ಗ್ರಾಮೀಣ ಶಾಲೆಗಳನ್ನು ಉಳಿಸಿ ಬೆಳೆಸಲು ಜ್ಞಾನದೀಪ ಶಿಕ್ಷಕರು

ಕಳೆದ ಸಂಚಿಕೆಯಲ್ಲಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಶಿಕ್ಷಣಕ್ಕೆ ನೀಡಿರುವ, ನೀಡುತ್ತಿರುವ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಲವು ದಶಕಗಳ ಹಿಂದೆ ಸರಕಾರವು ಗ್ರಾಮೀಣ ಮಟ್ಟದಲ್ಲಿ ಸರಕಾರಿ ಶಾಲೆಗಳನ್ನು ತೆರೆಯುವ ಮೂಲಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯೆಯನ್ನೆ ಬರೆದಿದೆ. ಇದರಿಂದ ರಾಜ್ಯದಲ್ಲಿ ಬಹುದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ರಾಂತಿಯೇ ಆಗಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಗ್ರಾಮೀಣ ಮಕ್ಕಳ ಪಾಲಿಗೆ ಶಿಕ್ಷಣದ ಬೆಳಕನ್ನು ನೀಡಿದ ಸರಕಾರಿ ಶಾಲೆಗಳು ದಿನಕಳೆದಂತೆ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸಬೇಕಾಯಿತು. ಖಾಸಗಿ ಶಾಲೆಗಳ ಆರಂಭ, ಶಿಕ್ಷಣದ ಗುಣಮಟ್ಟದ ಕೊರತೆ, ಮೂಲಭೂತ ಸೌಕರ್ಯಗಳು ಹೀಗೆ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಸರಕಾರಿ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸತೊಡಗಿದವು. ಈ ಎಲ್ಲದರ ಪರಿಣಾಮವಾಗಿ ಕಳೆದ ಒಂದು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವುದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ರಾಜ್ಯದಲ್ಲಿ 43,564 ಸರಕಾರಿ ಶಾಲೆಗಳಿದ್ದು ಈ ಪೈಕಿ 2015-26ರ ಸಾಲಿನಲ್ಲಿ ಸುಮಾರು 3,117 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. 5,412ಕ್ಕೂ ಹೆಚ್ಚು ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳ ಸಂಖ್ಯೆ ಗ್ರಾಮೀಣ ಶಾಲೆಗಳಲ್ಲಿ ಕ್ಷೀಣಿಸುತ್ತಿದ್ದಂತೆಯೇ ಅಧ್ಯಾಪಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅಧ್ಯಾಪಕರ ಸಂಖ್ಯೆ ಕಡಿಮೆ ಇದೆ ಎಂದು ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಈ ಎರಡೂ ವ್ಯತ್ಯಯಗಳ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿರುವ ಸರಕಾರಿ ಶಾಲೆಗಳ ಪ್ರಮಾಣ ಅಗಾಧವಾಗಿ ಹೆಚ್ಚುತ್ತಿದೆ. ಎಲ್ಲಾ ವ್ಯವಸ್ಥೆ ಹಾಗೂ ಅನುಕೂಲವಿರುವ ಕುಟುಂಬದವರು ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಪಟ್ಟಣದಲ್ಲಿರುವ ಶಾಲೆಯಲ್ಲಿ ಶಿಕ್ಷಣವನ್ನು ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತಾರೆ. ಆದರೆ ಸಾಮಾನ್ಯ ಜನತೆಯ ಪರಿಸ್ಥಿತಿಯೇನು? ಅವರು ಅನಿವಾರ್ಯವಾಗಿ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಮೇಲೆ ಅವಲಂಬಿತರಾಗುತ್ತಾರೆ. ಒಂದು ವೇಳೆ ಆ ಶಾಲೆಯೂ ಮುಚ್ಚಲ್ಪಟ್ಟರೆ, ತಮ್ಮ ಮಕ್ಕಳ ಶಿಕ್ಷಣವನ್ನು ಅಲ್ಲಿಗೇ ಮೊಟಕುಗೊಳಿಸುತ್ತಾರೆ.
ಸರಕಾರಿ ಶಾಲೆಗಳ ಸಮಸ್ಯೆ, ಸವಾಲುಗಳನ್ನು ಗಮನಿಸಿದ ಶ್ರೀ ಹೆಗ್ಗಡೆಯವರು ಸರಕಾರಿ ಶಾಲೆಗಳನ್ನು ಉಳಿಸುವ ಸಾಮಾನ್ಯ ಪ್ರಯತ್ನಗಳಿಗೆ ಕೈಜೋಡಿಸಿದರು. ಶಿಕ್ಷಕರ ಕೊರತೆಯಿರುವ ಗ್ರಾಮೀಣ ಶಾಲೆಗಳಿಗೆ ‘ಜ್ಞಾನದೀಪ ಶಿಕ್ಷಕ’ರನ್ನು ಒದಗಿಸುವ ಅಪೂರ್ವ ಪ್ರಯತ್ನವೊಂದನ್ನು ಶ್ರೀ ಹೆಗ್ಗಡೆಯವರು ಕೈಗೊಂಡರು. ಕಳೆದ ಮೂರುವರೆ ದಶಕಗಳ ಹಿಂದೆ ಆರಂಭಗೊoಡ ಈ ಕಾರ್ಯಕ್ರಮದಡಿ ಇಂದಿಗೂ ಯಾವ ಸರಕಾರಿ ಶಾಲೆಯಲ್ಲಿ ಏಕೋಪಾಧ್ಯಾಯ (ಒಬ್ಬರೇ ಶಿಕ್ಷಕರು) ಇರುತ್ತಾರೆಯೋ ಅಂತಹ ಶಾಲೆಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದಲೇ ಓರ್ವ ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಅವರ ಗೌರವಧನ ಮುಂತಾದ ಎಲ್ಲ ವೆಚ್ಚಗಳನ್ನು ಯೋಜನೆಯೇ ಭರಿಸುತ್ತದೆ. 2025-26ರ ಸಾಲಿನಲ್ಲಿ 1,078 ಮಂದಿ ಗೌರವ ಶಿಕ್ಷಕರನ್ನು ಯೋಜನೆಯ ವತಿಯಿಂದ ನೇಮಕ ಮಾಡಿ ಗ್ರಾಮೀಣ ಶಾಲೆಗಳಿಗೆ ನೀಡಲಾಗಿದೆ. ಇದುವರೆಗೆ 10,352 ಶಿಕ್ಷಕರ ಒದಗಣೆಯನ್ನು ಮಾಡಲಾಗಿದೆ. ಬಹುಶಃ ಸರಕಾರದ ಶಿಕ್ಷಕರ ನೇಮಕಾತಿಯ ನಂತರ ಅತೀ ದೊಡ್ಡ ಪ್ರಮಾಣದ ಶಿಕ್ಷಕರ ನೇಮಕಾತಿ (ಗೌರಧನದ ಆಧಾರದಲ್ಲಿ) ಕೈಗೊಂಡಿರುವುದು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಎನ್ನುವುದರಲ್ಲಿ ಸಂದೇಹವಿಲ್ಲ.
ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನದೀಪ ಶಿಕ್ಷಕರ ಒದಗಣೆ’ ಕಾರ್ಯಕ್ರಮದಡಿ ಶಾಲೆಗಳಿಗೆ ಪರಿಣತಿಯನ್ನು ಹೊಂದಿರುವ ಶಿಕ್ಷಕರನ್ನೇ ನಿಯೋಜನೆಗೊಳಿಸಲಾಗಿದೆ. ಇದು ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭಾವಂತರ ಪಾಲಿಗೆ ದೊರೆತ ಉತ್ತಮ ಅವಕಾಶವು ಹೌದು. ಅವರಿರುವ ಗ್ರಾಮದಲ್ಲಿಯೇ ಇಂತಹ ಅವಕಾಶ ದೊರೆಯುವುದರಿಂದ ಅತ್ಯಂತ ಪರಿಣಾಮಕಾರಿ ಬೋಧನಾ ವ್ಯವಸ್ಥೆಯೂ ಆ ಶಾಲೆಗೆ ದೊರೆತಂತಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಕೂಡಾ ಆ ಶಾಲೆಯನ್ನು ಮುಚ್ಚದೆ ಮುಂದುವರಿಸಿಕೊoಡು ಹೋಗಲು ಸಾಧ್ಯವಾಗಿದೆ. ಶಿಕ್ಷಕರ ಒದಗಣೆಯಿಂದ ಶಿಕ್ಷಕರ ಸಂಖ್ಯೆ ಹೆಚ್ಚಿದಂತೆ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಇದರಿಂದಾಗಿ ಮುಚ್ಚುವ ಹಂತದಲ್ಲಿದ್ದ ಆ ಶಾಲೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ, ಸಾಧ್ಯವಾಗುತ್ತದೆ. ಸರಕಾರಿ ಶಾಲೆಗಳ ಉಳಿವಿನಲ್ಲಿ ಜ್ಞಾನದೀಪ ಶಿಕ್ಷಕರ ಒದಗಣೆ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಪೂಜ್ಯರ ‘ಜ್ಞಾನದೀಪ ಶಿಕ್ಷಕರ ಒದಗಣೆ’ಯ ಈ ದೂರಗಾಮಿ ಚಿಂತನೆ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಹುದೊಡ್ಡದು.
ಪೂಜ್ಯರ ಇನ್ನಷ್ಟು ಕಾರ್ಯಕ್ರಮಗಳ ಮಾಹಿತಿಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram