ಜಲಕ್ರಾಂತಿಗೆ ಮುನ್ನುಡಿ ಬರೆದ ನಮ್ಮೂರು ನಮ್ಮ ಕೆರೆ

ಕಳೆದ ಸಂಚಿಕೆಯಲ್ಲಿ ‘ಶುದ್ಧಗಂಗಾ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಅತ್ಯಮೂಲ್ಯ ಕಾರ್ಯಕ್ರಮಗಳಲ್ಲಿ ಒಂದಾದ ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.
ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತೀ ಕಡಿಮೆ ಅಂತರ್ಜಲ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ. ಅಂದರೆ ನೀರಿನ ಸಮಸ್ಯೆ ಬಡವರ ನಿತ್ಯ ಸಮಸ್ಯೆಯಾಗಿಯೇ ಉಳಿದಿತ್ತು. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದೊಡ್ಡ ಕೆರೆಗಳಿದ್ದರೂ, ಮಳೆಗಾಲ ಮುಗಿದ ಒಂದೆರಡು ತಿಂಗಳುಗಳಲ್ಲಿಯೇ ಕೆರೆಗಳು ಬತ್ತಿ ಹೋಗುತ್ತಿದ್ದವು. ಮಹಿಳೆಯರು ನೀರಿಗಾಗಿ ದಿನನಿತ್ಯ ಮೈಲುಗಟ್ಟಲೆ ನಡೆಯುವ ಸಂಕಷ್ಟಗಳನ್ನು ಮಾತೃಶ್ರೀ ಅಮ್ಮನವರು ತಿಳಿದುಕೊಂಡರು. ಹಾಗೆಯೇ ಊರುಗಳಲ್ಲಿ ಕೆರೆಗಳಿದ್ದು, ಬೇಕಾದಾಗ ನೀರು ದೊರೆಯದಿರುವ ಕುರಿತ ಕಾರಣಗಳನ್ನು ಅರ್ಥೈಸಿಕೊಂಡರು. ಮಹಿಳೆಯರ ಕಷ್ಟವನ್ನು ನೀಗಿಸುವ ಮತ್ತು ಆ ಗ್ರಾಮಕ್ಕೆ ಒಂದು ನಿರಂತರ ಜಲ ಸಂಪತ್ತನ್ನು ನೀಡುವ ಸಲುವಾಗಿ 2016ರಲ್ಲಿ ಶ್ರೀ ಹೆಗ್ಗಡೆಯವರು ಆರಂಭಿಸಿದ ಒಂದು ವಿನೂತನ ಕಾರ್ಯಕ್ರಮವೇ ‘ನಮ್ಮೂರು-ನಮ್ಮ ಕೆರೆ.’
ಈ ಪರಿಕಲ್ಪನೆಗೆ ಪರಿಪೂರ್ಣವಾದ ಯೋಜಿತವನ್ನು ಹಾಕಿಕೊಟ್ಟವರು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರು. ಆ ಯೋಜಿತದಂತೆ ಗ್ರಾಮದ ನೀರಿನ ಮೂಲವಾದ ಕೆರೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಹೂಳನ್ನು ತೆಗೆದು ಮಳೆಗಾಲದ ಸಂದರ್ಭದಲ್ಲಿ ಅಗಾಧ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಕೆರೆಗಳ ಹೂಳೆತ್ತುವಿಕೆ ಕೇವಲ ಹೂಳನ್ನು ನಿರ್ಮೂಲನೆ ಮಾಡುವ ಚಟುವಟಿಕೆ ಅಷ್ಟೇ ಆಗಿರದೆ, ಆ ಕೆರೆಗೆ ಬರುವ ನೀರಿನ ಮೂಲಗಳನ್ನು ಗುರುತಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವುದರೊಂದಿಗೆ ಹೆಚ್ಚು ನೀರು ನಿರಂತರವಾಗಿ ಕೆರೆಗೆ ಹರಿದು ಬರುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಜೊತೆಗೆ ಕೆರೆಗಳನ್ನು ಉತ್ತಮವಾಗಿ ನಿರ್ವಹಿಸುವ ಸಲುವಾಗಿ ಹೂಳೆತ್ತಲಾದ ಹೆಚ್ಚಿನ ಕೆರೆಗಳಿಗೆ ಸುತ್ತಲಾಗಿ ಆಯಕಟ್ಟಿನ ದಂಡೆಗಳನ್ನು ನಿರ್ಮಿಸಲಾಗುತ್ತಿದೆ. ಕೆರೆದಂಡೆಗಳಲ್ಲಿ ಗಿಡಗಳನ್ನು ನೆಡುವುದರ ಮೂಲಕ ಹಸಿರಿನಿಂದ ಕೂಡಿದ ವಾತಾವರಣವನ್ನು ಸೃಷ್ಟಿಸಲಾಗಿದೆ. ತೀರಾ ಅಗತ್ಯವಿರುವೆಡೆಗಳಲ್ಲಿ ಕೆರೆದಂಡೆಗೆ ಕಲ್ಲನ್ನು ಕಟ್ಟಲಾಗಿದೆ. ಈ ಎಲ್ಲ ವ್ಯವಸ್ಥೆಗಳ ಮೂಲಕ ಹೊರಗಿನ ಹೂಳು ಪುನಃ ಕೆರೆಗೆ ತುಂಬಿಕೊಳ್ಳದಂತೆ ಎಲ್ಲಾ ಮುಂಜಾಗ್ರತೆಗಳನ್ನು ವಹಿಸಿಕೊಳ್ಳಲಾಗಿದೆ. ಕೆರೆಯ ಹೂಳು ತೆಗೆಯುವ ಸಂದರ್ಭದಲ್ಲಿ ಗ್ರಾಮಸ್ಥರೇ ಅವರ ಕೃಷಿ ಭೂಮಿಗೆ ಆ ಫಲವತ್ತಾದ ಮಣ್ಣನ್ನು ಸಾಗಿಸುವಂತೆ ಪ್ರೇರಣೆ ನೀಡುವುದರಿಂದ ಹೂಳು ಸಾಗಾಟದ ವೆಚ್ಚ ಉಳಿತಾಯವಾಗಿ ಕೆರೆಯ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಫಲವತ್ತಾದ ಮಣ್ಣು ರೈತರ ಕೃಷಿ ಭೂಮಿಗೆ ಉಚಿತವಾಗಿ ದೊರೆತಂತಾಗಿದೆ.
ಊರಿನ ಆಯ್ದ ಸಕ್ರಿಯರನ್ನು ಸೇರಿಸಿಕೊಂಡು ಕೆರೆ ಸಮಿತಿಯನ್ನು ರಚಿಸುವುದರ ಮೂಲಕ ಒಂದು ಊರಿನ ಹಿತಾಸಕ್ತಿಯನ್ನು ಕಾಪಾಡುವ ಒಂದು ಉತ್ತಮವಾದ ವ್ಯವಸ್ಥೆಯನ್ನು ಯೋಜನೆಯು ಆ ಗ್ರಾಮಕ್ಕೆ ಒದಗಿಸಿಕೊಡುತ್ತದೆ. ಕೆರೆಯ ಕೆಲಸಗಳು ನಡೆಯುವಾಗ ಆ ಊರಿನಲ್ಲಿ ಏನೋ ಒಂದು ಸಡಗರದ ವಾತಾವರಣ ಇರುತ್ತದೆ. ಅದು ಪರೋಕ್ಷವಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟಿನ ಸಂಚಲನವನ್ನು ಮೂಡಿಸುತ್ತದೆ. ಕೆರೆ ಪುನರುಜ್ಜೀವನ ಕೆಲಸಗಳ ಸಂದರ್ಭದಲ್ಲಿ ಆ ಒಗ್ಗಟ್ಟು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಯೋಜನೆಯ ಮೂಲಕ ಸುಂದರ ಕೆರೆ ನಿರ್ಮಾಣವಾಗಿ ಗ್ರಾಮ ಸಮಿತಿಯ ಮೂಲಕ ಗ್ರಾಮಸ್ಥರಿಗೆ ಹಸ್ತಾಂತರಿಸುವಾಗ ಎಲ್ಲರಲ್ಲೂ ಒಂದು ವಿಶೇಷವಾದ ಭಾವನಾತ್ಮಕತೆ ತುಂಬಿಕೊಳ್ಳುತ್ತದೆ. ಕೆರೆ ಹಸ್ತಾಂತರ ಕಾರ್ಯಕ್ರಮವು ಒಂದು ರೀತಿಯಲ್ಲಿ ‘ಮಗಳನ್ನು ಧಾರೆ ಎರೆದು ಕೊಡುವಂತಹ’ ದೃಶ್ಯವನ್ನು ನೆನಪಿಸುತ್ತದೆ.
ವೈಜ್ಞಾನಿಕವಾಗಿ ಹೂಳನ್ನು ತೆಗೆಯುವುದಷ್ಟೇ ಅಲ್ಲದೆ ಮತ್ತೆ ಕೆರೆಗೆ ಹೂಳು ಸೇರದೇ ಇರುವಂತೆ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಬಿರು ಬೇಸಿಗೆಯಲ್ಲಿಯೂ ಜಲ ಸಂಪತ್ತು ಸಮೃದ್ಧವಾಗಿರುತ್ತದೆ. ಇದುವರೆಗೆ ರಾಜ್ಯದ 31 ಜಿಲ್ಲೆಗಳ 232 ತಾಲೂಕುಗಳಲ್ಲಿ 995 ಕೆರೆಗಳು ಪುನಶ್ಚೇತನಗೊಂಡಿವೆ. ಈ ಎಲ್ಲಾ ಕೆರೆಗಳ ವಿಸ್ತೀರ್ಣ 7,998.15 ಎಕರೆಯಾಗಿದೆ. ಒಟ್ಟು 99,05,912ಲೋಡ್ ಹೂಳನ್ನು ತೆರವುಗೊಳಿಸಲಾಗಿದ್ದು, 2,09,132 ರೈತರು ತಮ್ಮ ಜಮೀನಿಗೆ ಹೂಳನ್ನು ಬಳಸಿಕೊಂಡಿದ್ದಾರೆ. ನೀರಿನ ಲಭ್ಯತೆಯೊಂದಿಗೆ ಫಲವತ್ತಾದ ಹೂಳು ರೈತರ ಜಮೀನು ಸೇರಿದ ಕಾರಣ ಇಳುವರಿಯಲ್ಲಿ ಹೆಚ್ಚಳವಾಗಿದೆ. ಇನ್ನು ಕೆರೆಗಳ ಹೂಳನ್ನು ತೆರವುಗೊಳಿಸಿದ ಫಲವಾಗಿ 910 ಕೋಟಿ ಗ್ಯಾಲನ್‌ನಷ್ಟು ಹೆಚ್ಚುವರಿ ನೀರು ಲಭ್ಯವಾಗಿದೆ. ಇದರಿಂದ ಕೆರೆ ಸಮೀಪದಲ್ಲಿ ಬತ್ತಿ ಹೋಗಿದ್ದ ಒಟ್ಟು 76,534 ಕೊಳವೆಬಾವಿಗಳು, ಒಟ್ಟು40,103 ಬಾವಿಗಳು ಮತ್ತೆ ಮರುಜೀವವನ್ನು ಪಡೆದಿವೆ. 2,77,538 ಎಕರೆ ಕೃಷಿ ಭೂಮಿ ಹಚ್ಚಹಸಿರಾಗಿದೆ. ಕೆರೆಯ ಹೂಳೆತ್ತುವ ಕಾರ್ಯದ ಜೊತೆಗೆ ಕಾಲುವೆ, ಏರಿ, ಕೋಡಿ ದುರಸ್ತಿ, ಕೆರೆಯ ಸುತ್ತಲು ಕಲ್ಲು ಕಟ್ಟುವುದು, ಬೇಲಿ ರಚನೆ, ಫುಟ್‌ಪಾತ್ ನಿರ್ಮಾಣವನ್ನು ಕೂಡಾ ಮಾಡಲಾಗಿದೆ.
ಇಂದು ಕೆರೆ ತುಂಬಿದ ಪರಿಣಾಮವಾಗಿ ಊರ ಜನರಿಗೆ, ಕೃಷಿಗಷ್ಟೇ ಅಲ್ಲ, ಜಾನುವಾರು, ಇತರ ಪ್ರಾಣಿ-ಪಕ್ಷಿಗಳು ತನ್ನ ನೀರ ದಾಹವನ್ನು ನೀಗಿಸಿಕೊಳ್ಳುತ್ತಿವೆ. ಒತ್ತುವರಿಯಾಗಿದ್ದ ಕೆರೆಯ ಜಾಗವನ್ನು ಕೂಡಾ ತೆರವುಗೊಳಿಸಲಾಗಿದೆ. ಜನರೇ ಸ್ವತಃ ನೀರನ್ನು ರಕ್ಷಿಸುವತ್ತ, ಕೆರೆಯ ಶುಚಿತ್ವದತ್ತ ಒಲವು ತೋರುತ್ತಿದ್ದಾರೆ. ಒಟ್ಟಿನಲ್ಲಿ ಶ್ರೀ ಹೆಗ್ಗಡೆಯವರ ಈ ಪ್ರಯತ್ನ ವಿಶ್ವಕ್ಕೆ ಮಾದರಿಯಾಗಿದೆ.
ಇನ್ನಷ್ಟು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram