ಅಶ್ವಿನಿ ಹೆಚ್.
ತಾನು ಬಯಸಿದಂತೆ ಆಗಲೇಬೇಕು ಎಂಬ ಪಟ್ಟು ಬಿಡದ ಮನೋಭಾವವನ್ನು ಹಠವೆನ್ನುತ್ತಾರೆ. ಇದು ಇತರರ ಅಭಿಪ್ರಾಯ, ಸಲಹೆ ಅಥವಾ ತಾರ್ಕಿಕತೆಯನ್ನು ಕಡೆಗಣಿಸಿ ತಮ್ಮ ನಿರ್ಧಾರಗಳನ್ನೇ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಹೌದು.
ಮಕ್ಕಳಲ್ಲಿ ಹಠಮಾರಿ ವರ್ತನೆ ಕಾಣಿಸಿಕೊಂಡಾಗ ಬಹಳಷ್ಟು ಪೋಷಕರು ಅದನ್ನು ತಲೆನೋವಿನಂತೆ ಕಾಣುತ್ತಾರೆ. ಆದರೆ ನಾವು ಒಮ್ಮೆ ಆಳವಾಗಿ ಚಿಂತಿಸಿದರೆ ಹಠವು ಕೇವಲ ನಕಾರಾತ್ಮಕ ಗುಣವಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇದೇ ಹಠಕ್ಕೆ ಸರಿಯಾದ ಮಾರ್ಗದರ್ಶನ ದೊರೆತರೆ ಮುಂದೊoದು ದಿನ ಜೀವನದಲ್ಲಿ ದೃಢ ಸಂಕಲ್ಪ, ಪರಿಶ್ರಮ ಹಾಗೂ ಆತ್ಮವಿಶ್ವಾಸಕ್ಕೂ ಕಾರಣವಾಗಬಲ್ಲದು. ಹಠ ಮಾಡುವವರನ್ನು ಅಣಕಿಸುವುದು, ಮತ್ತೆ ಮತ್ತೆ ಗದರಿಸುವ ಬದಲು ಮಕ್ಕಳ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸೂಕ್ತ ದಾರಿಯನ್ನು ತೋರಿಸುವುದು ಪೋಷಕರ ನೈಜ ಹೊಣೆಗಾರಿಕೆಯೂ ಹೌದು. ಹಠಮಾರಿ ಮಗುವು ಭವಿಷ್ಯದಲ್ಲಿ ಒಬ್ಬ ಒಳ್ಳೆಯ ನಾಯಕ, ಶ್ರಮಜೀವಿ ಅಥವಾ ಸೃಜನಶೀಲ ವ್ಯಕ್ತಿತ್ವ ಹೊಂದುವ ಸಾಧ್ಯತೆಯೂ ಇದೆ. ಹೆತ್ತವರು ತಮ್ಮ ಸಹನೆ, ಪ್ರೀತಿ ಮತ್ತು ಸಮತೋಲಿತ ಪೋಷಕತ್ವದ ನೋಟದಿಂದ ಸಕಾರಾತ್ಮಕ ಹಠವನ್ನು ಮಕ್ಕಳಲ್ಲಿ ಬೆಳೆಸಿದ್ದೇ ಆದಲ್ಲಿ ಅದು ಮುಂದೊAದು ದಿನ ಭವಿಷ್ಯ ಕಟ್ಟುವ ಬಲವಾದ ಶಕ್ತಿಯಾಗುತ್ತದೆ.
ಮಕ್ಕಳಲ್ಲಿ ಹಠಮಾರಿತನದ ಕಾರಣಗಳು
ವಯೋಸಹಜ ಬೆಳವಣಿಗೆ : ಮಕ್ಕಳ ಬೆಳವಣಿಗೆಯ ಹಂತಗಳಲ್ಲಿ ಸ್ವಾತಂತ್ರö್ಯದ ಅರಿವು ಹೆಚ್ಚಾಗುತ್ತದೆ. ಉದಾಹರಣೆಗೆ ಹದಿಹರೆಯದ ಸಮಯದಲ್ಲಿ ತಮ್ಮ ನಿರ್ಧಾರಗಳಿಗೆ, ಆಲೋಚನೆಗಳಿಗೆ ಮಾನ್ಯತೆ ದೊರಕಬೇಕೆಂದು ಬಯಸುತ್ತಾರೆ. ತಮ್ಮದೆ ಆದ ವ್ಯಕ್ತಿತ್ವದ ರಚನೆಯಲ್ಲಿ ತೊಡಗುತ್ತಾರೆ. ಇದಕ್ಕೆ ವಿರುದ್ಧವಾದ ಸಂದರ್ಭವಿದ್ದಾಗ ತಾನು ತನ್ನದೆ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಅವರನ್ನು ಹಠಮಾರಿಯನ್ನಾಗಿಸುತ್ತದೆ.
ಗಮನ ಸೆಳೆಯುವ ಅವಶ್ಯಕತೆ : ಕೆಲವೊಂದು ಬಾರಿ ಮಕ್ಕಳು ರಕ್ಷಕರ ಮತ್ತು ಶಿಕ್ಷಕರ ಗಮನ ಸೆಳೆಯುವ ಪ್ರಯತ್ನದಲ್ಲಿ ಹಠ ಮಾಡುವುದನ್ನು ಕಾಣಬಹುದು. ಅವರಿಗೆ ಬೇಕಾದ ಮಾನ್ಯತೆ ಮತ್ತು ಪ್ರೀತಿ ಸಿಗದಿದ್ದಾಗ ಹಠ ಪ್ರಯೋಗ ಮತ್ತಷ್ಟು ಹೆಚ್ಚಾಗಬಹುದು.
ವೈಯಕ್ತಿಕ ಸ್ವಭಾವ : ಕೆಲವು ಮಕ್ಕಳು ಸ್ವಭಾವತಃ ಹಠ ಪ್ರವೃತ್ತಿಯನ್ನು ಹೊಂದಿರುತ್ತಾರೆ. ದೃಢ ನಿರ್ಧಾರಗಳು, ಆಳವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಈ ಗುಣವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋದಾಗ ಒಳ್ಳೆಯ ಪ್ರತಿಫಲ ಸಿಗಬಹುದು. ಹಳಿತಪ್ಪಿದ್ದೇ ಆದಲ್ಲಿ ಹಠಮಾರಿತನ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ.
ಮಿತಿ ಮತ್ತು ನಿಯಮಗಳ ಕೊರತೆ : ಮನೆ ಅಥವಾ ಶಾಲೆಯಲ್ಲೇ ಆಗಲಿ ಸ್ಪಷ್ಟ ನಿಯಮಗಳಿಲ್ಲದಿದ್ದರೆ ಮಕ್ಕಳು ಮನ ಬಂದAತೆ ವರ್ತಿಸುತ್ತಾರೆ. ಇದು ಹಠಮಾರಿ ಸ್ವಭಾವ ಬೆಳೆಯುವಂತೆ ಮಾಡುತ್ತದೆ.
ಅತಿಯಾದ ನಿಯಂತ್ರಣ ಮತ್ತು ಮುದ್ದು : ಪೋಷಕರು ತುಂಬಾ ನಿಯಂತ್ರಣ ಹೇರಿದರೆ ಮಕ್ಕಳ ಮನಸ್ಸಿನಲ್ಲಿ ವಿರೋಧದ ಮನೋಭಾವ ಬೆಳೆಯುತ್ತದೆ. ಹಾಗೆ ಅತಿಯಾದ ಮುದ್ದಿನೊಂದಿಗೆ ಮಕ್ಕಳ ಪ್ರತಿಯೊಂದು ಬೇಡಿಕೆಯನ್ನು ತಕ್ಷಣ ಪೂರೈಸಿದರೆ ಅವರಿಗೆ ನಿಯಮಗಳ ಅರಿವು ಮೂಡುವುದಿಲ್ಲ. ಮಕ್ಕಳು ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುವ ಸಲುವಾಗಿ ಹಠವನ್ನು ಆಯುಧವಾಗಿ ಬಳಸಿಕೊಳ್ಳುತ್ತಾರೆ.
ಅನುಕರಣೆ : ಮನೆಯ ಸದಸ್ಯರಲ್ಲಿ ಯಾರಾದರೊಬ್ಬರು ಹಠದ ಸ್ವಭಾವವನ್ನು ಹೊಂದಿದ್ದೇ ಆದಲ್ಲಿ ಮಕ್ಕಳು ಆ ವರ್ತನೆಯನ್ನು ಅನುಕರಿಸುತ್ತಾರೆ.
ಭಾವನಾತ್ಮಕ ಅಸಮಾಧಾನ : ಮಕ್ಕಳಿಗೆ ತಮ್ಮ ಭಾವನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಹೇಳಿಕೊಳ್ಳಲು ಸಾಧ್ಯವಾಗದೆ ಇದ್ದಾಗಲು ಹಠ ಪ್ರವೃತ್ತಿ ಬೆಳೆಯುವುದನ್ನು ಕಾಣಬಹುದು.
ಸಾಮಾಜಿಕ ಪರಿಸರ : ಸ್ನೇಹಿತರ ಗುಂಪು, ಶಾಲಾ ವಾತಾವರಣ ಮತ್ತು ಸಾಮಾಜಿಕ ಒತ್ತಡಗಳು ಮಕ್ಕಳ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ.
ದೈಹಿಕ ಆರೋಗ್ಯ : ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ, ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವಿದ್ದಾಗಲೂ ಹಠ ಸ್ವಭಾವವನ್ನು ಕಾಣಬಹುದು.
ಹಠವಾದದ ಪರಿಣಾಮಗಳು
ವ್ಯಕ್ತಿತ್ವದ ಮೇಲೆ ಪ್ರಭಾವ : ವ್ಯಕ್ತಿಯೊಬ್ಬರಿಗೆ ನಿಯಂತ್ರಣವಿಲ್ಲದ ಹಠವಿದ್ದರೆ ಮುಂದಿನ ದಿನದಲ್ಲಿ ಅದುವೆ ಅವನ ವ್ಯಕ್ತಿತ್ವ ಆಗಬಹುದು. ಇದು ಹಠಮಾರಿ, ಸ್ವಾರ್ಥ ಮನೋಭಾವ ಮತ್ತು ಸಹಕರಿಸದ ವ್ಯಕ್ತಿಯೆಂದು ಹೇಳಿಸಿಕೊಳ್ಳುವುದು ಮಾತ್ರವಲ್ಲದೆ, ಸಾಮಾಜಿಕ ಹೊಂದಾಣಿಕೆಗೆ ತೊಡಕಾಗುತ್ತದೆ. ಹಠಮಾರಿತನದಿಂದಾಗಿ ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನವರ ಜೊತೆ ಹೊಂದಿಕೊಳ್ಳಲು ಸಾಧ್ಯವಾಗದೆ ಒಂಟಿತನಕ್ಕೆ ಒಳಗಾಗಬಹುದು.
ಕುಟುಂಬದ ಒತ್ತಡ : ಮಕ್ಕಳ ಹಠದಿಂದ ಹೆತ್ತವರು ಮಾತ್ರವಲ್ಲದೆ ಕುಟುಂಬದ ಸದಸ್ಯರು ಕೂಡ ತಾಳ್ಮೆ ಕಳೆದುಕೊಳ್ಳುವಂತಾಗುತ್ತದೆ. ಇದು ಸಂಬoಧಗಳನ್ನು ದುರ್ಬಲವಾಗುವಂತೆ ಮಾಡುತ್ತದೆ.
ಶೈಕ್ಷಣಿಕ ವ್ಯತ್ಯಯ : ಕೆಟ್ಟ ಹಠವು ಮಕ್ಕಳ ಗಮನವನ್ನು ಕಸಿದುಕೊಂಡು ಅಧ್ಯಯನದಲ್ಲಿ ಹಿನ್ನಡೆಯಾಗುವಂತೆ ಮಾಡಿಬಿಡುತ್ತದೆ.
ಭಾವನಾತ್ಮಕ ಅಸಮತೋಲನ : ನಿರಂತರ ಹಠವು ಕೋಪ, ಅಸಹನೆ ಮತ್ತು ನಿರಾಶೆಗಳನ್ನು ಹುಟ್ಟಿಸಬಹುದು. ಮಾನಸಿಕ ಘಾಸಿಗೂ ಇದು ಕಾರಣವಾಗುತ್ತದೆ.
ಹಠಮಾರಿ ಮಕ್ಕಳನ್ನು ನಿಭಾಯಿಸುವ ವಿಧಾನಗಳು
ಹಠಮಾರಿ ಮಕ್ಕಳನ್ನು ನಿಭಾಯಿಸುವುದು ಪೋಷಕರಿಗೆ, ಶಿಕ್ಷಕರಿಗೆ ಮತ್ತು ಮಾರ್ಗದರ್ಶಕರಿಗೆ ಸವಾಲಿನ ಸಂಗತಿಯಾಗಿದ್ದರೂ ಕೂಡಾ ಅವರು ತಾಳ್ಮೆ, ನಿರಂತರ ಗಮನದ ಮತ್ತು ಸಹಾನುಭೂತಿಯ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಇಲ್ಲಿ ಮಗುವಿನೊಂದಿಗೆ ಸ್ಪಷ್ಟ ಸಂವಹನ ನಡೆಸುವುದು, ಪರಿಮಿತಿ ನಿರ್ಮಿಸಿ ಆಯ್ಕೆಯನ್ನು ನೀಡುವುದು ಮುಖ್ಯವಾಗುತ್ತದೆ. ಭಾವನೆಯನ್ನು ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳುವುದು, ಹಠ ಸ್ವಭಾವವನ್ನು ರಚನಾತ್ಮಕವಾಗಿ ಬದಲಾವಣೆ ಮಾಡಿ ಮಗುವಿನ ಬೆಳವಣಿಗೆಗೆ ಬೇಕಾದ ವಿಚಾರವಾಗಿಸುವಲ್ಲಿ ಸಹಾಯ ಮಾಡಬೇಕು.
ಹಠದ ಸ್ವಭಾವದ ಮೂಲವನ್ನು ಅರ್ಥಮಾಡಿಕೊಳ್ಳುವುದು : ಹಠಕ್ಕೆ ಕಾರಣ ಹುಡುಕುವುದು ಮುಖ್ಯವಾಗುತ್ತದೆ. ಇದು ಕೆಲವೊಮ್ಮೆ ತಾತ್ಕಾಲಿಕ ಹಂತವಾಗಿರಬಹುದು ಮತ್ತೆ ಕೆಲವೊಮ್ಮೆ ವ್ಯಕ್ತಿತ್ವದ ಒಂದು ಭಾಗವಾಗಿರಬಹುದು. ಮಗು ಯಾವ ಸಂದರ್ಭಗಳಲ್ಲಿ ಹಠ ತೋರಿಸುತ್ತಿದೆ ಎಂಬುದನ್ನು ಗಮನಿಸುವುದು ಮುಖ್ಯ. ಸಕಾರಾತ್ಮಕ ಅಂಶಗಳಿದ್ದರೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಉತ್ತಮ.
ಉತ್ತಮ ಸಂವಹನ ಬೆಳೆಸುವುದು : ಮಗು ಏನನ್ನು ಹೇಳಲು ಬಯಸಿದೆ ಎಂಬುದನ್ನು ಗಮನಕೊಟ್ಟು ಕೇಳುವುದು. ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡುವುದು. ಅವರ ಮಾತುಗಳನ್ನು ಗೌರವಿಸುವುದರ ಜೊತೆಗೆ ತಪ್ಪು ವಿಚಾರಗಳ ಬಗ್ಗೆ ಸಹನೆಯಿಂದ ತಿಳಿ ಹೇಳಿದರೆ ಉತ್ತಮ ಸಂವಾದದೊoದಿಗೆ ಬಾಂಧವ್ಯವನ್ನು ಹೊಂದಬಹುದು. ಮಕ್ಕಳ ಹಠವನ್ನು ಸರಿ ಮಾಡಬಹುದಾಗಿದೆ.
ನಿಯಮ ಮತ್ತು ನಿರೀಕ್ಷೆಯನ್ನು ತಿಳಿಸುವುದು : ಮಕ್ಕಳಿಗೆ ಸ್ಪಷ್ಟವಾದ ನಿಯಮಗಳನ್ನು ಮನೆಯಲ್ಲೆ ರೂಪಿಸುವುದು ಮತ್ತು ಅದರ ಉಲ್ಲಂಘನೆಯ ಪರಿಣಾಮವನ್ನು ತಿಳಿಸುವುದು ಉತ್ತಮ. ಮಕ್ಕಳಿಗೆ ಆಯ್ಕೆಯ ಅವಕಾಶವನ್ನು ಈ ಪರಿಧಿಯಲ್ಲೇ ವಿಧಿಸಬೇಕು. ಇದು ಮಕ್ಕಳ ಸ್ವಾತಂತ್ರö್ಯಕ್ಕೆ ಧಕ್ಕೆ ತರುವುದಿಲ್ಲ. ಮಕ್ಕಳ ಹಠಕ್ಕೆ ಹಿರಿಯರು ವಾದ-ವಿವಾದ ಮಾಡುವ ಬದಲು ಸಣ್ಣ ಪುಟ್ಟ ವಿಚಾರವನ್ನು ಬಿಟ್ಟು ಬಿಡುವುದು ಒಳ್ಳೆಯದು. ಜೊತೆಗೆ ನಿಮ್ಮ ನಿರೀಕ್ಷೆಗಳನ್ನು ಮನದಟ್ಟು ಮಾಡುವ ಅವಶ್ಯಕತೆಯೂ ಇದೆ.
ಸಕಾರಾತ್ಮಕ ಬಲವರ್ಧನೆ : ಮಕ್ಕಳ ಒಳ್ಳೆಯ ಹಠಕ್ಕೆ ಪ್ರಶಂಸೆ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗುತ್ತದೆ. ಮಗು ಅದೇ ಮಾರ್ಗದಲ್ಲಿ ಮುಂದುವರಿಯುತ್ತದೆ. ಕೂಗಾಟ, ಹೊಡೆದಾಟದಿಂದ ಆಗುವ ನಷ್ಟವನ್ನು ಹೇಳುವುದರಿಂದ ಅಂತಹ ಹಠವಾದಿ ಮನಃಸ್ಥಿತಿಯಿಂದ ಹೊರ ಬರಲು ಪ್ರೇರಣೆ ನೀಡಿದಂತಾಗುತ್ತದೆ. ಪ್ರತಿ ಬಾರಿ ತನ್ನ ಹಠ ಸ್ವಭಾವ ತೋರದಿದ್ದಾಗ ನೀಡುವ ಸಕಾರಾತ್ಮಕ ಪ್ರತಿಕ್ರಿಯೆಯೂ ಮಕ್ಕಳು ಒಳ್ಳೆಯ ಗುಣವನ್ನು ಅನುಸರಿಸುವಂತೆ ಮಾಡುತ್ತದೆ.
ಪೋಷಕರು ಮಾದರಿಯಾಗುವುದು : ಪೋಷಕರು ಸ್ವತಃ ಕಠಿಣ ಪರಿಸ್ಥಿತಿಗಳನ್ನು ತಾಳ್ಮೆಯಿಂದ ಎದುರಿಸುತ್ತಿರುವುದನ್ನು ತೋರಿಸಿಕೊಡುವುದು ಉತ್ತಮ. ಮಕ್ಕಳು ಹಿರಿಯರನ್ನು ನೋಡಿ ಕಲಿಯುವುದರಿಂದ ಹೆತ್ತವರ ವರ್ತನೆ ಮಾದರಿ ಆಗುತ್ತದೆ. ಇದು ಹಠ ಮನೋಭಾವದಿಂದ ದೂರವಿರುವಂತೆ ಮಾಡುತ್ತದೆ.
ವೃತ್ತಿಪರರ ಸಹಾಯ : ಪೋಷಕರ ಪ್ರಯತ್ನ ಫಲಕಾರಿಯಾಗದೆ ಇದ್ದಾಗ ಮಕ್ಕಳ ವರ್ತನೆಯನ್ನು ನಿಭಾಯಿಸಲು ಕಷ್ಟವಾದರೆ ಮಕ್ಕಳ ಮನೋವೈದ್ಯರ ಮಾರ್ಗದರ್ಶನವನ್ನು ಪಡೆಯಿರಿ.
ಹಠಮಾರಿತನ ಮಕ್ಕಳಲ್ಲಿ ಸಾಮಾನ್ಯ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದರೆ ಅದು ಮುಂದಿನ ದಿನಗಳಲ್ಲಿ ಗುರಿ ಸಾಧನೆಗೆ ಬೇಕಾದ ಶಕ್ತಿಯಾಗಿ ರೂಪಾಂತರಗೊಳ್ಳಬಲ್ಲದು. ಪೋಷಕರು, ಶಿಕ್ಷಕರು ಹಾಗೂ ಮಾರ್ಗದರ್ಶಿಗಳು ಹಠಕ್ಕೆ ಮೂಲ ಕಾರಣಗಳನ್ನು ಅರಿತುಕೊಂಡರೆ ಮಕ್ಕಳ ವರ್ತನೆಯನ್ನು ಸರಿ ದಾರಿಗೆ ತರಲು ಸಾಧ್ಯವಾಗುತ್ತದೆ.
