ಇಂದುಧರ ಹಳೆಯಂಗಡಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ವೀಡಿಯೋ ಕಂಟೆಂಟ್ಗಳ ಸಂಖ್ಯೆಯೂ ಹೆಚ್ಚಾಗಿದೆ. ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್, ಫೇಸ್ಬುಕ್, ಶಾರ್ಟ್ಸ್ ಹಾಗೂ ಇತರ ವೇದಿಕೆಗಳಲ್ಲಿ ಪ್ರತಿದಿನ ಲಕ್ಷಾಂತರ ವೀಡಿಯೋಗಳು ಅಪ್ಲೋಡ್ ಆಗುತ್ತಿವೆ. ಈ ಬೆಳವಣಿಗೆಯ ನಡುವೆ ವೀಡಿಯೋ ಎಡಿಟಿಂಗ್ ಅನ್ನು ಸುಲಭಗೊಳಿಸಿದ ಆ್ಯಪ್ಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳ ನಡುವೆ ಜನಪ್ರಿಯವಾಗಿರುವ ಒಂದು ಆ್ಯಪ್ ‘ಕ್ಯಾಪ್ಕಟ್’. ಇದು ಚೀನಾದ ಬೈಟ್ ಡ್ಯಾನ್ಸ್ ಕಂಪನಿ ಅಭಿವೃದ್ಧಿಪಡಿಸಿರುವ ವೀಡಿಯೋ ಎಡಿಟಿಂಗ್ ಆ್ಯಪ್ ಆಗಿದೆ. ಕ್ಯಾಪ್ಕಟ್ನ ವಿಶೇಷತೆ ಎಂದರೆ ವೃತ್ತಿಪರ ಎಡಿಟಿಂಗ್ ಜ್ಞಾನವಿಲ್ಲದವರೂ ಸಹ ಸುಲಭವಾಗಿ ಗುಣಮಟ್ಟದ ವೀಡಿಯೋಗಳನ್ನು ಸಿದ್ಧಪಡಿಸಬಹುದು. ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಅಪ್ಲಿಕೇಶನ್ ಈಗ ಡೆಸ್ಕ್ಟಾಪ್ ಮತ್ತು ವೆಬ್ ಆವೃತ್ತಿಗಳಲ್ಲಿಯೂ ಲಭ್ಯವಿದೆ.
ಕ್ಯಾಪ್ಕಟ್ನಲ್ಲಿ ಏನು ಮಾಡಬಹುದು? : ಕ್ಯಾಪ್ಕಟ್ನಲ್ಲಿ ಕಟ್ ಮತ್ತು ಟ್ರಿಮ್ ಮಾಡುವ ಸೌಲಭ್ಯ ಮಾತ್ರವಲ್ಲದೆ ಹಲವು ಆಧುನಿಕ ಎಡಿಟಿಂಗ್ ವೈಶಿಷ್ಟ್ಯಗಳೂ ಇವೆ.
ಅಟೋ ಕ್ಯಾಪ್ಷನ್ : ವೀಡಿಯೋದಲ್ಲಿರುವ ಧ್ವನಿಯನ್ನು ಗುರುತಿಸಿ ಸ್ವಯಂಚಾಲಿತವಾಗಿ ಸಬ್ಟೈಟಲ್ ಸೇರಿಸುವ ವ್ಯವಸ್ಥೆ ಇದೆ. ಇದು ಶಾರ್ಟ್ ವೀಡಿಯೋ ಕ್ರಿಯೇಟರ್ಗಳಿಗೆ ಉಪಯುಕ್ತ. ವಿಶೇಷ ಎಂದರೆ ಕೇವಲ ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ ಸೇರಿದಂತೆ ಹತ್ತು ಹಲವು ಭಾರತೀಯ ಭಾಷೆಗಳ ಆಡಿಯೋವನ್ನೂ ಈ ಆ್ಯಪ್ ಗ್ರಹಿಸಿ ಸಬ್ಟೈಟಲ್ ನೀಡುತ್ತದೆ.
ಟೆಂಪ್ಲೇಟ್ಗಳು : ಇದರಲ್ಲಿ ಹಲವು ಪೂರ್ವ ಸಿದ್ಧ ಟೆಂಪ್ಲೇಟ್ಗಳು ಲಭ್ಯವಿರುತ್ತದೆ. ಅಲ್ಲಿ ನಮ್ಮ ಫೋಟೋ ಅಥವಾ ವೀಡಿಯೋ ಸೇರಿಸಿದರೆ ತಕ್ಷಣ ಆಕರ್ಷಕ ರೀಲ್ಸ್ ಸಿದ್ಧವಾಗುತ್ತದೆ.
ಎಐ ವೈಶಿಷ್ಟ್ಯಗಳು : ಬ್ಯಾಕ್ಗ್ರೌಂಡ್ ತೆಗೆಯುವುದು, ಆಡಿಯೋದಿಂದ ನಾಯ್ಸ್ ತೆಗೆಯುವುದು, ಪಠ್ಯದಿಂದ ಧ್ವನಿ (ಖಿexಣ-ಣo-Sಠಿeeಛಿh), ಎಐ ಎಫೆಕ್ಟ್ ಮುಂತಾದ ಸೌಲಭ್ಯಗಳು ಲಭ್ಯ.
ಸಂಗೀತ ಮತ್ತು ಎಫೆಕ್ಟ್ಗಳು : ವೀಡಿಯೋಗಳಿಗೆ ಹೊಂದುವ ವಿವಿಧ ಮ್ಯೂಸಿಕ್ ಟ್ರ್ಯಾಂಕ್ಗಳು, ಟ್ರಾನ್ಸಿಷನ್ಗಳು ಮತ್ತು ವೀಡಿಯೋ ಎಫೆಕ್ಟ್ಗಳು ಇದರಲ್ಲಿವೆ.
ಮಲ್ಟಿ-ಲೇಯರ್ ಎಡಿಟಿಂಗ್ : ಇತರ ಮೊಬೈಲ್ ಎಡಿಟಿಂಗ್ ಅಪ್ಲಿಕೇಶನ್ಗೆ ಹೋಲಿಸಿದರೆ ಇದರಲ್ಲಿ ಮಲ್ಟಿ ಲೇಯರ್ ಎಡಿಟಿಂಗ್ ಸಾಧ್ಯ. ಅಂದರೆ ಒಂದೇ ಸಮಯದಲ್ಲಿ ಮೇಲಿಂದ ಮೇಲೆ ವೀಡಿಯೋ, ಚಿತ್ರ, ಪಠ್ಯ ಮತ್ತು ಧ್ವನಿಯ ಲೇಯರ್ಗಳನ್ನು ಸೇರಿಸಿ ವೃತ್ತಿಪರ ಶೈಲಿಯ ವೀಡಿಯೋವನ್ನು ರಚಿಸಬಹುದು.
ಇವಿಷ್ಟೇ ಅಲ್ಲದೇ ಉಳಿದ ಎಡಿಟಿಂಗ್ ಆ್ಯಪ್/ಸಾಫ್ಟ್ವೇರ್ಗಳಲ್ಲಿರುವ ಗ್ರೀನ್ ಸ್ಕ್ರೀನ್ ಅಥವಾ ಬ್ಯಾಕ್ಗ್ರೌಂಡ್ ತೆಗೆಯಲು ಕ್ರೋಮಾ ಕೀ, ವೀಡಿಯೋ ವೇಗ ಬದಲಿಸುವ ತಂತ್ರ, ಕೀಫ್ರೇಮ್ ಅ್ಯನಿಮೇಷನ್, ಕಲರ್ ಕರೆಕ್ಷನ್ಸ್ ಮತ್ತು ಫಿಲ್ಟರ್ಗಳು, ಕ್ಲೌಡ್ ಎಡಿಟಿಂಗ್ ಹಾಗೂ ಹತ್ತು ಹಲವು ವೈಶಿಷ್ಟö್ಯಗಳು ಕ್ಯಾಪ್ಕಟ್ನಲ್ಲಿ ಲಭ್ಯವಿದೆ.
ಕಂಟೆಂಟ್ ಕ್ರಿಯೇಟರ್ಗಳಿಗೆ ಹೇಗೆ ಸಹಾಯಕ? : ಇಂದಿನ ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಷನ್ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಯೂಟ್ಯೂಬರ್ಗಳು, ಸಾಮಾಜಿಕ ಜಾಲತಾಣ ನಿರ್ವಾಹಕರು, ಡಿಜಿಟಲ್ ಮಾರ್ಕೆಟರ್ಗಳು ಮತ್ತು ಸಣ್ಣ ಉದ್ಯಮಿಗಳು ತಮ್ಮ ಪ್ರಚಾರದ ವೀಡಿಯೋಗಳನ್ನು ವೇಗವಾಗಿ ಸಿದ್ಧಪಡಿಸಲು ‘ಕ್ಯಾಪ್ಕಟ್’ ಅನ್ನು ಬಳಸುತ್ತಿದ್ದಾರೆ. ವಿಶೇಷವಾಗಿ ರೀಲ್ಸ್ ಮತ್ತು ಶಾರ್ಟ್ ವೀಡಿಯೋಗಳ ಕಾಲದಲ್ಲಿ ವೇಗ ಮತ್ತು ಗುಣಮಟ್ಟ ಎರಡೂ ಮುಖ್ಯವಾಗಿರುವುದರಿಂದ ‘ಕ್ಯಾಪ್ಕಟ್’ ಜನಪ್ರಿಯತೆಯನ್ನು ಗಳಿಸಿದೆ.
ಟೀಕೆಗಳೂ ಇವೆ : ಕ್ಯಾಪ್ಕಟ್ ಜನಪ್ರಿಯವಾದಷ್ಟೇ, ಡೇಟಾ ಗೌಪ್ಯತೆ ಮತ್ತು ಬಳಕೆದಾರರ ಮಾಹಿತಿಯ ನಿರ್ವಹಣೆ ಕುರಿತ ಚರ್ಚೆಗಳೂ ಕಾಲಕಾಲಕ್ಕೆ ಕೇಳಿಬಂದಿವೆ. ಇದು ಚೀನೀ ಕಂಪನಿ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್ ಆಗಿದ್ದು, ಭಾರತದಲ್ಲಿ ಈ ಆ್ಯಪ್ ಅಧಿಕೃತವಾಗಿ ಲಭ್ಯವಿಲ್ಲ. ಪರಿಣಾಮವಾಗಿ ಪ್ಲೇ ಸ್ಟೋರ್ನಲ್ಲಿ ಇದು ಕಾಣಿಸುವುದಿಲ್ಲ. ಕೆಲವು ಬಳಕೆದಾರರು ವಿಪಿಎನ್ ಬಳಸಿ ಇದನ್ನು ಪ್ರವೇಶಿಸುತ್ತಿದ್ದಾರೆ.
ಏನಿದು ವಿಪಿಎನ್? : ವರ್ಚುವಲ್ ಪ್ರ್ಯೇವೆಟ್ ನೆಟ್ವರ್ಕ್ ಎಂಬುದು ಬಳಕೆದಾರರ ಇಂಟರ್ನೆಟ್ ಸಂಪರ್ಕವನ್ನು ಬೇರೆ ದೇಶದ ಸರ್ವರ್ ಮೂಲಕ ಸಂಪರ್ಕಿಸುವ ತಂತ್ರಜ್ಞಾನವಾಗಿದೆ. ಕೆಲವು ನಿರ್ಬಂಧಿತ ವೆಬ್ಸೈಟ್ ಅಥವಾ ಆ್ಯಪ್ಗಳನ್ನು ಬಳಸಲು ಕೆಲವರು ಇದನ್ನು ಬಳಸುತ್ತಾರೆ. ಸ್ಮಾರ್ಟ್ಫೋನ್ ಒಳಗೆಯೇ ವಿಪಿಎನ್ ಆನ್ ಮಾಡಲು ಅವಕಾಶ ಇರುತ್ತದೆ ಅಥವಾ ವಿಪಿಎನ್ ಸೇವೆ ಕೊಡುವ ಕೆಲವು ಆ್ಯಪ್ಗಳೇ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ. ನಮ್ಮ ಮೊಬೈಲ್ನ ನೆಟ್ವರ್ಕ್ ಲೊಕೇಶನ್ ಅನ್ನು ಬೇರೆ ದೇಶಕ್ಕೆ ಬದಲಾಯಿಸಲು ವಿಪಿಎನ್ ಬಳಸುವುದು ಅನಿವಾರ್ಯವಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಉಚಿತ ವಿಪಿಎನ್ಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯವಿದೆ. ಒಟ್ಟಾರೆಯಾಗಿ ವೀಡಿಯೋ ಎಡಿಟಿಂಗ್ ಕೇವಲ ವೃತ್ತಿಪರರ ಕ್ಷೇತ್ರವಾಗಿತ್ತು. ಆದರೆ ಕ್ಯಾಪ್ಕಟ್ನಂತಹ ಆ್ಯಪ್ಗಳು ಆ ಕೆಲಸವನ್ನು ಸಾಮಾನ್ಯ ಬಳಕೆದಾರರ ಕೈಗೆ ತಂದಿವೆ.
