ಇದು ಡಿಜಿಟಲ್ ಯುಗ. ಎಲ್ಲವೂ ಶರವೇಗದಲ್ಲಿ ಆಗಬೇಕೆಂದು ಹಾತೊರೆಯುತ್ತಿರುವುದರ ಪರಿಣಾಮ ‘ಟೆನ್ಶನ್’ ಎಂಬ ಭೂತ ಎಲ್ಲರನ್ನು ಆವರಿಸಿಕೊಂಡಿದೆ. ಹಿಂದೆ ನಗರಗಳಲ್ಲಿರುವ ಜನರು ಅತಿಯಾದ ಒತ್ತಡಗಳಿಂದ ಬಳಲುತ್ತಿದ್ದರು. ಇದೀಗ ಈ ಭೂತ ಗ್ರಾಮೀಣ ಜನರ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಒತ್ತಡದ ಬದುಕು, ಸಂಬoಧಗಳಲ್ಲಿನ ಉದ್ವಿಗ್ನತೆ, ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಉದ್ವೇಗ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಾತಿಗೆ ಕೇಂದ್ರ ಸರಕಾರ ಆರಂಭಿಸಿರುವ ಸಹಾಯವಾಣಿಗೆ ದೊರೆತ ಸ್ಪಂದನೆಯೇ ಸಾಕ್ಷಿ. 2022ರಲ್ಲಿ ಆರಂಭಿಸಿದ ಸಹಾಯವಾಣಿಯಲ್ಲಿ ಈವರೆಗೆ ದಿನವೊಂದಕ್ಕೆ ಸರಾಸರಿ 2,511 ಜನರು ಮಾನಸಿಕ ನೆಮ್ಮದಿಯ ಸಹಾಯವನ್ನು ಕೋರಿದ್ದಾರೆ.
ನಗರಗಳ ಬದುಕು ಜಂಜಟಗಳಿoದ ಕೂಡಿರುತ್ತದೆ ಎನ್ನುತ್ತಿದ್ದ ಗ್ರಾಮೀಣರ ಬದುಕು ಇಂದು ಅವರಿಂದ ಹೊರತಾಗಿಲ್ಲ. ಬದಲಾದ ಜೀವನ ಶೈಲಿಯಿಂದಾಗಿ ‘ಮಾನಸಿಕ ಸ್ವಾಸ್ಥö್ಯ’ ಸಮಸ್ಯೆ ಎಲ್ಲೆಡೆ ಪಸರಿಸಿರುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಲೇಬೇಕಾದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ. ಮುಂದಿನ ನಾಲ್ಕೆöÊದು ವರ್ಷಗಳಲ್ಲಿ ಎಲ್ಲೆಡೆ ಕ್ಯಾನ್ಸರ್ ಆಸ್ಪತ್ರೆಗಳಂತೆ ‘ಮಾನಸಿಕ ಆರೋಗ್ಯ ಕೇಂದ್ರ’ಗಳು ತಲೆಯೆತ್ತುವುದರಲ್ಲಿ ಯಾವ ಅನುಮಾನವು ಇಲ್ಲ.
ಐದು ವರ್ಷದಲ್ಲಿ 3 ಪಟ್ಟು ಹೆಚ್ಚಳ
ಮಾನಸಿಕ ಸಮಸ್ಯೆಗೆ ಡಿಜಿಟಲ್ ಉಪಕರಣಗಳ ಬಳಕೆ, ಒತ್ತಡ, ಜೀವನ ಶೈಲಿ, ಪೌಷ್ಠಿಕ ಆಹಾರದ ಕೊರತೆ, ಸ್ಪರ್ಧಾತ್ಮಕ ಬದುಕು, ಬಾಲ್ಯದಲ್ಲಿ ಸಂಸ್ಕೃತಿಯ ಕೊರತೆ ಹೀಗೆ ಕಾರಣಗಳು ಹಲವಾರು. ಇವುಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನವು ನಾವೇ ಸೃಷ್ಠಿಸಿಕೊಂಡವುಗಳಾಗಿವೆ. ಅದೇನೆ ಇರಲಿ, ಕಳೆದ ಐದು ವರ್ಷಗಳಲ್ಲಿ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳಗೊಂಡಿದೆ. ಅದರಲ್ಲಿ ಗ್ರಾಮೀಣ ಭಾಗದ ಕೊಡುಗೆ ದೊಡ್ಡದಿದೆ. ಆದ್ದರಿಂದ ಈವರೆಗೆ ಮಹಾನಗರ, ನಗರಗಳಿಗೆ ಸೀಮಿತಗೊಂಡಿದ್ದ ತಜ್ಞರು, ಮನೋವೈದ್ಯರು, ಆಪ್ತಸಮಾಲೋಚಕರ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕಿದೆ ಎಂಬ ವರದಿಯನ್ನು ಈಗಾಗಲೇ ಸರಕಾರಕ್ಕೆ ತಜ್ಞರು ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಒಂದಷ್ಟು ಆತ್ಮಹತ್ಯೆಗಳಿಗೆ ಮಾನಸಿಕ ಸಮಸ್ಯೆಯೆ ಕಾರಣವಾಗುತ್ತಿದೆ. ಹಳ್ಳಿಮಂದಿ ತಮ್ಮ ಮಾನಸಿಕ ಸಮಸ್ಯೆಯನ್ನು ಇತರರಲ್ಲಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಸಣ್ಣಪುಟ್ಟ ವಿಷಯಗಳಿಗೂ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಅದರಲ್ಲೂ ಪ್ರಮುಖವಾಗಿ ಯುವಜನಾಂಗದ ಮನಸ್ಸನ್ನು ನಿರಾಳವಾಗಿಸಿ ಮುಂದಿನ ಬದುಕಿಗೆ ಶಕ್ತಿ ತುಂಬುವ ಕೆಲಸಗಳು ನಡೆಯಬೇಕಿದೆ. ಸರಕಾರದ ಅಂಕಿ ಅಂಶದ ಪ್ರಕಾರ 15 ರಿಂದ 25 ವಯಸ್ಸಿನ ಯುವಜನಾಂಗ ಮಾನಸಿಕ ಒತ್ತಡದಂತಹ ಸಮಸ್ಯೆಗೆ ಬಲಿಯಾಗುತ್ತಿದೆ. ಆರಂಭಿಕ ಹಂತದಲ್ಲೇ ಇದನ್ನು ಗುರುತಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಒತ್ತಡ ನಿವಾರಣೆಗಾಗಿ, ಮಾನಸಿಕ ನೆಮ್ಮದಿಗಾಗಿ ತಜ್ಞರ ಬಳಿ ತೆರಳಬೇಕಾದೀತು!
ಪತ್ತೆ ಹೇಗೆ?
ಮಾನಸಿಕ ಸಮಸ್ಯೆ ಆವರಿಸಿಕೊಳ್ಳುತ್ತಿದೆ ಎಂದು ಮೊದಲಿಗೆ ನಮಗೆ ಗೊತ್ತಾಗುವುದೇ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿಗೂ ಹೆದರುವುದು, ಧೈರ್ಯ ಕಳೆದುಕೊಳ್ಳುವುದು, ತಮ್ಮದೇ ಆದ ಕಲ್ಪನಾಲೋಕದಲ್ಲಿ ಏನೇನೋ ಭಾವಿಸಿಕೊಳ್ಳುವುದು, ಯಾರೊಡನೆ ಮಾತನಾಡಬಾರದೆಂಬ ಯೋಚನೆ, ಸದಾ ಯಾವುದೋ ಯೋಚನೆಯಲ್ಲಿ ತೊಡಗಿರುವುದು, ಲವಲವಿಕೆ ಇಲ್ಲದಿರುವುದು, ಕುಟುಂಬದ ಸದಸ್ಯರೊಂದಿಗೆ, ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆಯದಿರುವುದು, ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವುದು, ನಿರುತ್ಸಾಹ, ದಿನಚರಿಯಲ್ಲಿ ಬೇಸರವಾಗಿ ಬದುಕೆ ಬೇಡ ಎಂದೆನಿಸುವುದು, ಒಂಟಿಯಾಗಿ ಇರಬೇಕೆಂಬ ಯೋಚನೆ, ಮತ್ತೆಮತ್ತೆ ನಿದ್ರೆ ಮಾಡಬೇಕೆಂದೆನಿಸುವುದು, ಪದೇ ಪದೇ ಆತ್ಮಹತ್ಯೆಯ ಬಗ್ಗೆ ಯೋಚಿಸುವುದು ಇವು ಮಾನಸಿಕ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ.
ಪರಿಹಾರ ಹೇಗೆ?
ಮುಕ್ತವಾಗಿ ಮಾತನಾಡಿರಿ : ಅಕ್ಕ-ತಂಗಿ, ಅಣ್ಣ-ತಮ್ಮ ಅಥವಾ ಗೆಳೆಯ-ಗೆಳತಿಯರು ಹೀಗೆ ನಿಮ್ಮ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಇವರ ಬಳಿ ಸಮಸ್ಯೆಯನ್ನು ಹಂಚಿಕೊಳ್ಳಿ. ಅವರ ಬೆಂಬಲ ಪಡೆಯಿರಿ.
ಜನರೊಂದಿಗೆ ಬೆರೆಯಿರಿ : ಒಂಟಿಯಾಗಿ ಇರಬೇಡಿ. ಹಳೆಯ ಸ್ನೇಹಿತರು, ಕುಟುಂಬದ ಸದಸ್ಯರು, ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯಿರಿ.
ದಿನಚರಿಯನ್ನು ಬದಲಿಸಿ : ರೂಟಿನ್ ಕೆಲಸವನ್ನು ಬದಲಿಸಿ. ನಿಮಗೆ ಖುಷಿ ನೀಡುವ ವಿಷಯಕ್ಕೆ ಹೆಚ್ಚು ಸಮಯ ನೀಡಿ. ಪ್ರವಾಸ, ಅಧ್ಯಯನ, ಸಂಗೀತ ಕೇಳುವುದು, ಸಿನಿಮಾ ವೀಕ್ಷಣೆ ಮಾಡಿ.
ಮನೋವೈದ್ಯರ ಸಲಹೆ ಪಡೆಯಿರಿ : ಆಪ್ತ ಸಮಾಲೋಚಕರನ್ನು ಭೇಟಿಯಾಗಲು ಹಿಂಜರಿಯಬೇಡಿ. ಅವರ ಸಲಹೆಗಳನ್ನು ಪಾಲಿಸಿರಿ.
ಹವ್ಯಾಸಗಳಿಗೆ ಆದ್ಯತೆ ನೀಡಿ : ಪುಸ್ತಕ ಓದುವ, ಬರವಣಿಗೆ ಮುಂತಾದ ಹವ್ಯಾಸಗಳಿಗೆ ಆದ್ಯತೆ ನೀಡಿ. ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ.
ಡಿಜಿಟಲ್ ಬಳಕೆ ಮಿತಗೊಳಿಸಿ : ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆಯನ್ನು ಅಗತ್ಯ ಇದ್ದರೆ ಮಾತ್ರ ಮಾಡಿ. ಮಾನಸಿಕ ಆರೋಗ್ಯದಲ್ಲಿನ ಏರುಪೇರಿಗೆ ಮೊಬೈಲ್‌ನ ಕೊಡುಗೆ ಬಹು ದೊಡ್ಡದಿದೆ. ಅದರಿಂದ ಹೊರಬರುವುದು ಅತೀ ಅಗತ್ಯ. ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿದೋಷ, ಮಾನಸಿಕ ನೆಮ್ಮದಿ ಹೀಗೆ ಎಲ್ಲವು ದೂರವಾಗುತ್ತದೆ.
ನಮ್ಮ ನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಿಕೊಳ್ಳುವ ಮೂಲಕ ಎದುರಾಗಬಹುದಾದ ಮಾನಸಿಕ ಸಮಸ್ಯೆಗಳಿಂದ ದೂರವಿರಬಹುದು. ಟೆನ್ಶನ್‌ಮುಕ್ತ ಬದುಕನ್ನು ನಮ್ಮದಾಗಿಸಬಹುದಾಗಿದೆ.
ಮಾನಸಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ರಾಷ್ಟç ಮತ್ತು ರಾಜ್ಯಮಟ್ಟದಲ್ಲಿ ಸೂಕ್ತ ನೀತಿಯನ್ನು ರೂಪಿಸಿ ಜಾರಿಗೆ ತರಲು ಇದು ಸಕಾಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಾನಸಿಕ ಆರೋಗ್ಯವನ್ನು ಕಳೆದುಕೊಂಡವರಿಗಾಗಿ ‘ಟೆಲಿಮಾನಸ್’ ಎಂಬ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಇದ್ದವರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಸಹಾಯವಾಣಿ ಸಂಖ್ಯೆ : 1800-8914416.
