ಕೂಲಿಗಾಗಿ ಕಾಳು ಸೃಷ್ಠಿಸಿದ ಸ್ವಾಭಿಮಾನದ ಬದುಕು

ಕಳೆದ ಸಂಚಿಕೆಯಲ್ಲಿ ‘ಕೃಷಿ ಯಂತ್ರಧಾರೆ’ಯ ಮೂಲಕ ರೈತರ ಪಾಲಿಗೆ ಯೋಜನೆ ನೀಡುತ್ತಿರುವ ಸೇವೆಗಳ ಬಗ್ಗೆ ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಸಮುದಾಯದ ಅನೇಕ ಸೇವಾಕಾರ್ಯಗಳ ಬಗ್ಗೆ ಒಂದೊoದಾಗಿ ತಿಳಿದುಕೊಳ್ಳೋಣ.
ಸಮುದಾಯ ಕಾರ್ಯಕ್ರಮಗಳ ಮೂಲಕ ಬಡವರ, ದುರ್ಬಲರ ಜೀವನಮಟ್ಟವನ್ನು ಉನ್ನತೀಕರಿಸುವ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶಕ್ಕಾಗಿಯೇ ಶ್ರೀ ಹೆಗ್ಗಡೆಯವರು 1982ರಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯನ್ನು ಹುಟ್ಟುಹಾಕಿದರು. ಆರಂಭದ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗಾಗಿ ಹಳ್ಳಿಯ ಪ್ರತಿ ಮನೆ ಮನೆಗಳಿಗೆ ತೆರಳಿ ತಳಮಟ್ಟದ ಸರ್ವೇಯನ್ನು ನಡೆಸಿ ಸಂಕಷ್ಟದಲ್ಲಿದ್ದ ಕುಟುಂಬಗಳ ಜೀವನೋಪಾಯಕ್ಕೆ ಅನೇಕ ಸಹಾಯ-ಸವಲತ್ತುಗಳನ್ನು ನೀಡಿದರು. ಅವರಿಗೆ ಸ್ವಾಭಿಮಾನದ ಬದುಕಿನ ಕಲೆಯನ್ನು ಕಲಿಸಿಕೊಟ್ಟರು.
ನಾಲ್ಕು ದಶಕಗಳ ಹಿಂದೆ ಸಾಮಾನ್ಯವಾಗಿ ಬಹುತೇಕ ಜನರು ಅತೀ ಕಡಿಮೆ ಆದಾಯವನ್ನು ಹೊಂದಿದ್ದರು ಮತ್ತು ಕೂಲಿ ಕಸುಬನ್ನೆ ನಂಬಿದ್ದರು. ಆ ದಿನಗಳಲ್ಲಿ ಸಿಗುತ್ತಿರುವ ಕೂಲಿ ಕೆಲಸಗಳ ಅವಕಾಶಗಳು ಕಡಿಮೆ ಇತ್ತು. ಅಲ್ಲದೇ ಒಂದು ಕುಟುಂಬದಲ್ಲಿ ದುಡಿಯುವ ಕೈ ಎರಡಾದರೆ ಉಣ್ಣುವ ಕೈ ಹತ್ತಾರು ಆಗಿತ್ತು. ಕುಟುಂಬದಲ್ಲಿ ಜನಸಂಖ್ಯೆಯು ಹೆಚ್ಚಿತ್ತು. ಮಕ್ಕಳ ಸಂಖ್ಯೆಯು ಹೆಚ್ಚಿತ್ತು. ಕಿತ್ತು ತಿನ್ನುವ ಬಡತನ ಬಹುತೇಕ ಕುಟುಂಬಗಳಲ್ಲಿ ಸಾಮಾನ್ಯವಾಗಿತ್ತು. ಅಂತಹ ಕುಟುಂಬಗಳ ಸರ್ವೇಕ್ಷಣೆ ನಡೆಸಿ ಆ ಕುಟುಂಬದ ಸದಸ್ಯರಿಗೆ ಬೇಕಾದ ಅಗತ್ಯ ಸೌಲಭ್ಯಗಳಾದ ಊಟದ ಬಟ್ಟಲು, ಲೋಟ, ಪಾತ್ರೆ, ಬಟ್ಟೆ ಬರೆಗಳು, ಚಾಪೆ, ಹೊದಿಕೆ, ಚಿಮಣಿ ದೀಪ ಮುಂತಾದ ಪರಿಕರಗಳನ್ನು ನೀಡಿ ಅವರ ಜೀವನ ಮೌಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದರು. ಸವಲತ್ತುಗಳನ್ನು ಪಡೆದ ಆ ಕೈಗಳನ್ನು ನಿರಂತರವಾಗಿ ಅಪೇಕ್ಷಿಸುವ ಕೈಗಳನ್ನಾಗಿ ಮಾಡದೆ ಸ್ವಾಭಿಮಾನದ ಕೈಗಳನ್ನಾಗಿ ಪರಿವರ್ತಿಸುವುದರ ಬಗ್ಗೆ ವಿಶೇಷ ಕಾರ್ಯಯೋಜನೆಯನ್ನು ರೂಪಿಸಿದರು. ಅದುವೇ ‘ಕೂಲಿಗಾಗಿ ಕಾಳು ಯೋಜನೆ’.
ಯೋಜನೆಯ ಕಾರ್ಯಕರ್ತರ ಮೂಲಕ ಬಡ ಕುಟುಂಬಗಳ ಬಳಿ ಇರುವ ಭೂಶಕ್ತಿ, ಜಲಶಕ್ತಿ, ಮಾನವಶಕ್ತಿಯ ಬಗ್ಗೆ ಸರ್ವೇಕ್ಷಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದರು. ಪಾಳುಬಿದ್ದ ಅವರ ಕೃಷಿ ಭೂಮಿಯಲ್ಲಿ ಸ್ವಂತ ಕೃಷಿ ಮಾಡಲು ಎಲ್ಲ ರೀತಿಯ ಪ್ರೋತ್ಸಾಹ, ಸವಲತ್ತುಗಳನ್ನು ನೀಡುವ ‘ಕೂಲಿಗಾಗಿ ಕಾಳು’ ಯೋಜನೆಯನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದ ಮೂಲಕ ಕೃಷಿಭೂಮಿ ಇದ್ದರೂ ಇನ್ನೊಬ್ಬರ ಜಮೀನಿನಲ್ಲಿ ಕೂಲಿಗಾಗಿ ದುಡಿಯುವ ಬದುಕಿಗೆ ಒಂದು ಬಹುದೊಡ್ಡ ಪರಿವರ್ತನೆಯನ್ನು ನೀಡಿತು. ಯೋಜನೆಯ ಕಾರ್ಯಕರ್ತರ ಮೂಲಕ ವಾರದಲ್ಲಿ ಎರಡು ಮೂರು ದಿನಗಳ ಕಾಲ ಪಾಳುಬಿದ್ದ ಅವರ ಕೃಷಿಭೂಮಿಯಲ್ಲಿ ದುಡಿಯಲು ಅವರಿಗೊಂದು ಯೋಜಿತವನ್ನು ಶ್ರೀ ಹೆಗ್ಗಡೆಯವರು ಹಾಕಿಕೊಟ್ಟರು. ಆದರೆ ಕೃಷಿಕಾರ್ಯವನ್ನು ಮಾಡಲು ಒಂದು ಬಿಡಿಗಾಸು ಕೂಡಾ ಅವರಲ್ಲಿ ಇರಲಿಲ್ಲ. ಅಲ್ಲದೆ ಕೂಲಿ ಜೀವನದಿಂದ ಹೊಟ್ಟೆ ಹೊರೆಯುವುದೇ ಕಷ್ಟವಾಗಿತ್ತು. ಇಂತಹ ಕಡುಬಡವರಿಂದ ಸ್ವಂತ ಕೃಷಿ ಮಾಡಿಸಬೇಕೆಂದರೆ ಎಂತಹ ಕಠಿಣ ಸವಾಲಿತ್ತು! ಎಂಬುವುದನ್ನು ನೀವೇ ಊಹಿಸಿಕೊಳ್ಳಿ. ಆದ್ದರಿಂದ ಇವರ ಕೃಷಿ ಪೂರ್ಣವಾಗಿ ಧರ್ಮಸ್ಥಳದ ಸಹಕಾರದಿಂದಲೇ ಅವಲಂಬಿತವಾಗಿತ್ತು. ಹಾಗೇಯೇ ಕೃಷಿ ಮಾಡಲು ಬೇಕಾಗುವ ಹಾರೆ, ಪಿಕ್ಕಾಸು, ಗುದ್ದಲಿ, ಬುಟ್ಟಿ ಮುಂತಾದ ಸಲಕರಣೆಗಳನ್ನು ಧರ್ಮಸ್ಥಳದಿಂದಲೇ ಪೂಜ್ಯರು ನೀಡಿದರು. ಅಡಿಕೆ, ರಬ್ಬರ್, ತೆಂಗು, ಗೇರು ಮುಂತಾದ ಸಸಿಗಳನ್ನು ಒದಗಿಸಿದರು. ತರಕಾರಿ ಬೆಳೆಯಲು ಬಿತ್ತನೆ ಬೀಜಗಳನ್ನು ನೀಡಿದರು. ಕೃಷಿಯ ಸುಮಾರು ಶೇ. 30ರಷ್ಟು ಭಾಗದಲ್ಲಿ ಕೂಡಲೇ ಆದಾಯ ನೀಡುವಂತಹ ತರಕಾರಿಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದರು. ಇದರೊಂದಿಗೆ ಉಳಿದ ಜಾಗದಲ್ಲಿ ದೀರ್ಘಕಾಲಿಕ ಬೆಳೆಗಳನ್ನು ಬೆಳೆಸಿದರು. ಅವರ ಕೃಷಿ ಭೂಮಿಯಲ್ಲಿ ದುಡಿಯುವಾಗ ಯಾವುದೇ ಕೂಲಿ ಸಿಗುತ್ತಿರಲಿಲ್ಲ. ಪರಿಣಾಮ ಕುಟುಂಬದವರು ಉಪವಾಸ ಬೀಳಬೇಕಾದ ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾಳುಬಿದ್ದ ಭೂಮಿಯಲ್ಲಿ ದುಡಿದ ದಿನ ಅಥವಾ ಕೆಲಸಗಳನ್ನು ಲೆಕ್ಕಹಾಕಿ ಅದಕ್ಕನುಗುಣವಾಗಿ ಅಕ್ಕಿ, ದವಸಧಾನ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡತೊಡಗಿದರು. ಇದರಿಂದಾಗಿ ಕುಟುಂಬ ಎಂದಿಗೂ ಉಪವಾಸ ಬೀಳಲಿಲ್ಲ. ಇಂತಹ ವಿಶೇಷತೆ ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ನಡೆದಿರಲು ಸಾಧ್ಯವಿಲ್ಲ.
ಈ ಒಂದು ವಿನೂತನ ಕಾರ್ಯಕ್ರಮದಿಂದ ಅವರ ಬದುಕಿನಲ್ಲಿ ಅನಿರೀಕ್ಷಿತ ಬದಲಾವಣೆಗಳು, ಪರಿವರ್ತನೆಗಳು ಉಂಟಾಯಿತು. ತಮ್ಮ ಭೂಮಿಯಲ್ಲಿ ತಮ್ಮ ಸ್ವಂತ ಶ್ರಮದಿಂದ ಬೆಳೆದ ತರಕಾರಿ ಸೊಪ್ಪುಗಳಿಂದ ಕೆಲವೇ ತಿಂಗಳಲ್ಲಿ ಸ್ವಾಭಿಮಾನದ ಆದಾಯ ಅವರ ಕೈಸೇರಿತು. ಅದು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಹಾಗೆಯೇ ತಮ್ಮ ಜಮೀನಿನಲ್ಲಿ ದೀರ್ಘಕಾಲದ ಬೆಳೆಗಳನ್ನು ಬೆಳೆದರು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಮುಂದುವರಿಸಿದರು.
ವಾರದಲ್ಲಿ ಎರಡು-ಮೂರು ದಿನಗಳ ಕಾಲ ಇತರ ಜಮೀನ್ದಾರರ ಕೃಷಿ ಕೂಲಿಗಳನ್ನು ಮಾಡುವುದರ ಮೂಲಕ ಇತರರ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಿದರು. ‘ಕೂಲಿಗಾಗಿ ಕಾಳು’ ಯೋಜನೆ ಪಾಳುಬಿದ್ದ ಭೂಮಿಯನ್ನು ಫಸಲು ಭರಿತ ಕೃಷಿಭೂಮಿಯನ್ನಾಗಿ ಮಾಡಿಸಿದ್ದಲ್ಲದೆ ಬಡವರ ಬದುಕಿನಲ್ಲಿ ಅಮೂಲಾಗ್ರವಾದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ಸೃಷ್ಠಿಸಿತು. ನಂತರ ‘ಪ್ರಗತಿಬಂಧು ಸ್ವಸಹಾಯ’ ಶ್ರಮ ವಿಭಜನೆ ಕಾರ್ಯಕ್ರಮದೊಂದಿಗೆ ದೊಡ್ಡಮಟ್ಟದ ಕೃಷಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಇದು ಮುನ್ನುಡಿ ಬರೆಯಿತು.

Facebook
Twitter
WhatsApp
LinkedIn
Telegram