ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ

‘ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು’ ಎನ್ನುವ ವಿಷಯದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಶ್ರಮ ವಿನಿಮಯದ ಮೂಲಕ ಅವರವರ ಭೂಮಿಯಲ್ಲಿ ತಮ್ಮ ಸಂಘದ ಸದಸ್ಯರು ಉಚಿತವಾಗಿ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ತಮ್ಮ ಕೃಷಿ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುವುದನ್ನು ವಿವರವಾಗಿ ತಿಳಿದುಕೊಂಡಿದ್ದೆವು. ಸಾಮಾನ್ಯವಾಗಿ ರೈತರೇ ಸದಸ್ಯರಾಗಿರುವ ಈ ಪ್ರಗತಿಬಂಧು ಸಂಘಗಳಿಗೆ ಅವರ ಕೃಷಿ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಪೂಜ್ಯರು ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಆನೇಕ ಕಾರ್ಯಕ್ರಮಗಳ ಮೂಲಕ ಈ ಕೆಳಕಾಣಿಸಿದ ವಿಶೇಷ ಸೌಲಭ್ಯಗಳನ್ನು ಯೋಜನೆಯ ಕೃಷಿಕ ಸದಸ್ಯರಿಗೆ ಪ್ರಗತಿಬಂಧು ಸಂಘಗಳ ಮೂಲಕ ನೀಡಲಾಗುತ್ತಿದೆ.
ಸದಸ್ಯರಿಗೆ ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ತಾಂತ್ರಿಕ ಮಾಹಿತಿಗಳನ್ನು ನೀಡಲಾಗುತ್ತದೆ. ಹಾಗೆಯೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ಪ್ರಗತಿನಿಧಿ ವ್ಯವಸ್ಥೆಯೂ ಬ್ಯಾಂಕಿನಿಂದ ನೇರವಾಗಿ ದೊರೆಯುತ್ತದೆ. ದೀರ್ಘಾವಧಿ ಬೆಳೆಗಳಾದ ತೆಂಗು, ಅಡಿಕೆ, ಗೇರು, ಬಾಳೆ, ಕಾಳುಮೆಣಸು ಇತ್ಯಾದಿ ಬೆಳೆಗಳಿಗೆ ಸೂಕ್ತವಾದ ತಾಂತ್ರಿಕ ಮಾಹಿತಿ ಹಾಗೂ ಅಗತ್ಯ ತರಬೇತಿಗಳನ್ನು ನೀಡಲಾಗುತ್ತದೆ. ಹಾಗೆಯೇ ಅಲ್ಪಾವಧಿ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಸಿರಿಧಾನ್ಯ, ಹತ್ತಿ, ಕಬ್ಬು, ಈರುಳ್ಳಿ, ಗೆಡ್ಡೆಗೆಣಸು ಹಾಗೂ ಇತರ ತರಕಾರಿ ಮತ್ತು ಪುಷ್ಪ ಕೃಷಿಗಳಿಗೂ ಸೂಕ್ತವಾದ ತಾಂತ್ರಿಕ ಮಾಹಿತಿ ಮತ್ತು ತರಬೇತಿಗಳನ್ನು ನೀಡಲಾಗುತ್ತದೆ. ಪುಷ್ಪ ಕೃಷಿಗೆ ವಿಶೇಷವಾದ ಪ್ರೇರಣೆ, ಪ್ರೋತ್ಸಾಹವನ್ನು ಯೋಜನೆಯು ನೀಡುತ್ತಾ ಬಂದಿದೆ. ಆನೇಕ ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲ್ಲಿಗೆ ಕೃಷಿ ಕೈಗೊಳ್ಳಲು ಎಲ್ಲಾ ರೀತಿಯ ಸೌಲಭ್ಯ ಹಾಗೂ ಸಹಕಾರ ನೀಡಿದ ಫಲಶ್ರುತಿಯಾಗಿ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಲ್ಲಿಗೆಯು ಪ್ರಸಿದ್ಧವಾಗಿದೆ. ಸಾವಿರಾರು ಜನರಿಗೆ ಮಲ್ಲಿಗೆ ಕೃಷಿ ವ್ಯಾಪಾರಕ್ಕೂ ಅವಕಾಶ ನೀಡಿದೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮೂಲಭೂತ ಸೌಕರ್ಯಗಳಾದ ಕೃಷಿ ಹೊಂಡ, ಕೊಳವೆ ಬಾವಿ, ಬಾವಿ ರಚನೆ ಮುಂತಾದ ನೀರಾವರಿ ಸೌಲಭ್ಯಗಳಿಗೂ ಆರ್ಥಿಕ ಹಾಗೂ ತಾಂತ್ರಿಕ ಸಹಕಾರಗಳನ್ನು ನೀಡಲಾಗುತ್ತದೆ. ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹವನ್ನು ಯೋಜನೆಯ ಮೂಲಕ ನೀಡಲಾಗುತ್ತದೆ. ಯೋಜನೆಯಲ್ಲಿರುವ ಸದಸ್ಯರಿಗೆ ಹೈನುಗಾರಿಕೆಯನ್ನು ಕೈಗೊಳ್ಳಲು ನಮ್ಮ ಸಂಸ್ಥೆಯಿಂದ ಅಥವಾ ಸಂಬಂಧಪಟ್ಟ ಇಲಾಖೆಗಳಿಂದ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಯೋಜನೆಯ ಬಿ.ಸಿ. ಸೇವೆಯ ಪ್ರಗತಿನಿಧಿ ವ್ಯವಸ್ಥೆಯಿಂದಾಗಿ ಆತೀ ಕಡಿಮೆ ಬಡ್ಡಿದರದ ಸಾಲ ಸೌಲಭ್ಯದಿಂದ ಸುಮಾರು 46000 ಮಂದಿ ರೈತರು ಹೈನುಗಾರಿಕೆಯನ್ನು ಕೈಗೊಳ್ಳುತ್ತಿದ್ದಾರೆ. ಪಶು ಸಂಗೋಪನೆಗೂ ವಿಶೇಷವಾದ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಸುಮಾರು 2,55,೦೦೦ಕ್ಕೂ ಮಿಕ್ಕಿದ ಜನರು ಯೋಜನೆಯಿಂದಾಗಿ ಪಶು ಸಂಗೋಪನೆಯನ್ನು ಕೈಗೊಳ್ಳುವಂತಾಗಿದೆ. ಎರೆಗೊಬ್ಬರ, ಗೋಬರ್ ಗ್ಯಾಸ್, ಕಾಂಪೋಸ್ಟ್ ತಯಾರಿಯ ಬಗ್ಗೆಯೂ ಸದಸ್ಯರಿಗೆ ತರಬೇತಿಗಳನ್ನು ನೀಡುವ ಮೂಲಕ ಸಾವಯವ ಕೃಷಿಗೆ ಪ್ರೋತ್ಸಾಹವನ್ನು ನೀಡಲಾಗಿದೆ. ಸುಮಾರು10 ವರ್ಷಗಳ ಹಿಂದಿನಿಂದಲೇ ಸಿರಿಧಾನ್ಯ ಉತ್ಪಾದನೆಗೆ ಪೂಜ್ಯರು ವಿಶೇಷ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ರೈತ ಉತ್ಪಾದಕ ಕಂಪೆನಿಗಳ ಮೂಲಕ ಸಿರಿಧಾನ್ಯ ಕೃಷಿಗೆ ವಿಶೇಷ ಪ್ರೇರಣೆ ಹಾಗೂ ಪ್ರೋತ್ಸಾಹವನ್ನು ನೀಡುವ ಮೂಲಕ ಬಹಳ ದೊಡ್ಡ ಪ್ರಮಾಣದ ಸಿರಿಧಾನ್ಯ ಉತ್ಪಾದನೆಗೆ ಯೋಜನೆಯು ಮಹತ್ತರವಾದ ಕೊಡುಗೆಯನ್ನು ನೀಡಿದೆ. ಸಿಎಸ್‌ಸಿ ಮೂಲಕ ‘ಯಾಂತ್ರೀಕೃತ ಕೃಷಿ’ ಹಾಗೂ ‘ಯಂತ್ರಶ್ರೀ’ ಯೋಜನೆಯ ಬಗ್ಗೆ ಪ್ರತ್ಯೇಕವಾಗಿಯೇ ತಿಳಿಸುವಷ್ಟು ವಿಷಯವಿದೆ. ‘ಕಬ್ಬಿನ ಸುಸ್ಥಿರ ಬೇಸಾಯ ಯೋಜನೆ’ ಎನ್ನುವ ವಿಶಿಷ್ಟವಾದ ಕಾರ್ಯಕ್ರಮದ ಮೂಲಕ ಕಬ್ಬಿನ ಬೇಸಾಯಕ್ಕೆ ಪ್ರೋತ್ಸಾಹವನ್ನು ನೀಡಲಾಗಿದೆ. ಸೂಕ್ತ ರೈತರ ಆಯ್ಕೆ ಮಾಡಿ ತಾಲೂಕಿಗೆ ಒಂದರಂತೆ ನಾಲ್ಕು ವಿಶೇಷ ತರಬೇತಿಗಳನ್ನು ಆಯೋಜಿಸುವ ಮೂಲಕ ಕಬ್ಬಿನ ಸುಸ್ಥಿರ ಬೇಸಾಯವನ್ನು ಕೈಗೊಳ್ಳಲು ಸಹಾಯ ನೀಡಲಾಗುತ್ತದೆ. ಯೋಜನೆಯಿಂದ ರೈತರ ಅಧ್ಯಯನ ಪ್ರವಾಸವನ್ನು ತಾಲೂಕಿಗೆ ಎರಡರಂತೆ ಕೈಗೊಳ್ಳುವ ಮೂಲಕ ಮಾದರಿ ಕೃಷಿಯ ಪ್ರಯೋಜನವನ್ನು ರೈತರಿಗೆ ಪರಿಚಯಿಸಲಾಗುತ್ತದೆ. ‘ಕಸಿ ಗೇರು ಗಿಡಗಳ ವಿತರಣೆ’ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಗೇರು ಕೃಷಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ವಿಜಯಲಕ್ಷ್ಮಿ ಪ್ರತಿಷ್ಠಾನದಂತಹ ಸಂಸ್ಥೆಯ ಸಹಕಾರದೊಂದಿಗೆ ಗೇರು ಕೃಷಿ ಕೈಗೊಳ್ಳುವ ರೈತರಿಗೆ ಉಚಿತವಾಗಿ ಗೇರು ಗಿಡಗಳನ್ನು ನೀಡಲಾಗುತ್ತದೆ. ಕಳೆದ ೯ ವರ್ಷಗಳಿಂದ ಸುಮಾರು 10 ಲಕ್ಷಕ್ಕೂ ಮಿಕ್ಕಿದ ಗೇರು ಗಿಡಗಳನ್ನು ಉಚಿತವಾಗಿ ನೀಡಿದ್ದು ಸುಮಾರು 20 ಸಾವಿರ ರೈತರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಪ್ರಗತಿಬಂಧು ಸದಸ್ಯರಲ್ಲದೆ ಮಹಿಳಾ ಸದಸ್ಯರು ಕೂಡಾ ಅನೇಕ ಕೃಷಿ ಚಟುವಟಿಕೆಗಳಲ್ಲಿ ಯೋಜನೆಯಿಂದಾಗಿ ಯಶಸ್ವಿ ಕೃಷಿಕರಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಇಂದು ದೊಡ್ಡ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ಆನೇಕ ಮಹಿಳಾ ರೈತರು ನಮ್ಮ ಯೋಜನೆಯ ಸದಸ್ಯರಾಗಿದ್ದಾರೆ. ಹಾಗೆಯೇ ಮನೆಯ ಮಹಡಿಯ ಮೇಲೆ ಮಲ್ಲಿಗೆ, ತರಕಾರಿ ಮುಂತಾದ ಕೃಷಿಗಳನ್ನು ಕೈಗೊಂಡು ಗರಿಷ್ಠ ಆದಾಯ ಗಳಿಸುವ ಆಧುನಿಕ ಕೃಷಿಕ ಮಹಿಳೆಯರೂ ಇದ್ದಾರೆ. ಸಂಚಿಕೆಯಲ್ಲಿ ‘ಆಧುನಿಕ ಕೃಷಿ’ ಹಾಗೂ ‘ಯಾಂತ್ರಿಕೃತ ಕೃಷಿ’ಗೆ ಯೋಜನೆಯು ನೀಡಿದ ಕೊಡುಗೆಗಳ ಬಗ್ಗೆ ಮುಂದಿನ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram