ಎಫ್‌ಐಆರ್‌ ಎಂಬ ನಾಣ್ಯದ ಎರಡು ಮುಖಗಳು

ಲಕ್ಷ್ಮೀ ಘಾಟೆ

ಅದೊಂದು ರಾತ್ರಿ, ಸುಮಾರು 10:17ರ ಸಮಯ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮೆಟ್ಟಿಲು ಹತ್ತಿದ ಮಹಿಳೆಯೋರ್ವರು ಸಮೀಪದ ಬಸ್ ನಿಲ್ದಾಣವೊಂದರಲ್ಲಿ ನನ್ನ ಮೇಲೆ ದಾಳಿಯಾಗಿದೆ ಎನ್ನುತ್ತಾರೆ. ಅಲ್ಲಿದ್ದ ಡೆಸ್ಕ್ ಅಧಿಕಾರಿಯೊಬ್ಬರು ಡೈರಿ ತೆಗೆದು ಇವರ ದೂರನ್ನು ದಾಖಲಿಸುತ್ತಾರೆ. ಮುಖ್ಯಾಂಶಗಳನ್ನು ಬರೆದು, ಸ್ಟಾö್ಯಂಪ್ ಮುದ್ರಿಸಿದ ಎಫ್‌ಐಆರ್ ಪ್ರತಿಯನ್ನು ಆಕೆಗೆ ನೀಡುತ್ತಾರೆ. ಸಂತ್ರಸ್ತರಿಗೆ ಈ ಪ್ರತಿ ಒಂದು ಭರವಸೆಯಿದ್ದಂತೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಸಮಾಧಾನ ಭಾವ ಅವರಲ್ಲಿ ಮೂಡುತ್ತದೆ.
ಭಾರತದ ಎಫ್‌ಐಆರ್ ವ್ಯವಸ್ಥೆ ಒಂದು ಸ್ಪಷ್ಟ ನಿಯಮದ ಮೇಲೆ ನಿಂತಿದೆ. ಯಾವುದೇ ಅಪರಾಧ ನಡೆದಿದೆ ಎನ್ನುವುದು ಪೊಲೀಸರ ಗಮನಕ್ಕೆ ಬಂದರೆ ಆ ಕುರಿತು ತಕ್ಷಣ ಎಫ್‌ಐಆರ್ ದಾಖಲಾಗಬೇಕು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೧೫೪ ಇದನ್ನು ಪುಷ್ಟೀಕರಿಸುತ್ತದೆ. ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪೊಲೀಸರು ಎಫ್‌ಐಆರ್ ದಾಖಲಿಸಲು ಪೂರ್ವ ಪರಿಶೀಲನೆ ಕಡ್ಡಾಯವೆನ್ನಬಾರದು ಎಂಬುವುದನ್ನು ಪುನರುಚ್ಚರಿಸಿದೆ.
ನಮ್ಮ ದೇಶದಲ್ಲಿ ಯಾರೇ ಯಾವುದೇ ಅಪರಾಧಕ್ಕೊಳಗಾದಾಗ ಅವರ ಪಾಲಿಗೆ ನ್ಯಾಯದ ಬಾಗಿಲು ತೆರೆಸುವ ಸಮರ್ಥ ಅಸ್ತçವೇ ‘ಪ್ರಥಮ ಮಾಹಿತಿ ವರದಿ (ಎಫ್‌ಐಆರ್)’. ಇದು ಕಣ್ಣಿಗೆ ಕೇವಲ ಒಂದು ಕಾಗದದ ಹಾಳೆಯಂತೆಯೋ, ಆನ್‌ಲೈನ್‌ನಲ್ಲಿ ತುಂಬಿದ ಫಾರ್ಮ್ನಂತೆಯೋ ಕಾಣಬಹುದು. ಆದರೆ ಅದರ ಹಿಂದೆ ಇರುವ ಸಾಮರ್ಥ್ಯ ಅಪಾರ. ಒಮ್ಮೆ ಎಫ್‌ಐಆರ್ ದಾಖಲಾದರೆ ಸಾಕು, ನ್ಯಾಯ ವ್ಯವಸ್ಥೆಯ ಸಂಪೂರ್ಣ ಯಂತ್ರ ಚಲನೆಯಾಗಲೇಬೇಕು.
ಭಾರತದ ಅಪರಾಧ ಪರಿಹಾರ ವ್ಯವಸ್ಥೆಯಲ್ಲಿ ನ್ಯಾಯದ ಅಪೇಕ್ಷೆಯಲ್ಲಿರುವ ಸಂತ್ರಸ್ತರು ಒಂದೆಡೆಯಾದರೆ, ಅಪರಾಧಿ ಎಂದು ಸಾಬೀತಾಗುವವರೆಗೂ ನಿರಾಪರಾಧಿಯೆನಿಸಿಕೊಂಡು ಹೋರಾಡುವ ಆರೋಪಿಗಳು ಇನ್ನೊಂದೆಡೆ ಇದ್ದಾರೆ. ಇವರುಗಳ ನಡುವೆ ಸಮಯ ಮತ್ತು ಸಂಪನ್ಮೂಲಗಳೊಡನೆ ಹೆಣಗಾಡಿಕೊಂಡು, ಒತ್ತಡಗಳ ನಡುವೆ ಕರ್ತವ್ಯ ಪೂರೈಸಲು ಯತ್ನಿಸುವ ಪೊಲೀಸರು. ಹೀಗಿರುವಾಗ ಎಫ್‌ಐಆರ್ ತೆರೆಯುವ ಬಾಗಿಲುಗಳ ಹಿಂದೆ ನ್ಯಾಯದ ಜೊತೆಗೆ ಸಮಸ್ಯೆಗಳ ಮಹಾಪೂರವೇ ಅಡಗಿದೆ ಎಂದರೆ ತಪ್ಪಾಗದು.
ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಪ್ರಕರಣದಲ್ಲಿ ದೂರು ದಾಖಲಾದ ತಕ್ಷಣ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ತೆರಳಿ ಎಲ್ಲವನ್ನೂ ಪರಿಶೀಲಿಸುತ್ತಾರೆ. ಅಕ್ಕಪಕ್ಕದವರಲ್ಲಿ ವಿಚಾರಿಸಿ, ಅವರ ಹೇಳಿಕೆಗಳನ್ನೂ ದಾಖಲಿಸುತ್ತಾರೆ. ಅಲ್ಲಿದ್ದ ಸಿಸಿಟಿವಿಯಿಂದ ವೀಡಿಯೋ ದಾಳಿಯ ದೃಶ್ಯಗಳನ್ನು ಸಂಗ್ರಹಿಸುತ್ತಾರೆ. ಮುಂದೆ? ಮೂರು ತಿಂಗಳ ದೀರ್ಘ ಅವಧಿಯ ನಂತರ ಚಾರ್ಜ್ಶೀಟ್ ಸಲ್ಲಿಕೆಯಾಗುತ್ತದೆ. ಆದರೆ ಪ್ರಕರಣದ ವಿಚಾರಣಾ ದಿನಾಂಕಗಳು ಇನ್ನೂ ತಿಳಿದಿಲ್ಲ.
ಈ ಘಟನೆಯ ಸಾರಾಂಶ ಇಷ್ಟೇ-ಪೊಲೀಸರು ಆಕೆಯ ದೂರನ್ನು ಕಡೆಗಣಿಸಲಿಲ್ಲ. ಎಫ್‌ಐಆರ್ ಮಾಡಿದ್ದಾರೆ. ತನಿಖೆಯೂ ನಡೆದಿದೆ. ಆದರೆ ಆ ಮಹಿಳೆಗೆ ನ್ಯಾಯ ಮಾತ್ರ ದೊರಕದ ತುತ್ತಾಗಿ ಉಳಿದಿದೆ. ಇದು ಕೇವಲ ಇವರೊಬ್ಬರ ಪಾಲಿನ ಅನುಭವ ಮಾತ್ರವಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಹೀಗಾಗುವುದು ಇದೆ.
ಇನ್ನೊಂದು ಕಡೆ ಇದಕ್ಕೆ ತದ್ವಿರುದ್ಧವಾಗಿ ಎಫ್‌ಐಆರ್‌ಗಳ ಕರಾಳ ಮುಖವೊಂದಿದೆ. ಮೈಸೂರಿನ ಪಕ್ಕದ ಚಿಕ್ಕ ಗ್ರಾಮವೊಂದರಲ್ಲಿ ನಡೆದ ಘಟನೆ. ಕುರುಬ ಸುರೇಶ ಎಂಬವರು ತಮ್ಮ ಪತ್ನಿ ಮಲ್ಲಿಗೆ ಎಂಬಾಕೆ ಕುಶಾಲನಗರದ ಸಮೀಪದಲ್ಲಿದ್ದಾಗ ಕಾಣೆಯಾಗಿದ್ದಾರೆ, ಹುಡುಕಲು ಸಹಕರಿಸಿ ಎಂದು ತಮ್ಮ ಊರಿನ ಬೆಟ್ಟದಪುರ ಠಾಣೆಯಲ್ಲಿ ಮನವಿ ಸಲ್ಲಿಸುತ್ತಾರೆ. ಪೊಲೀಸರು ತನಿಖೆ ನಡೆಸಿದಾಗ ಹೆಚ್ಚೇನೂ ಸುಳಿವುಗಳು ದೊರಕಿರಲಿಲ್ಲ. ಕೆಲವು ದಿನಗಳ ನಂತರ ಅದೇ ಊರಿನಲ್ಲಿ ಅಪರಿಚಿತ ಶವವೊಂದರ ಅವಶೇಷಗಳು ಪೊಲೀಸರಿಗೆ ಸಿಗುತ್ತದೆ. ಕೂಡಲೇ ಎಫ್‌ಐಆರ್ ದಾಖಲಾಗುತ್ತದೆ. ಈ ಅವಶೇಷಗಳು ಕಾಣೆಯಾಗಿರುವ ಮಲ್ಲಿಗೆಯದ್ದಾಗಿರಬಹುದು ಎಂದು ಊಹಿಸಿದ ಪೊಲೀಸರು, ತ್ವರಿತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ತನಿಖೆ, ಡಿಎನ್‌ಎ ಪರೀಕ್ಷೆ, ಯಾವುದನ್ನೂ ನಡೆಸದೆ ಸಾಂದರ್ಭಿಕ ಪುರಾವೆಗಳ ಆಧಾರದಲ್ಲಿ ದೂರು ಸಲ್ಲಿಸಿದ ಸುರೇಶನನ್ನೇ ಬಂಧಿಸುತ್ತಾರೆ.
ಇಲ್ಲಿ ತಪ್ಪಿದ್ದೇನು? ಎಫ್‌ಐಆರ್ ದಾಖಲಾದ ಕೂಡಲೇ ತನಿಖೆ ನಡೆಸಿದ್ದು ಸೂಕ್ತವಲ್ಲವೇ? ಹೌದು, ಅದು ಸೂಕ್ತವೇ. ತಪ್ಪಿದ್ದು ಆತುರದಲ್ಲಿ ನಡೆಸಿದ ತನಿಖೆ, ಸಾಕ್ಷಿಗಳ ಹೊರತಾಗಿಯೂ ಮಾಡಿದ್ದ ಬಂಧನ. ಸುಮಾರು ಹದಿನೆಂಟು ತಿಂಗಳುಗಳ ಕಾಲ ಬಂಧಿಯಾಗಿದ್ದ ಸುರೇಶ ತನ್ನ ಪತ್ನಿಯನ್ನು ತಾನು ಕೊಂದಿಲ್ಲ, ಆಕೆ ಕಾಣೆಯಾಗಿದ್ದು ಸತ್ಯ ಎಂದರೂ ನಂಬುವವರು ಯಾರೂ ಇರಲಿಲ್ಲ. ಕೊನೆಗೆ ಇದೇ ವರ್ಷ ಜೂನ್ ತಿಂಗಳಲ್ಲಿ ಮಡಿಕೇರಿಗೆ ತೆರಳಿದ್ದ ಆತನ ಸ್ನೇಹಿತರೊಬ್ಬರು ಮಲ್ಲಿಗೆಯನ್ನು ಆಕೆಯ ಪ್ರಿಯಕರನೊಡನೆ ಅಲ್ಲಿ ಕಂಡದ್ದಾಗಿ ಹೇಳಿದಾಗ ಮರುಪರಿಶೀಲಿಸಿದ ಪೊಲೀಸರಿಗೆ ಮಲ್ಲಿಗೆ ಜೀವಂತವಾಗಿರುವುದು ತಿಳಿದುಬಂತು.
‘ಅವಸರವೇ ಅಪಘಾತಕ್ಕೆ ಕಾರಣ’ವೆನ್ನುವಂತೆ ಎಫ್‌ಐಆರ್ ಪರಿಹರಿಸುವುದರ ಬೆನ್ನುಬಿದ್ದ ಪೋಲೀಸರು ಗಡಿಬಿಡಿಯಲ್ಲಿ ನಡೆಸಿದ ಕಾರ್ಯಾಚರಣೆ ಅಮಾಯಕನೊಬ್ಬನನ್ನು ಅಪರಾಧಿಯನ್ನಾಗಿಸಿತ್ತು. ಎರಡೂ ಸಂದರ್ಭಗಳಲ್ಲಿಯೂ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ, ಒಂದೆಡೆ ಸಮಾಧಾನ ಬಂತು, ಇನ್ನೊಂದೆಡೆ ಇದುವೇ ಸಾವಧಾನಕ್ಕೆ ಕರೆಗಂಟೆಯಾಯಿತು. ಹೀಗಾದಾಗ ನಮ್ಮನ್ನು ಕಾಡುವ ಪ್ರಶ್ನೆಗಳು ಹೆಚ್ಚುತ್ತವೆ!
ಸಾಮಾಜಿಕ ಹಿತಾಸಕ್ತಿಯ ಉದ್ದೇಶದಿಂದ ಅಥವಾ ನ್ಯಾಯ ದೊರಕಿಸುವ ಹಂಬಲದಲ್ಲಿ ನಡೆಸುವ ತ್ವರಿತ ತನಿಖೆಗಳು ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಮಾನಹಾನಿಗೆ ಕಾರಣವಾಗಬಹುದು ಎಂದಾದರೆ, ಇದು ವ್ಯವಹಾರಿಕ, ರಾಜಕೀಯ ಅಥವಾ ವೈಯಕ್ತಿಕ ಹಗೆಬಗೆಯುವವರ ಕೈಗೆ ಸಿಕ್ಕ ದ್ವೇಷಾನ್ವೇಷಣೆಯ ಸಾಧನವಾಗುವುದಿಲ್ಲವೇ? ಎಂಬುವುದು ಯಕ್ಷಪ್ರಶ್ನೆಯಾಗಿದೆ.
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ ನಮ್ಮ ರಾಜ್ಯದ ಅಪರಾಧ ಪರಿಹಾರ ವ್ಯವಸ್ಥೆಯ ಮೇಲೊಮ್ಮೆ ಕಣ್ಣುಹಾಯಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ ಸೈಬರ್ ಅಪರಾಧಗಳ ಪ್ರಮಾಣ ಏರಿದಂತೆ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಹಿಂಸಾಚಾರಗಳ ವಿರುದ್ಧ ಸಾಮಾಜಿಕ ಧ್ವನಿ ಬಲವಾದಂತೆ, ದೂರುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಇಷ್ಟಾದರೂ ಸಲ್ಲಿಸಿದ ದೂರು ತಮ್ಮ ಘನತೆಗೆ, ತಮ್ಮ ವ್ಯಕ್ತಿತ್ವಕ್ಕೆ ಮುಳುವಾಗಬಹುದು ಎನ್ನುವ ಕಾರಣ ಅನೇಕರು ಠಾಣೆಯ ಮೆಟ್ಟಿಲೇರಲು ನಿರಾಕರಿಸುತ್ತಾರೆ. ಇದೀಗ ಸಂತ್ರಸ್ತರು ಸರಳವಾಗಿ, ನಿರ್ಭಯವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ಇ-ಎಫ್‌ಐಆರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಅತಿ ಗಂಭೀರ ಅಪರಾಧಗಳ ಹೊರತಾಗಿ ಮೊಬೈಲ್ ಕಳ್ಳತನ, ವಾಹನ ಕಳವು, ಸೈಬರ್ ವಂಚನೆ, ಆನ್ಲೆöÊನ್ ಶೋಷಣೆ ಮುಂತಾದ ಹಲವು ಸಂದರ್ಭಗಳಲ್ಲಿ ಸಂತ್ರಸ್ತರು ಅನಾಮಿಕವಾಗಿ ರಾಜ್ಯ ಸರಕಾರದ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಸುಲಭವಾಗಿ ಒಟಿಪಿ ದೃಢೀಕರಿಸಿ, ಡಿಜಿಟಲ್ ಸಹಿಯನ್ನು ಲಗತ್ತಿಸಿದರೆ ಎಫ್‌ಐಆರ್ ದಾಖಲಾಗಿ, ಡಿಜಿಟಲ್ ಪ್ರತಿಯೊಂದು ದೂರುದಾರರಿಗೆ ದೊರಕುತ್ತದೆ.
ದೂರುದಾರರ ಗೌಪ್ಯತೆಯನ್ನು ಬಹುಮಟ್ಟಿಗೆ ಕಾಪಾಡುವುದರ ಜೊತೆಗೆ, ಇ-ಎಫ್‌ಐಆರ್ ವ್ಯವಸ್ಥೆ ಜನರ ಸ್ಥೆöÊರ್ಯ, ಸಮಯ ಮತ್ತು ಹಣವನ್ನೂ ಕಾಪಾಡಿದೆ ಎನ್ನಬಹುದು. ದೂರದ ಹಳ್ಳಿಗಳಿಂದ ಠಾಣೆಗೆ ತೆರಳಲು ಸಂಕೋಚಿಸುವ ಮಹಿಳೆಯರು, ಪೊಲೀಸರ ಎದುರು ಕುಳಿತುಕೊಳ್ಳಲು ಭಯಪಡುವ ಹಿರಿಯ ನಾಗರಿಕರು, ಎಲ್ಲಿ ತಮ್ಮದೇ ತಪ್ಪು ಎಂದು ಬೈಯ್ಯುತ್ತಾರೋ ಎಂದು ಚಡಪಡಿಸುವ ಯುವಕ-ಯುವತಿಯರು ಈಗ ತಮ್ಮ ಕೈಯಲ್ಲಿರುವ ಫೋನ್‌ನಿಂದಲೇ ನ್ಯಾಯದ ಬಾಗಿಲು ತಟ್ಟಬಹುದಾಗಿದೆ. ಇದೇ ಕಾರಣಕ್ಕೆ ಕೆಲವೇ ವರ್ಷಗಳಲ್ಲಿ ಕರ್ನಾಟಕದ ಪೊಲೀಸ್ ಆ್ಯಪ್ ಲಕ್ಷಾಂತರ ಡೌನ್‌ಲೋಡ್‌ಗಳಿಗೆ, ಸಾವಿರಗಟ್ಟಲೆ ದೂರುಗಳಿಗೆ ಸಾಕ್ಷಿಯಾಗಿದೆ.
ಆದರೆ ಸಮಗ್ರವಾಗಿ ಪರಿಶೀಲಿಸಿದರೆ ದಾಖಲಾಗಿರುವ ದೂರುಗಳ ಸಂಖ್ಯೆ ಮತ್ತು ನ್ಯಾಯ ಪಡೆದ ಸಂತ್ರಸ್ತರ ಸಂಖ್ಯೆಯಲ್ಲಿನ ಅಜಗಜಾಂತರ ವ್ಯತ್ಯಾಸ ನಮ್ಮ ಅಪರಾಧ ಪರಿಹಾರ ವ್ಯವಸ್ಥೆಯ ಮೇಲಿನ ಪ್ರಶ್ನಾರ್ಥಕ ಚಿಹ್ನೆಯ ಭಾರವನ್ನು ಹೆಚ್ಚಿಸುತ್ತದೆ. ರಾಜ್ಯದಲ್ಲಿ 2022 ರಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 1.80 ಲಕ್ಷದ ಆಸುಪಾಸಿದೆ. ಇದರಲ್ಲಿ ನ್ಯಾಯ ಕಂಡ ಕೇಸುಗಳು ಎಳ್ಳಿನಷ್ಟು ಮಾತ್ರ. 2022 ರಿಂದ 2024ರವರೆಗೆ ಕರ್ನಾಟಕದಲ್ಲಿ 10,247 ಪೋಕ್ಸೋ ಪ್ರಕರಣಗಳು ದಾಖಲಾದರೂ, ಕೇವಲ 179 ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ನಿರ್ಣಯವಾಗಿದೆ. 2024 ರಲ್ಲಿ ದೇಶದಾದ್ಯಂತ ಸೈಬರ್ ಕ್ರೆöÊಂಗೆ ತುತ್ತಾಗಿ ಜನರು ಕಳೆದುಕೊಂಡ ಹಣದ ಪ್ರಮಾಣ ಸರಿಸುಮಾರು 2,4000 ಕೋಟಿ. ಇದರಲ್ಲಿ ಕೇವಲ ಶೇ. 9ರಷ್ಟನ್ನು ಮಾತ್ರ ವಾಪಾಸ್ ದೊರಕಿಸಿಕೊಡಲಾಗಿದೆ.
ಭಾರತದಾದ್ಯಂತ 2025ರ ಮೊದಲ ತ್ರೆöÊಮಾಸಿಕದಲ್ಲೇ ‘1930’ ವಿಶೇಷ ದೂರವಾಣಿ ಸಂಖ್ಯೆಯ ಮೂಲಕ ಮಾತ್ರ ದಾಖಲಾದ ಸೈಬರ್ ಕ್ರೆöÊಂ ದೂರುಗಳ ಸಂಖ್ಯೆ 38 ಸಾವಿರ ದಾಟಿತ್ತು. ಬೆಂಗಳೂರಿನಲ್ಲಿರುವ ಒಟ್ಟು ಆರು ಮಹಿಳಾ ಒನ್ ಸ್ಟಾಪ್ ಸೆಂಟರ್‌ಗಳು ತಿಂಗಳಿಗೆ ಸರಾಸರಿ 50-70ರಷ್ಟು ಲೈಂಗಿಕ ದೌರ್ಜನ್ಯ-ಶೋಷಣೆಗಳ ದೂರುಗಳನ್ನು ದಾಖಲಿಸುತ್ತಿವೆ. ಹೀಗೆ ನೋಡುತ್ತಿದ್ದಂತೆಯೇ ಹೆಚ್ಚುತ್ತಿರುವ ದೂರುಗಳ ಸಂಖ್ಯೆ, ಪರಿಹಾರದ ಗುಣಮಟ್ಟದ ಮೇಲೆಯೂ ಸಕ್ರಿಯ ಪರಿಣಾಮ ಬೀರುತ್ತಿದೆಯೇ? ಉಹುಂ. ಇವೆಲ್ಲವೂ ಕಾನೂನಾತ್ಮಕ ಪರಿಹಾರ ಪಡೆಯುವತ್ತ ಮೊದಲ ಹೆಜ್ಜೆ ಇಡುವವರೆಗೆ ಮಾತ್ರ ಸೀಮಿತವಾಗಿದೆ. ಡಿಜಿಟಲ್ ಸಾಧನಗಳು, ಇ-ಎಫ್‌ಐಆರ್ ಹಾಗೂ ಝೀರೋ ಎಫ್‌ಐಆರ್ ಯೋಜನೆಗಳು ದೂರು ಸಲ್ಲಿಸುವುದನ್ನು ಸುಲಭಗೊಳಿಸಿದವೇ ವಿನಃ ನೇರವಾಗಿ ನ್ಯಾಯವನ್ನು ಖಚಿತಪಡಿಸುವುದರಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಲೇ ಇಲ್ಲ.
ದೇಶದ ಕ್ರಿಮಿನಲ್ ಜಸ್ಟಿಸ್ ವ್ಯವಸ್ಥೆಯನ್ನು ರೈಲಿಗೆ ಹೋಲಿಸಿದರೆ, ಎಫ್‌ಐಆರ್ ಎನ್ನುವುದು ಯಂತ್ರದ ಬೋಗಿಯಷ್ಟೇ. ಇದು ನಮ್ಮನ್ನು ನಿಷ್ಕಿçಯತೆಗಳಿಂದ ಸಕ್ರಿಯತೆಗಳೆಡೆಗೆ ನಡೆಸಬಹುದಾದ ಬಲವನ್ನು ಹೊಂದಿದೆಯಾದರೂ, ಹದಗೆಟ್ಟಿರುವ ಇತರ ಬೋಗಿಗಳನ್ನು ಚಂದಗೊಳಿಸಿದ ಈ ಒಂದು ಪ್ರಬಲ ಎಂಜಿನ್‌ನೊoದಿಗೆ ಸೇರಿಸಿ ಜೈ ಎಂದರೆ ಎಷ್ಟು ದೂರ ತಾನೇ ಹೋಗಲು ಸಾಧ್ಯ? ನೀವೇ ಯೋಚಿಸಿ.
ಈ ಯಂತ್ರಕ್ಕೆ ಶಕ್ತಿ ತುಂಬುತ್ತಿರುವ ನಾವು, ಇದರ ಬೆನ್ನಲ್ಲೇ ಬರುವ ಇತರ ಸಮಸ್ಯೆಗಳಿಗೂ ಪರಿಹಾರ ಹುಡುಕುವತ್ತ ಧ್ಯಾನ ಹಾಯಿಸಬೇಕು. ಸೂಕ್ತ ಅನ್ವೇಷಣೆ, ಸಮಯೋಚಿತ ತನಿಖೆ, ಸಮರ್ಥ ಫೋರೆನ್ಸಿಕ್ ವ್ಯವಸ್ಥೆ, ಸಾಕ್ಷಿ ರಕ್ಷಣೆ ಮುಂತಾದವುಗಳಿಲ್ಲದೆ ಸಲ್ಲಿಸಿದ ದೂರುಗಳು ಸ್ಥಗಿತವಾಗುವ ಸಾಧ್ಯತೆ ಖಡಾಖಂಡಿತ. ಎಫ್‌ಐಆರ್ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಾಸ್ತವಿಕ ಉದ್ದೇಶವನ್ನು ಸಾಧಿಸಲು ಮಾಡಬೇಕಾದದ್ದು ಬಹಳಷ್ಟಿದೆ.

Facebook
Twitter
WhatsApp
LinkedIn
Telegram