ವ್ಯಕ್ತಿತ್ವ ಪರಿಮಳಿಸಲಿ

ನಾವು ಯಾರಿಗಾದರೂ ಹೂವಿನ ಗೊಂಚಲನ್ನು ಕೊಟ್ಟಾಗ ಅದರ ಪರಿಮಳದ ಸ್ವಲ್ಪ ಅಂಶ ನಮ್ಮ ಕೈಗೆ ಮೆತ್ತಿಕೊಂಡಿರುತ್ತದೆ. ಮಲ್ಲಿಗೆ, ಅಗರಬತ್ತಿ ಇತ್ಯಾದಿಗಳೂ ಹಾಗೇ ಕೆಲಸ ಮಾಡುತ್ತವೆ. ಅದಕ್ಕೆ ಹಿಂದಿನವರು ‘ಸೆಗಣಿಯ ಸ್ನೇಹಕ್ಕಿಂತ ಶ್ರೀಗಂಧದ ಜೊತೆ ಗುದ್ದಾಡುವುದೇ ಲೇಸು’ ಅಂದಿದ್ದಾರೆ. ಅಂದರೆ ನಾವು ಮಾಡುವ ಯಾವುದೇ ಕೆಲಸದಲ್ಲಿ ಒಳ್ಳೆಯ ಉದ್ದೇಶ ಹೊಂದಿದ್ದರೆ ಅದರ ಫಲ ನಮಗೆ ಖಂಡಿತಾ ಸಿಗುತ್ತದೆ.
ನಾವು ಯಾವುದೇ ಕೆಲಸಕ್ಕೆ ಸೇರುವಾಗ ಅಲ್ಲಿ ನಮಗೆ ಸಿಗಬಹುದಾದ ಸಂಬಳದ ಬಗ್ಗೆ ಚಿಂತಿಸುತ್ತೇವೆ. ಇದರ ಬದಲಾಗಿ ಇಷ್ಟು ಸಂಬಳಕ್ಕೆ ನಾವೆಷ್ಟು ಸೇವೆ ಮಾಡಬೇಕು ಎಂಬ ಬಗ್ಗೆ ಚಿಂತಿಸುವುದಿಲ್ಲ. ಶಾಲೆ, ಕಂಪನಿ, ಸೇವಾಸಂಸ್ಥೆ ಯಾವುದೇ ಇರಲಿ ನಮ್ಮ ಸಂಬಳದ ಚೆಕ್‌ಗೆ ಒಂದು ಉದ್ದೇಶವನ್ನು ಜೋಡಿಸಿಕೊಂಡಾಗ ನಾವು ಪಡೆದುಕೊಂಡದ್ದಕ್ಕಿoತ ಕೊಟ್ಟ ತೃಪ್ತಿ ಇಮ್ಮಡಿಯಾಗುತ್ತದೆ. ನಮ್ಮ ಕೆಲಸ ಒಳ್ಳೆಯದಾದಾಗ ಕೆಲಸದ ಬಗ್ಗೆ ಹೆಮ್ಮೆ, ಜೊತೆಗೆ ಅಂತಹ ಕೆಲಸ ಮಾಡಿದ ತನ್ನ ಬಗ್ಗೆಯೇ ಗೌರವ ಮೂಡುತ್ತದೆ. ಈ ಭಾವನೆ ನಮ್ಮದಾಗಬೇಕಾದರೆ ನಮ್ಮ ಗುರಿ ಬಗ್ಗೆ ಚಿಂತಿಸದೆ, ಮಾರ್ಗದ ಬಗ್ಗೆ, ಉದ್ದೇಶದ ಬಗ್ಗೆ ಹೆಚ್ಚು ಚಿಂತಿತರಾಗಬೇಕು. ಒಂದು ಸಂಸ್ಥೆಯ ಉದ್ದೇಶ ಬರುವ ಲಾಭಕ್ಕಿಂತ ಜನರ ಅಭಿವೃದ್ಧಿ, ಜನರ ಅನುಕೂಲಕ್ಕೆ ಎಂಬ ಭಾವನೆ ಬಂದಾಗ ದುಡಿಯುವವರ ಮನಸ್ಸಿನಲ್ಲೂ ಒಳ್ಳೆಯ ಭಾವನೆ ಬರುತ್ತದೆ.
ಯಾವುದೇ ಸಂಸ್ಥೆಯ ‘ನಾಯಕ’ ಪ್ರಾಮಾಣಿಕನಾಗಿದ್ದರೆ ಜನರು ಅದನ್ನು ಗುರುತಿಸುತ್ತಾರೆ. ನಾಯಕನು ತಾನು ಜನಪ್ರಿಯನಾಗಬೇಕೆಂದು ಕಾಣಿಸಿಕೊಳ್ಳುವುದಕ್ಕಿಂತ ಯಾವುದು ಸರಿ ಅದನ್ನು ಮಾಡುತ್ತಾನೆ. ತನ್ನ ಜೊತೆ ಇರುವವರ ಪ್ರತಿಭೆ, ಸಾಮರ್ಥ್ಯಗಳನ್ನು ಹತ್ತಿಕ್ಕುವ ಬದಲು ಅವುಗಳನ್ನು ಸಂಪೂರ್ಣವಾಗಿ ಅರಳಲು ಅವಕಾಶ ಮಾಡಿಕೊಡುತ್ತಾನೆ. ಅವರವರ ಪ್ರತಿಭೆಗೆ ಅನುಗುಣವಾದ ಕೆಲಸಕ್ಕೆ ಅವರನ್ನು ನೇಮಿಸಿಕೊಳ್ಳುವ ಮೂಲಕ ಅವರಿಗೆ ಬೆಳೆಯಲು ಅವಕಾಶ ಮಾಡಿಕೊಡುತ್ತಾನೆ. ಎಲ್ಲರಲ್ಲೂ ದೈಹಿಕ, ಮಾನಸಿಕ ಮತ್ತು ನೈತಿಕವಾದ ಅನೇಕ ಶಕ್ತಿಗಳಿರುತ್ತವೆ. ಆದರೆ ಅದನ್ನು ಅವರೇ ಅರಿತಿರುವುದಿಲ್ಲ. ತನ್ನ ಸಾಮರ್ಥ್ಯಗಳೇನು ಎಂಬುದನ್ನು ಯೋಚಿಸದೆ ಗಾಣದ ಎತ್ತಿನಂತೆ ಮಾಡಿದ ಕೆಲಸವನ್ನೇ ಮಾಡುತ್ತಿರುತ್ತಾರೆ.
ಈ ಬಗ್ಗೆ ಸುಂದರವಾದೊoದು ಕಥೆಯಿದೆ. ಹಿಂದೊಮ್ಮೆ ಭೂಮಿ ಮೇಲಿರುವವರಿಗೆಲ್ಲ ದೇವತೆಗಳ ಶಕ್ತಿಯಿತ್ತಂತೆ. ಅವರದನ್ನು ದುರ್ಬಳಕೆ ಮಾಡಿದರೆಂದು ಬ್ರಹ್ಮದೇವ ಅವರೆಲ್ಲರ ಶಕ್ತಿಯನ್ನು ಕಿತ್ತುಕೊಂಡು ಅವರ ದೈವತ್ವವನ್ನು ಅಡಗಿಸಿಡಲು ಚಿಂತಿಸುತ್ತಾನೆ. ಆದರೆ ಸಮುದ್ರದ ಆಳದಲ್ಲಿ, ಎತ್ತರದ ಪರ್ವತದಲ್ಲಿ ಹೀಗೆ ಭೂಮಿಯ ಮೇಲೆ ಎಲ್ಲಿಟ್ಟರು ಒಂದಲ್ಲ ಒಂದು ದಿನ ಅವರು ಅದನ್ನು ಕೈವಶ ಮಾಡಿಕೊಳ್ಳುತ್ತಾರೆಂದು ಚಿಂತಿಸಿ ಕೊನೆಗೆ ಎಲ್ಲರ ಅಭಿಪ್ರಾಯದಂತೆ ಈ ದೈವತ್ವವನ್ನು ಬಚ್ಚಿಡಲು ಅತ್ಯುತ್ತಮ ಜಾಗ ಮಾನವನೊಳಗೇ ಎಂದು ತೀರ್ಮಾನಿಸಿ ಅಲ್ಲಿ ಬಚ್ಚಿಡುತ್ತಾನೆ. ಇಂದಿಗೂ ಜನ ತಮ್ಮಲ್ಲಿರುವ ಚೈತನ್ಯ, ಸಾಮರ್ಥ್ಯವನ್ನು ಎಲ್ಲೆಡೆ ಹುಡುಕುತ್ತಾರಲ್ಲದೆ ತಮ್ಮೊಳಗೆ ಹುಡುಕುವುದಿಲ್ಲ. ಆದರೆ ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರ ಸಾಮರ್ಥ್ಯದ ಪರಿಚಯವನ್ನು ಮಾಡಿಸುತ್ತಾನೆ. ನಾಯಕತ್ವ ಎನ್ನುವುದು ಅದೊಂದು ಸ್ಥಾನ, ಬಿರುದಲ್ಲ. ಓರ್ವ ಕಸ ಗುಡಿಸುವವ, ಗೇಟ್‌ಕೀಪರ್, ಚಾಲಕ ಸಹ ನಾಯಕತ್ವದ ಗುಣವನ್ನು ಅಭಿವ್ಯಕ್ತಪಡಿಸಬಹುದು. ನಾಯಕತ್ವ ಎನ್ನುವುದು ತಲೆಯಿಂದಲ್ಲ, ಹೃದಯದಿಂದ ಆರಂಭವಾಗಬೇಕು. ಟೀಂ ವರ್ಕ್ ಮತ್ತು ಒಳ್ಳೆಯ ನಾಯಕತ್ವವಿದ್ದಾಗ ಕೆಲಸಕ್ಕೆ ಬಲ ಬರುತ್ತದೆ. ಯಾವುದೇ ಕೆಲಸದಲ್ಲಿ ವ್ಯಕ್ತಿ ಮತ್ತು ಉದ್ದೇಶ ಎರಡೂ ಅತಿ ಮುಖ್ಯವಾದದ್ದು. ನಾಯಕನಿಗೆ ಮಾನಸಿಕ ದೃಢತೆ ಇದ್ದಾಗ ಆತ ತನ್ನ ಕೈ ಕೆಳಗೆ ಬರಿಯ ಸಾಮಾನ್ಯ ಕೆಲಸಗಾರರನ್ನಷ್ಟೇ ಸೃಷ್ಟಿಸಲಾರ. ಬದಲಾಗಿ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಬದ್ಧತೆ ಮತ್ತು ಪ್ರಬುದ್ಧತೆಯನ್ನು ತೋರಿಸುವಂತೆ ಮಾಡಬಲ್ಲ.
ಕೊರೊನಾ ಸಂದರ್ಭ ‘ಕೋ ವ್ಯಾಕ್ಸಿನ್’ ಚುಚ್ಚುಮದ್ದನ್ನು ತಯಾರಿಸಿ ಇಡೀ ದೇಶಕ್ಕೆ ವಿತರಿಸಿದ ‘ಭಾರತ್ ಬಯೋಟೆಕ್ ಕಂಪನಿ’ಯ ವಿಜ್ಞಾನಿಯೊಬ್ಬರು ಹೇಳುತ್ತಾರೆ; ‘ನಮ್ಮ ವಿರೋಧಿಗಳು ಇತರ ಕಂಪನಿಗಳಲ್ಲ, ಕಾಯಿಲೆಗಳು.’ ಯಾವಾಗ ನಾವು ಕೋ ವ್ಯಾಕ್ಸಿನ್ ಔಷಧಿ ಬಗ್ಗೆ ಪ್ರಚಾರ ಆರಂಭ ಮಾಡಿದೆವೋ ಮತ್ತೆ ಹಿಂದಿರುಗಿ ನೋಡಲಿಲ್ಲ. ಹಾಗೇ ಬೇರೆ ಕಂಪನಿಗಳಿಗೆ ಬೇರೆ ಬೇರೆ ಉದ್ದೇಶಗಳಿರುತ್ತವೆ. ಹಣ ಮುಖ್ಯವಾಗದೆ ಜನ ಮುಖ್ಯವಾದಾಗ ಹೆಚ್ಚಿನ ಯಶಸ್ಸು, ಕೀರ್ತಿ ಸಾಧ್ಯ. ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಬಗ್ಗೆ ಹೇಳುವುದಾದರೆ ನಮ್ಮ ಸ್ಪರ್ಧೆ ಬೇರೆ ಬೇರೆ ಸ್ವಸಹಾಯ ಸಂಘ ಅಥವಾ ಸ್ವಯಂ ಸೇವಾ ಸಂಸ್ಥೆಗಳ ಜೊತೆಗಲ್ಲ. ಬದಲಾಗಿ ಬಡತನದ ಬಗ್ಗೆ ಎನ್ನುವ ವಿಚಾರ ನೆನಪಿಡಬೇಕಾದ ಸಂಗತಿ. ನಮ್ಮ ವಿರೋಧಿಗಳು ಬಡತನ, ಅಜ್ಞಾನ, ಕುಡಿತ, ಅಂಧಶ್ರದ್ಧೆ ಇತ್ಯಾದಿಗಳು. ನಾವು ಹೋರಾಡಬೇಕಾಗಿರುವುದು ಅವುಗಳ ವಿರುದ್ಧ. ಈ ಹೋರಾಟದಲ್ಲಿ ನಮಗೂ ಸ್ವಲ್ಪ ಸಂತೋಷ, ಕೀರ್ತಿ, ಮನ್ನಣೆಗಳೆಂಬ ಸುಗಂಧ ಸಿಂಚನ ದೊರೆತರೆ ಅದಕ್ಕಿಂತ ಇನ್ನೇನು ಬೇಕು!
ನಮ್ಮ ಉತ್ತಮ ವ್ಯಕ್ತಿತ್ವದ ಗುಟ್ಟಾಗಿರುವ ಸಹೃದಯತೆ, ನಾಯಕತ್ವ, ಪ್ರೀತಿ, ಕರುಣೆ, ಬದ್ಧತೆ ಮುಂತಾದ ಗುಣಗಳು ಎಲ್ಲೆಡೆ ಹೂವಿನ ಪರಿಮಳದಂತೆ ಪಸರಿಸಿದಾಗ ಅದು ನಮ್ಮ ಸುತ್ತಮುತ್ತಲಿರುವವರಿಗೆ ಪ್ರೇರಣೆಯಾಗಬಲ್ಲದು. ಆದ್ದರಿಂದ ನಮ್ಮ ವ್ಯಕ್ತಿತ್ವವನ್ನು ಪರಿಮಳಿಸುವಂತೆ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸೋಣ.

Facebook
Twitter
WhatsApp
LinkedIn
Telegram