸುತ್ತವೆ. ಆದರೆ ಪ್ರಿಯಾರವರು ವ್ಯರ್ಥ ಬಟ್ಟೆಗಳಿಂದ ಹ್ಯಾಂಡ್‌ಪರ್ಸ್, ಲಗೇಜ್ ಬ್ಯಾಗ್, ಸ್ಕೆö್ಯÃರ್ ಬ್ಯಾಗ್, ವಯರ್ ಬ್ಯಾಗ್, ಕೆರಿಯರ್ ಬ್ಯಾಗ್, ವ್ಯಾನಿಟಿ ಬ್ಯಾಗ್, ಮ್ಯಾಟ್, ಸಾರಿ ಬ್ಯಾಗ್, ಮೊಬೈಲ್ ಪೌಚ್, ತರಕಾರಿ ಚೀಲ, ಫ್ಯಾನ್ಸಿ ಬ್ಯಾಗ್, ರಾಜಸ್ಥಾನಿ ಬ್ಯಾಗ್, ಉಡಿ ತುಂಬುವ ಚೀಲ, ತೋರಣ, ಕಿವಿಯೋಲೆ, ಸನ್ಮಾನದ ಮಾಲೆಗಳು, ದಿಂಬು, ಕಾರಿನ ಕುಶನ್‌ಗಳು, ದಿವಾನ್‌ಸೆಟ್, ಟೇಬಲ್ ಕ್ಲಾತ್, ವಿವಿಧ ಆಭರಣಗಳು ಹೀಗೆ ಹತ್ತಾರು ವಸ್ತುಗಳು ಇವರ ಕೈಯಲ್ಲಿ ಅರಳುತ್ತವೆ. ಹೊಸ ರೂಪ ನೀಡಲು ಅಂಗಡಿಗಳಿAದ ಕೆಲವು ಫ್ಯಾನ್ಸಿಯ ವಸ್ತುಗಳನ್ನು ಮತ್ತು ಜಿಪ್, ರನ್ನರ್‌ಗಳನ್ನು ಮಾತ್ರ ಬಳಕೆ ಮಾಡುತ್ತಾರೆ. ಫ್ಯಾನ್ಸಿ ಬ್ಯಾಗ್ ತಯಾರಿಸಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡುತ್ತಾರೆ. ಜೊತೆಗೆ ಕಸೂತಿ, ಫ್ಯಾನ್ಸಿ ಜ್ಯುವೆಲ್ಲರಿ ಆಭರಣಗಳು, ಗ್ಲಾಸ್ ಪೇಂಟಿAಗ್ ಕೂಡಾ ಮಾಡುತ್ತಾರೆ. ವಿಶೇಷವೆಂದರೆ ಈ ವಸ್ತುಗಳು ಮರುಬಳಕೆಯಾದ ವಸ್ತುಗಳು ಎಂದು ನಂತರದಲ್ಲಿ ಗುರುತು ಹಿಡಿಯುವುದೂ ಕಷ್ಟ.
ಹವ್ಯಾಸವೇ ವೃತ್ತಿಯಾಯಿತು
ಪ್ರಿಯಾರವರ ಪತಿ ಹಾರ್ಡ್ವೇರ್ ಅಂಗಡಿ ಮಾಡಿಕೊಂಡಿದ್ದು ಪ್ರಿಯಾರವರ ಪ್ರಯತ್ನಗಳನ್ನೆಲ್ಲ ಸದಾ ಬೆಂಬಲಿಸುತ್ತಾರೆ. ಬಿಡುವಿನ ಸಮಯದಲ್ಲಿ ಮನೆಯಲ್ಲೆ ಇರುವ ಬಟ್ಟೆಗಳಿಂದ ಕೆಲವೊಂದು ವಸ್ತುಗಳನ್ನು ಮನೆಯೊಳಗೆ ಅಲಂಕಾರಕ್ಕಾಗಿ ತಯಾರಿಸುತ್ತಿದ್ದರು. ಇವರ ಕೌಶಲ್ಯವನ್ನು ನೋಡಿದ ಇವರ ಮನೆಗೆ ಬಂದ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಇವರಿಗೆ ಇನ್ನಷ್ಟು ಕರಕುಶಲ ವಸ್ತುಗಳನ್ನು ತಯಾರಿಸಲು ಪ್ರೇರಣೆ ನೀಡಿತು. ಅನೇಕ ಮಂದಿ ಖರೀದಿ ಮಾಡಿ ಮನೆಗೊಯ್ದರು. ಇದರಿಂದ ಪ್ರಿಯಾರವರು ತಾನು ಕಲಿತ ವಿದ್ಯೆ ಇನ್ನೊಂದಷ್ಟು ಜನರಿಗೆ ಉಪಯೋಗವಾಗಬೇಕೆಂದು ಭಾವಿಸಿ ಕಲಿಕೆಗೂ ಒತ್ತು ನೀಡಿದರು. ಇದರ ಫಲವಾಗಿ ಎನ್ನೆಸ್ಸೆಸ್ ಶಿಬಿರಗಳು, ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೂ ತರಬೇತಿ ನೀಡಲಾರಂಭಿಸಿದರು.
ಸಾವಿರಾರು ಮಂದಿ ಮಹಿಳೆಯರಿಗೆ ತರಬೇತಿ
ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಿಯಾರವರದ್ದು ಅನ್ಯೋನ್ಯ ನಂಟು. ಇವರು ಇದುವರೆಗೆ ಯೋಜನೆಯ ಜ್ಞಾನವಿಕಾಸ ಕೇಂದ್ರಗಳ ಸುಮಾರು ೩೫೦ಕ್ಕೂ ಅಧಿಕ ಮಹಿಳೆಯರಿಗೆ ತರಬೇತಿಯನ್ನು ನೀಡಿದ್ದಾರೆ. ಧಾರವಾಡದಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ರಾಯಾಪುರ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಕರಕುಶಲ ವಸ್ತುಗಳ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾವಹಿಸಿದ್ದಾರೆ. ತಮ್ಮದೇ ಮನೆಯನ್ನು ತರಬೇತಿ ಕೇಂದ್ರವಾಗಿಸಿಕೊ0ಡು ‘ಪ್ರಮೀಳಾ ಕೌಶಲ್ಯಾಭಿವೃದ್ಧಿ ಸಂಸ್ಥೆ’ಯನ್ನು ಪ್ರಾರಂಭಿಸಿ ಮಹಿಳೆಯರಿಗೆ ಟೈಲರಿಂಗ್, ವಿವಿಧ ಬಗೆಯ ಕರಕುಶಲ ವಸ್ತುಗಳ ತಯಾರಿಯ ತರಬೇತಿಗಳನ್ನು ನೀಡುತ್ತಿದ್ದಾರೆ.

ಮಹಿಳೆಯರಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟುವ ಪ್ರಿಯಾರವರ ಪ್ರಯತ್ನವನ್ನು ಗುರುತಿಸಿ ರಾಜ್ಯ ಸರಕಾರವು ಈ ಬಾರಿ ಮಹಿಳಾ ದಿನಾಚರಣೆಯಂದು ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *