ಸ್ವಾವಲಂಬನೆಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಜನರ ಜೀವನದಲ್ಲಿ ಹೇಗೆಲ್ಲಾ ಪರಿವರ್ತನೆಗಳು ‘ಸ್ವಸಹಾಯ ಸಂಘ’ಗಳ ಮೂಲಕ ಉಂಟಾಗಿದೆ ಎಂದು ವಿವರಿಸಬೇಕಾಗಿದೆ. ಸ್ವಸಹಾಯ ಚಿಂತನೆಯ ತತ್ವದ ಅಡಿಯಲ್ಲಿ ಹತ್ತಾರು ಕೈಗಳು ಒಟ್ಟಿಗೆ ಸೇರಿ, ಸಮೂಹ ಶಕ್ತಿಯಾಗಿ ಪರಸ್ಪರ ಅಭಿವೃದ್ಧಿ ಹೊಂದುವ ಉದ್ದೇಶಕ್ಕಾಗಿ ಸ್ವಸಹಾಯ ಸಂಘದ ಚಳುವಳಿಗೆ ಪೂಜ್ಯ ಶ್ರೀ ಹೆಗ್ಗಡೆಯವರು ಚಾಲನೆಯಿತ್ತರು. 5 ರಿಂದ 10 ಸದಸ್ಯರಿರುವ ರೈತಾಪಿ ವರ್ಗದ ಜನರನ್ನು ಸೇರಿಸಿ ‘ಪ್ರಗತಿಬಂಧು ಸಂಘ’ಗಳಾಗಿ ಹಾಗೂ 10 ರಿಂದ 20 ಇತರೆ ಎಲ್ಲಾ ವರ್ಗದ ಹಿನ್ನೆಲೆಯ ವ್ಯಕ್ತಿಗಳಿಂದ ‘ಸ್ವಸಹಾಯ ಸಂಘ’ಗಳನ್ನು ರಚಿಸಲಾಯಿತು. ಈ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ, ಸಾಮಾಜಿಕ ಪರಿವರ್ತನೆ ಹೊಂದಬೇಕಾಗಿದ್ದಲ್ಲಿ ಸಂಘಗಳ ಸುಸ್ಥಿರತೆ ಹಾಗೂ ಪ್ರಬುದ್ಧತೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಸಲುವಾಗಿ ಸಂಘಗಳನ್ನು ರಚಿಸಿದ ಪ್ರಾರಂಭದಿಂದಲೇ ಈ ಕೆಳಗಿನ 6 ತರಬೇತಿಗಳನ್ನು ನೀಡಲಾಗುತ್ತದೆ.
1. ಸ್ವಸಹಾಯ ಸಂಘಗಳ ಸಭಾ ನಡವಳಿಕೆ ಮತ್ತು ಶ್ರಮ ವಿನಿಮಯ.
2. ಸ್ವಸಹಾಯ ಸಂಘದ ಉಳಿತಾಯ ಮತ್ತು ದಾಖಲಾತಿ ನಿರ್ವಹಣಾ ತರಬೇತಿ.
3. ಸ್ವಸಹಾಯ ಸಂಘಗಳ ಹಿಡುವಳಿ ಯೋಜನೆ ತರಬೇತಿ.
4. ಸ್ವಸಹಾಯ ಸಂಘದ ನಾಯಕತ್ವ.
5. ಸ್ವಸಹಾಯ ಸಂಘದಲ್ಲಿ ಸೇವಾ ಶುಲ್ಕ ನಿಗದಿಗೊಳಿಸುವಿಕೆ.
6. ಸ್ವಸಹಾಯ ಸಂಘದ ಪ್ರಗತಿನಿಧಿ ಬೇಡಿಕೆ ಹಾಗೂ ಅರ್ಜಿ ತಯಾರಿ.
1. ಸ್ವಸಹಾಯ ಸಂಘಗಳ ಸಭಾ ನಡವಳಿಕೆ/ಶ್ರಮ ವಿನಿಮಯ : ಈ ತರಬೇತಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ವೃತ್ತಾಕಾರದಲ್ಲಿ ಎಲ್ಲಾ ಸದಸ್ಯರು ಕುಳಿತುಕೊಂಡು ಹೇಗೆ ವಾರದ ಸಭೆ ನಡೆಸಬೇಕೆಂದು ವಿಸ್ತ್ರತವಾಗಿ ತರಬೇತಿ ನೀಡಲಾಗುತ್ತದೆ. ಸಭೆಯ ಪ್ರಾರಂಭದಲ್ಲಿ ಧೈಯಗೀತೆಯನ್ನು ಹಾಡುವುದು, ಅಧ್ಯಕ್ಷರ ಆಯ್ಕೆ, ಸ್ವಾಗತ ಭಾಷಣಗಳನ್ನೆಲ್ಲಾ ಹೇಗೆ ಮಾಡಬೇಕೆಂಬುದನ್ನು ಕಲಿಸಲಾಗುತ್ತದೆ. ಸಭೆಯಲ್ಲಿ ಯಾವೆಲ್ಲಾ ವಿಷಯಗಳನ್ನು ಚರ್ಚಿಸಬೇಕು, ಅಧ್ಯಕ್ಷರ ಭಾಷಣ, ವಂದನಾರ್ಪಣೆಗಳನ್ನೆಲ್ಲಾ ಹೇಗೆ ಮಾಡಬೇಕು ಹಾಗೂ ಎಲ್ಲಾ ವಿಚಾರಗಳನ್ನು ನಿರ್ಣಯ ಪುಸ್ತಕದಲ್ಲಿ ಹೇಗೆ ಬರೆಯಬೇಕೆನ್ನುವುದನ್ನು ತಿಳಿಸಲಾಗುತ್ತದೆ. ಇನ್ನು ಪ್ರಗತಿಬಂಧು ಗುಂಪುಗಳಿಗೆ ಇವುಗಳ ಜೊತೆಯಲ್ಲಿ ವಾರದ ಶ್ರಮ ವಿನಿಮಯವನ್ನು ವಿಶೇಷವಾಗಿ ತಿಳಿಸಲಾಗುತ್ತದೆ. ಇದು ಸಂಘದ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿ ಸರದಿಯಂತೆ ಯಾವುದಾದರು ಒಬ್ಬ ಸದಸ್ಯರ ಕೃಷಿ ಕೆಲಸದಲ್ಲಿ ಉಚಿತವಾಗಿ ಶ್ರಮ ವಿನಿಯೋಗಿಸುವ ಅದ್ಭುತ ವ್ಯವಸ್ಥೆಯಾಗಿದೆ. ಇದರಿಂದಾಗಿ ಸಂಘದ ಸದಸ್ಯರು ಯಾವುದೇ ಖರ್ಚಿಲ್ಲದೆ ಸುಲಭವಾಗಿ ತಮ್ಮ – ತಮ್ಮ ಕೃಷಿಯನ್ನು ಪರಸ್ಪರ ಹೇಗೆ ಅಭಿವೃದ್ಧಿ ಪಡಿಸಬೇಕೆನ್ನುವುದನ್ನು ವಿಸ್ತೃತವಾಗಿ ವಿವರಿಸಿ ತರಬೇತಿ ನೀಡಲಾಗುತ್ತಿದೆ. ಪೂಜ್ಯ ಶ್ರೀ ಹೆಗ್ಗಡೆಯವರ ಈ ಅದ್ಭುತ ಚಿಂತನೆಯಿAದ ಬಡ ರೈತರು ತಮ್ಮ ಹಡಿಲು ಬಿಟ್ಟ ಭೂಮಿಯಲ್ಲಿ ಕೃಷಿ ಮಾಡಿ ಇಂದು ಸಮೃದ್ಧವಾದ ಫಲವನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಕೆಲವು ತಾಂತ್ರಿಕ ತರಬೇತಿಗಳು, ಅಧ್ಯಯನ ಪ್ರವಾಸ, ರೈತರಿಗಾಗಿ ಸರ್ಕಾರದಿಂದ ಇರುವ ಯೋಜನೆಗಳು ಹಾಗೂ ಪೂಜ್ಯರು ನೀಡುತ್ತಿರುವ ಅನುದಾನದ ಬಗ್ಗೆ ವಿಸ್ತ್ರತವಾಗಿ ತಿಳಿಸಲಾಗುತ್ತದೆ.
1. ಸ್ವಸಹಾಯ ಸಂಘದ ಉಳಿತಾಯ ಮತ್ತು ದಾಖಲಾತಿ ನಿರ್ವಹಣಾ ತರಬೇತಿ : ಆದಾಯ ಸಣ್ಣದಿರಲಿ ದೊಡ್ಡದಿರಲಿ ಭವಿಷ್ಯದ ಭದ್ರತೆಗಾಗಿ ಒಂದಿಷ್ಟು ಉಳಿತಾಯವನ್ನು ಹೇಗೆ ಮಾಡಬೇಕೆನ್ನುವ ಅಭ್ಯಾಸವನ್ನು ಇಲ್ಲಿ ಕಲಿಸಲಾಗುತ್ತದೆ. ವಾರದಲ್ಲಿ ರೂ.10 20, ಅಥವಾ ರೂ. 50 ಉಳಿತಾಯದೊಂದಿಗೆ ಸದಸ್ಯರ ಹಾಗೂ ಸಂಘಗಳಿಗಾಗುವ ಪ್ರಯೋಜನಗಳು ಹಾಗೂ ಭದ್ರತೆಯ ಬಗ್ಗೆ ತಿಳಿಸಲಾಗುತ್ತದೆ. ಸದಸ್ಯರ ಉಳಿತಾಯ ಸಂಘದ ಆಂತರಿಕ ಸಾಲವಾಗಿ ಸದಸ್ಯರಿಗೆ ಹೇಗೆ ಲಾಭ ತಂದುಕೊಡುತ್ತದೆ ಎನ್ನುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಲಾಗುತ್ತದೆ. ಉಳಿತಾಯದ ಲೆಕ್ಕಾಚಾರಗಳು, ದಾಖಲೀಕರಣ ಮಾಡುವುದು, ಜಮೆ ಮಾಡುವುದು ಹಾಗೂ ಚಲನ್‌ಗಳನ್ನು ನಿರ್ಣಯ ಪುಸ್ತಕದಲ್ಲಿ ಇಟ್ಟುಕೊಳ್ಳುವುದು ಹೀಗೆ ಎಲ್ಲಾ ವಿಚಾರಗಳ ಬಗ್ಗೆ ದಾಖಲಾತಿ ನಿರ್ವಹಣೆಯಲ್ಲಿ ವಿಸ್ತ್ರತ ತರಬೇತಿ ನೀಡಲಾಗುವುದು. ಸಂಘಕ್ಕೆ ನಿರ್ಣಯ ಪುಸ್ತಕ, ಫೈಲ್‌ಗಳು ಹಾಗೂ ಸಂಘಕ್ಕೆ ಸಂಬAಧಪಟ್ಟ ಎಲ್ಲಾ ದಾಖಲೆಗಳ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ ನೀಡಲಾಗುವುದು.
1. ಸ್ವಸಹಾಯ ಸಂಘ ಹಿಡುವಳಿ ಯೋಜನೆ : ಹಿಡುವಳಿ ಯೋಜನೆಯ ಪ್ರಕಾರ ಸಂಘದ ಪ್ರತಿಯೊಬ್ಬ ಸದಸ್ಯನು ಮುಂದಿನ ಒಂದು ವರ್ಷದಲ್ಲಿ ತಾನು ಯಾವೆಲ್ಲಾ ಪ್ರಗತಿಪರ ಚಟುವಟಿಕೆಗಳನ್ನು ಮಾಡಬಹುದು. ಚಟುವಟಿಕೆಗಳನ್ನು ಕೈಗೊಳ್ಳಲು ಎಷ್ಟು ಬಂಡವಾಳ, ಎಷ್ಟು ಸಾಲ ಬೇಕಾಗಬಹುದು ಎಂದು ಮುಂಗಡವಾಗಿ ಲೆಕ್ಕಚಾರ ಹಾಕಿ ಯೋಜಿತ ತಯಾರಿಸುವುದಾಗಿದೆ. ಈ ಹಿಡುವಳಿ ಯೋಜನೆ ಪ್ರತಿ ಸದಸ್ಯರಿಗೆ ಅಭಿವೃದ್ಧಿಯ ಮಾರ್ಗಸೂಚಿ ಆಗಿರುವುದಲ್ಲದೇ, ಉತ್ಸುಕತೆಯಿಂದ ವರ್ಷದಿಂದ ವರ್ಷಕ್ಕೆ ಒಂದಿಷ್ಟು ಸಾಧನೆ ಮಾಡಲು ಸ್ಫೂರ್ತಿ ನೀಡುವ ಒಂದು ಕಿರು ಬಜೆಟ್ ಆಗಿದೆ. ಈ ‘ಹಿಡುವಳಿ ಯೋಜನೆ’ಯನ್ನು ಹೇಗೆ ತಯಾರಿಸಬೇಕು. ಯಾವೆಲ್ಲಾ ಯೋಜನೆಗಳು ಸೂಕ್ತವಾಗಿರುತ್ತದೆ. ಬಂಡವಾಳ ಹಾಗೂ ಸಾಲದ ಅಗತ್ಯತೆಯ ಲೆಕ್ಕಾಚಾರ ಹೇಗೆ? ಯಾವ ಚಟುವಟಿಕೆಗಳು ಹೇಗೆ ಲಾಭದಾಯಕವಾಗಿರುತ್ತದೆ ಹಾಗೂ ಇತ್ಯಾದಿ ಎಲ್ಲಾ ವಿಚಾರಗಳನ್ನು ಪ್ರಾತ್ಯಕ್ಷಿಕೆಗಳೊಂದಿಗೆ ತರಬೇತಿ ನೀಡಲಾಗುವುದು. (ಮುಂದುವರಿಯುವುದು….)

Facebook
Twitter
WhatsApp
LinkedIn
Telegram