ಅಮೆರಿಕ ಸೇರುವ ಮಧುಗಿರಿಯ ಹೀರೆನಾರು

ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮೈ ಉಜ್ಜಲು ತೆಂಗು, ಹೀರೆ ಕಾಯಿಯ ನಾರನ್ನು ಬಳಸುತ್ತಿದ್ದರು. ದಿನಕಳೆದಂತೆ ಅವು ತೆರೆಮರೆಗೆ ಸರಿಯಿತು. ಇದೀಗ ಹೀರೆನಾರು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ನೋಡಲು ಇದೇನ್ ಮಹಾ! ಹೀರೆಯಿಂದ ತೆಗೆದ ನಾರಲ್ಲವೇ! ಎಂದು ಭಾವಿಸಿದರೂ ಅದರ ವಿನ್ಯಾಸ ಮಾತ್ರ ಎಂಥವರನ್ನು ಮೋಡಿ ಮಾಡುವಂತಿದೆ.
ಮಧುಗಿರಿ ತಾಲೂಕಿನ ಅಕ್ಕಿಕಾಳು ಶಿವಣ್ಣರವರಿಗೆ ಹೀರೆ ನಾರಿನ ವಸ್ತುಗಳು ಸುಂದರ ಬದುಕನ್ನು ನೀಡಿದೆ. ಆಂಧ್ರಪ್ರದೇಶಕ್ಕೆ ತಾಗಿಕೊಂಡAತೆ ಇರುವ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸುವರ್ಣ ತುಪ್ಪದ ಹೀರೆಕಾಯಿಯನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಈ ಮಣ್ಣಿನಲ್ಲಿ ಕಾಯಿ ದಷ್ಟಪುಷ್ಠವಾಗಿ ಬೆಳೆಯುತ್ತದೆ. ಶಿವಣ್ಣರವರು ಎಂಟು ವರ್ಷಗಳ ಹಿಂದೆ ಅರ್ಧ ಎಕರೆಯಲ್ಲಿ ಬೆಳೆದ ಹೀರೆಕಾಯಿಯಿಂದ ನಾರು ತೆಗೆದು ಅವುಗಳಿಗೆ ಮೈ ಉಜ್ಜುವ ಬ್ರೆಶ್‌ನ ಆಕಾರ ನೀಡಿ ಅವುಗಳನ್ನು ಮಾರಾಟ ಮಾಡುವ ಹೊಸ ಉಪಾಯವೊಂದಕ್ಕೆ ಚಾಲನೆ ನೀಡಿದರು. ಬೈಕ್ ಮೂಲಕ ವಾರದಲ್ಲಿ ಎರಡು ಬಾರಿ ಬೆಂಗಳೂರು, ಮೈಸೂರಿನಲ್ಲಿರುವ ಸಾವಯವ ಮಳಿಗೆಗಳಿಗೆ ತೆರಳಿ ನೈಸರ್ಗಿಕವಾಗಿ ತಯಾರಿಸಿದ ಹೀರೆ ಬ್ರೆಶ್ ಬಗ್ಗೆ ಜಾಗೃತಿ ಮೂಡಿಸಿ ಅವರು ಕೇಳಿದ ಬೆಲೆಗೆ ನೀಡಿ ಬರುತ್ತಿದ್ದರು. ಕೃಷಿಮೇಳ, ಸಾವಯವ ಮಳಿಗೆಗಳು ಇವರ ಮಾರಾಟದ ಕೇಂದ್ರವಾಗಿದ್ದುವು. ತಯಾರಿಸಿದ ಬ್ರೆಶ್ ಎಷ್ಟೋ ಬಾರಿ ಮಾರಾಟವಾಗದೆ ಮನೆಯಲ್ಲಿ ಉಳಿದದ್ದು, ಬೈಕ್‌ನಲ್ಲಿ ಕಟ್ಟಿಕೊಂಡು ಹೋದ ನಾರು ಮತ್ತೆ ಮನೆ ಸೇರಿದ, ಉಚಿತವಾಗಿ ನೀಡಿದ ಸವಾಲಿನ ಕಥೆಗಳು ಇವೆ. ಹಾಗೆಂದು ಇವರು ತಯಾರಿ ಮತ್ತು ಮಾರುಕಟ್ಟೆ ಹುಡುಕುವ ತನ್ನ ಪ್ರಯತ್ನಕ್ಕೆ ವಿದಾಯ ಹೇಳಲಿಲ್ಲ. ಮುಂದೊಂದು ದಿನ ಜನರ ಮನಗೆಲ್ಲುತ್ತದೆ ಎಂಬ ಕನಸು ನನಸಾಗಲು ಎರಡು ವರ್ಷಗಳು ಬೇಕಾದವು. ಮುಂದಿನದು ಒಂದು ಅಪೂರ್ವ ಯಶೋಗಾಥೆ.
ದಿನಕಳೆದಂತೆ ಬೇಡಿಕೆ ಹೆಚ್ಚಾಗತೊಡಗಿತು. ಮಹಲ್, ಸ್ವದೇಶಿ ಮಳಿಗೆಗಳಿಂದ ಬೇಡಿಕೆಗಳು ಬರ ತೊಡಗಿದವು. ಅರ್ಧ ಎಕರೆಯಲ್ಲಿ ಬೆಳೆಯುತ್ತಿದ್ದ ಹೀರೆ ನಾಲ್ಕು ಎಕರೆಗೆ ವಿಸ್ತರಿಸಿತು. ಇದೀಗ ನಾಲ್ಕು ಎಕರೆ ಜಮೀನನ್ನು ಲೀಸ್‌ಗೆ ಪಡೆದು ಹೀಗೆ ಒಟ್ಟು ಎಂಟು ಎಕರೆಯಲ್ಲಿ ಹೀರೆ ಬಳ್ಳಿ ವಿಸ್ತರಿಸಿಕೊಂಡಿದೆ.
ಫ್ಯಾಕ್ಟರಿ ಕಟ್ಟಿದರು : ಕಳೆದ ಎರಡು ವರ್ಷಗಳ ಹಿಂದೆ ಮಧುಗಿರಿ ತಾಲೂಕಿನ ಗುರುವಡೇರಹಳ್ಳಿಯಲ್ಲಿ ಹೀರೆನಾರಿನಿಂದ ವಸ್ತುಗಳನ್ನು ತಯಾರಿಸುವ ಫ್ಯಾಕ್ಟರಿಯೊಂದನ್ನು ಆರಂಭಿಸಿದ್ದಾರೆ. ಇದು ಆರು ಮಂದಿಗೆ ಕೆಲಸ ನೀಡುತ್ತಿದೆ. ದಿನಪೂರ್ತಿ ಶಿವಣ್ಣರವರು ಫ್ಯಾಕ್ಟರಿಯಲ್ಲಿ ಬ್ರೆಶ್ ತಯಾರಿ ಕೆಲಸದಲ್ಲಿ ತೊಡಗುತ್ತಾರೆ. ಮಾರಾಟದ ಜವಾಬ್ದಾರಿಯು ಅವರದ್ದೇ. ಬೇಕಾದ ಖಚ್ಛಾ ವಸ್ತು ಹೀರೆಕಾಯಿಯನ್ನು ತಾನೇ ಸ್ವತಹ ಬೆಳೆಯುತ್ತಾರೆ. ಪ್ರತಿನಿತ್ಯ ಮೈ ಉಜ್ಜುವ ಬ್ರೆಶ್, ಪಾತ್ರೆ ತೊಳೆಯುವ, ಬೆನ್ನು ಉಜ್ಜುವ ಬ್ರೆಶ್‌ಗಳು ಇಲ್ಲಿ ತಯಾರಾಗುತ್ತವೆ. ಬಣ್ಣ, ರಾಸಾಯನಿಕವನ್ನು ಬಳಸದೆ ತಯಾರಾಗುವ ಬ್ರೆಶ್‌ಗಳು ಅಮೆರಿಕ, ಆಸ್ಟ್ರೇಲಿಯಾದ ವಿಮಾನವನ್ನೇರುತ್ತಿವೆ. ಪಾತ್ರ ತಿಕ್ಕುವ ಬ್ರೆಶ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸಾಮಾನ್ಯವಾಗಿ ವರ್ಷದಲ್ಲಿ 15 ಸಾವಿರದಷ್ಟು ಪಾತ್ರೆ ತೊಳೆಯುವ ಬ್ರೆಶ್ ಮಾರಾಟವಾಗುತ್ತದೆ.
ಸ್ವದೇಶಿ ಸಾವಯವ ಮಳಿಗೆಗೆ ಮಾರಾಟ : ದಿನದಿಂದ ದಿನಕ್ಕೆ ಮಹಲ್, ನಗರ ಪ್ರದೇಶಗಳಿಂದ ಬೇಡಿಕೆ ಬರುತ್ತಿದೆ. ಆದರೆ ಕೇವಲ ಲಾಭದ ಉದ್ದೇಶದಿಂದ ಶಿವಣ್ಣ ಈ ಕಾಯಕದಲ್ಲಿ ತೊಡಗಿಲ್ಲ. ಕಡಿಮೆ ಬೆಲೆಗೆ ಹಳ್ಳಿಮಂದಿಗೂ ದೊರೆಯಬೇಕೆಂಬ ನಿಟ್ಟಿನಲ್ಲಿ ಹೆಚ್ಚಾಗಿ ರಾಜ್ಯದಾದ್ಯಂತ ಇರುವ ಸ್ವದೇಶಿ ಸಾವಯವ ಮಳಿಗೆಗಳಿಗೆ ನೀಡುತ್ತಿದ್ದಾರೆೆ. ಪ್ಲಾಸ್ಟಿಕ್ ಬ್ರೆಶ್‌ಗಳ ಸ್ಪರ್ಧಾ ಜಗತ್ತಿನ ನಡುವೆ ಹೀರೆ ನಾರಿನ ಬ್ರೆಶ್ ಬಳಕೆದಾರರ ಮನಗೆಲ್ಲುತ್ತಿದೆ. ಸಾಮಾನ್ಯವಾಗಿ ಇವು ಮೂರು ತಿಂಗಳುಗಳ ಕಾಲ ಬಾಳಿಕೆ ಬರುತ್ತದೆ. ಪ್ಲಾಸ್ಟಿಕ್ ಬ್ರೆಶ್‌ಗೆ ಹೋಲಿಸಿದರೆ ಇವುಗಳ ಬೆಲೆ ಒಂಚೂರು ಹೆಚ್ಚಾದರೂ ಆರೋಗ್ಯದ ದೃಷ್ಟಿಯಿಂದ ಇವುಗಳು ಬಳಕೆದಾರರ ಮನ ಗೆದ್ದಿವೆ.
ಸುವರ್ಣ ತುಪ್ಪದ ಹೀರೆಕಾಯಿ ಬಳಕೆ : ಸಾಮಾನ್ಯವಾಗಿ ಹೀರೆಕಾಯಿಗಳು ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಆದ್ದರಿಂದ ಇವುಗಳಿಂದ ಬ್ರೆಶ್ ತಯಾರಿಸುವುದು ಕಷ್ಟ. ಸುವರ್ಣ ತುಪ್ಪದ ಹೀರೆಕಾಯಿಯೇ ಸೂಕ್ತ. ಇವರು ಆರಂಭದಲ್ಲಿ ನಾಲ್ಕು ಎಕರೆಯಲ್ಲಿ ಪಪ್ಪಾಯಿ ಬೆಳೆಯುತ್ತಿದ್ದರು. ಅದರಲ್ಲಿ ಒಂದಷ್ಟು ಲಾಭ ಕೈ ಸೇರಿದೆ. ನಂತರ ಬೆಳೆದ ದಾಳಿಂಬೆಯಿಂದ ರೂ. 12 ಲಕ್ಷ ನಷ್ಟವನ್ನು ಅನುಭವಿಸಿದ್ದಾರೆ. ಇದೀಗ ಆ ಜಾಗದಲ್ಲಿ ಹೀರೆ ಬೆಳೆಯುತ್ತಿದ್ದಾರೆ. ಎಕರೆಯೊಂದರಲ್ಲಿ 1300 ಬಳ್ಳಿಗಳಿವೆ. ಕಾಯಿ ಉದ್ದವಾಗಿದ್ದು ಒಂದು ಕಾಯಿ ಮೂರು ಕೆ.ಜಿ.ಯವರೆಗೆ ತೂಗುತ್ತದೆ. ನವೆಂಬರ್‌ನಲ್ಲಿ ಬಿತ್ತಿದರೆ ಮಾರ್ಚ್ ತಿಂಗಳಲ್ಲಿ ಕಟಾವಿಗೆ ದೊರೆಯುತ್ತದೆ. ಕಾಯಿ ಬಳ್ಳಿಯಲ್ಲೆ ಸಂಪೂರ್ಣವಾಗಿ ಒಣಗಿದ ನಂತರ ಕಟಾವು ಮಾಡಿ ತಂದು ಒಣಗಿದ ಕಾಯಿಗೆ ಕಲ್ಲಿನಿಂದ ಬಡಿದು ಮೇಲಿನ ಸಿಪ್ಪೆಯನ್ನು ನಾರಿನಿಂದ ಬೇರ್ಪಡಿಸುತ್ತಾರೆ. ನಂತರ ಕಲ್ಲಿನಿಂದ ರುಬ್ಬಿ ನಾರಿಗೆ ಗಾತ್ರ ನೀಡುತ್ತಾರೆ. ಅವುಗಳನ್ನು ಬೇಕಾದ ಬ್ರೆಶ್‌ನ ಗಾತ್ರಕ್ಕೆ ಕತ್ತರಿಸುತ್ತಾರೆ. ಹೆಬ್ಬೇವಿನ ಕೋಲಿಗೆ ಜೋಡಿಸುವ ಮೂಲಕ ಬೆನ್ನು ಉಜ್ಜುವ ಬ್ರೆಶ್ ತಯಾರಾಗುತ್ತದೆ. ನಾರನ್ನು ಬೇಕಾದ ಗಾತ್ರಕ್ಕೆ ಕತ್ತರಿಸುವ, ಆಕಾರ ನೀಡುವ, ಪ್ಯಾಕಿಂಗ್ ಕೆಲಸ ಫ್ಯಾಕ್ಟರಿಯಲ್ಲಿ ನಡೆಯುತ್ತದೆ. ಎಂಟು ಎಕರೆಯಲ್ಲಿ ಬೆಳೆದ ಕಾಯಿ ಶಿವಣ್ಣನವರಿಗೆ ಒಂದು ವರ್ಷ ಬ್ರೆಶ್ ತಯಾರಿಗೆ ಸಾಕಾಗುತ್ತದೆಯಂತೆ. ಈ ವರ್ಷ ಕಟಾವು ಮಾಡಿದ ಕಾಯಿಯನ್ನು ಮುಂದಿನ ವರ್ಷಕ್ಕೆ ಸಿಪ್ಪೆ ತೆಗೆದು ಸಂಗ್ರಹಿಸಿಡುವ ಮೂಲಕ ಖಚ್ಛಾ ವಸ್ತುವಿನ ಅಭಾವವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಹೀರೆಕಾಯಿಯ ಬೀಜವನ್ನು ರೈತರಿಗೆ ಮಾರಾಟ ಮಾಡಿ ಅದರಿಂದಲೂ ಒಂದಷ್ಟು ಮೊತ್ತವನ್ನು ಗಳಿಸುತ್ತಾರೆ. ಒಂದು ನಾರಿನಿಂದ ಪಾತ್ರೆ ತೊಳೆಯುವ ಎರಡು ಬ್ರೆಶ್‌ಗಳು ತಯಾರಾಗುತ್ತವೆ. ಖಚ್ಛಾವಸ್ತುವನ್ನು ತಾನೇ ಬೆಳೆಯುವುದರಿಂದ ಹೀರೆ ನಾರು ಉತ್ತಮ ಆದಾಯವನ್ನು ನೀಡುತ್ತಿದೆ.
ಇವರ ಪ್ರಯತ್ನಗಳಿಗೆ ಪತ್ನಿ ಸುಜಾತ ಕೂಡಾ ಸಾಥ್ ನೀಡುತ್ತಾರೆ. ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಸತ್ಯಸಾಯಿ’ ಸ್ವಸಹಾಯ ಸಂಘದಲ್ಲಿದ್ದು ಅಗತ್ಯ ಹಣಕಾಸಿನ ನೆರವನ್ನು ಯೋಜನೆಯ ಮೂಲಕ ಬ್ಯಾಂಕ್‌ನಿAದ ಪಡೆಯುತ್ತಿದ್ದಾರೆ. ಇದು ಶಿವಣ್ಣರವರಿಗೆ ತನ್ನ ಉದ್ಯೋಗವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ. ಇದೀಗ ಹೀರೆಕಾಯಿ ಶಿವಣ್ಣರವರನ್ನು ಫ್ಯಾಕ್ಟರಿಯ ಮಾಲಕರನ್ನಾಗಿಸಿದೆ. ನೀವು ಕೂಡಾ ಶಿವಣ್ಣರವರಿಗೆ ಕರೆ ಮಾಡಬಹುದು. ಅವರ ದೂರವಾಣಿ ಸಂಖ್ಯೆ : 9740073640.

Facebook
Twitter
WhatsApp
LinkedIn
Telegram