ಮನಸ್ಸಿಗೆ ಪಾಠ

ಈ ಜಗತ್ತು ಒಳಿತು-ಕೆಡುಕುಗಳೆರಡರ ಸಮ್ಮಿಶ್ರಣ. ಇಲ್ಲಿ ಹತ್ತು ಹಲವು ರೀತಿಯ, ವ್ಯಕ್ತಿತ್ವ, ಸ್ವಭಾವದ ಜನರನ್ನು ಕಾಣಬಹುದು. ಮುಖ್ಯವಾಗಿ ಸಮಾಜದಲ್ಲಿ ಎಲ್ಲ ಕಡೆ ಒಳ್ಳೆಯವರ ಒಂದು ಪ್ರತ್ಯೇಕ ಪಂಗಡವಿರುತ್ತದೆ. ಅವರು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿರುತ್ತಾರೆ. ಅವರು ಪರೋಪಕಾರಿಗಳು, ಸಜ್ಜನರ ಸಂಗವನ್ನೆ ಬಯಸುವವರು, ಜೇನು ನೊಣದಂತಿರುತ್ತಾರೆ. ಅಂದರೆ ಜೇನು ನೊಣ ಯಾವಾಗಲೂ ಹೂವಿನೊಳಗಿನ ಮಧುವನ್ನು ಹೂವಿಗೆ ನೋವಾಗದಂತೆ ಸಂಗ್ರಹಿಸುತ್ತದೆ. ಜೇನು ಬಂದರೆ ಮಾತ್ರ ಹೂವಿನ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇವರುಗಳು ಎಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತವೆಯೂ ಅಲ್ಲಿ ಉಪಸ್ಥಿತರಿರುವುದು ಮಾತ್ರವಲ್ಲ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ಒಳಿತು ಮಾಡಿದವರನ್ನು ಬಾಯಿ ತುಂಬಾ ಹೊಗಳಿ ಹುರಿದುಂಬಿಸುತ್ತಾರೆ. ಅದು ಅವರಿಗೆ ಇನ್ನಷ್ಟು ಸೇವಾಕಾರ್ಯಗಳನ್ನು ಮಾಡಲು ಪ್ರೇರಣೆ ನೀಡುತ್ತದೆ.
ಇನ್ನೊಂದು ವರ್ಗದ ಜನರಿರುತ್ತಾರೆ. ಅವರಿಗೆ ಜಗತ್ತಿನೆಲ್ಲೆಡೆ ಕೆಟ್ಟದ್ದೇ ಕಾಣಸಿಗುತ್ತದೆ. ಕೆಟ್ಟ ಕೆಲಸ ಮಾಡಿ ಊರಿನಲ್ಲಿ ಹೀರೋಗಳ ರೀತಿ ಮೆರೆದಾಡುತ್ತಿರುತ್ತಾರೆ. ಕೆಡುಕರ ಹಿಂದೆ ಚೇಲಗಳಂತೆ ಓಡಾಡುತ್ತಾ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುತ್ತಾರೆ. ಇದರಿಂದಾಗಿ ಕೆಟ್ಟ ಕೆಲಸ ಮಾಡುವವ ಮತ್ತಷ್ಟು ಉತ್ಸಾಹಿತನಾಗುತ್ತಾನೆ. ಸಿನಿಮಾಗಳಲ್ಲಿ ವಿಲನ್ ಯಾವಾಗಲೂ ಪ್ರತಿನಾಯಕನಿದ್ದಂತೆ. ಆತನಲ್ಲಿ ನಾಯಕನಲ್ಲಿರಬೇಕಾದ ಎಲ್ಲಾ ಗುಣಗಳು ಇರುತ್ತವೆ. ಅವನಲ್ಲಿರುವ ಧೈರ್ಯ, ಆತ್ಮವಿಶ್ವಾಸ ಇವೆಲ್ಲವು ಕೆಟ್ಟ ಕೆಲಸಕ್ಕೆ ಉಪಯೋಗವಾಗುತ್ತದೆ. ಎಲ್ಲಿ ಪೆಟ್ಟು, ಗಲಾಟೆ, ದೊಂಬಿ ನಡೆಯುತ್ತದೆಯೋ ಅಲ್ಲೆಲ್ಲಾ ಇಂಥವರು ಇದ್ದೇ ಇರುತ್ತಾರೆ. ಆತ ಸಂಪತ್ತು ಗಳಿಸುವುದೂ ಕೆಟ್ಟ ಮಾರ್ಗದಲ್ಲಿ, ಅದನ್ನು ವ್ಯಯಿಸುವುದೂ ಕೆಟ್ಟ ಕೆಲಸಗಳಿಗೆ. ಒಳ್ಳೆಯ ವಿಚಾರಗಳಿಗೆ ಕಿವಿಗೊಡುವ, ಒಪ್ಪುವ ಜಾಯಮಾನ ಇವರದ್ದಲ್ಲ. ಇವರ ಕೊಳಕು ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದೆಲ್ಲವೂ ಕೆಟ್ಟದ್ದೇ. ಸಿನಿಮಾಗಳಲ್ಲಿ ಹೀರೋಗಳು, ವಿಲನ್‌ಗಳು ಇದ್ದೇ ಇರುತ್ತಾರೆ. ಆದರೆ ವಿಲನ್‌ಗಳನ್ನು ಎಷ್ಟು ವೈಭವೀಕರಿಸುತ್ತಾರೆಂದರೆ ಇಡೀ ಸಿನಿಮಾದುದ್ದಕ್ಕೂ ಅವರು ಆಡಿದ್ದೇ ಆಟ ಅನ್ನುವಂತಿರುತ್ತದೆ. ಇತ್ತ ಹೀರೋ ಕೊನೆಯವರೆಗೆ ಕಷ್ಟಪಟ್ಟು ಕೊನೆಗೆ ‘ಸತ್ಯಮೇವ ಜಯತೆ’ ಎಂಬಂತೆ ಜಯಗಳಿಸುತ್ತಾನೆ. ಮಕ್ಕಳು ಇದನ್ನು ನೋಡುತ್ತಿದ್ದರೆ ಅವರಿಗೆ ಹೀರೋಗಿಂತಲೂ ವಿಲನ್‌ನ ಧೈರ್ಯ, ಸಾಹಸಗಳೇ ಇಷ್ಟ ಆಗುತ್ತವೆ. ಏಕೆಂದರೆ ಆತನ ಸುತ್ತಮುತ್ತ ಆತನನ್ನು ಬೆಂಬಲಿಸುವ, ಆರಾಧಿಸುವ ಜನರಿರುತ್ತಾರೆ.
ಬಣ್ಣಗಳಲ್ಲಿ ಕಪ್ಪು ಮತ್ತು ಬಿಳುಪು ಎರಡೇ ಬಣ್ಣಗಳು ಇರುವುದಿಲ್ಲ. ಅವೆರಡರ ಮಧ್ಯೆ ಬೂದು ಬಣ್ಣವೂ ಇರುತ್ತದೆ. ಹಾಗೆಯೇ ನಿತ್ಯ ಜೀವನದಲ್ಲಿಯೂ ಇಂಥ ವ್ಯಕ್ತಿಗಳು ಸಾಕಷ್ಟು ಮಂದಿ ಇದ್ದಾರೆ. ಒಳ್ಳೆಯವರಿಗೆ ಒಳ್ಳೆಯವರಾಗಿ, ಕೆಟ್ಟವರಿಗೆ ಕೆಟ್ಟವರಾಗಿಯೇ ವರ್ತಿಸುವ ಈ ಮಂದಿ ತಮ್ಮ ಬದುಕಿನ ಸುತ್ತ ಒಂದು ಪರಿಧಿಯನ್ನು ಕಟ್ಟಿಕೊಂಡಿರುತ್ತಾರೆ. ಇವರು ಅತಿಯಾದ ಒಳಿತನ್ನು ಮಾಡಲು ಹೋಗುವುದಿಲ್ಲ. ತಮಗೆ ಬೇಕಾದವರಿಗೆ ಆಪತ್ಕಾಲಕ್ಕೆ ಖಂಡಿತಾ ನೆರವಾಗುತ್ತಾರೆ. ಹಾಗೆಂದು ತಮಗೆ ಅನ್ಯಾಯವಾದಾಗ ಸಹಿಸಿಕೊಳ್ಳುವುದಿಲ್ಲ. ಬೇಕಾದಾಗ ದ್ವೇಷ ಸಾಧಿಸಲೂ ಹಿಂಜರಿಯುವವರಲ್ಲ.
ಇನ್ನೊಂದು ವರ್ಗದ ಜನರಿರುತ್ತಾರೆ. ಅವರು ಸಮಾಜದಲ್ಲಿ ನಡೆಯುತ್ತಿರುವ ಒಳಿತು-ಕೆಡುಕುಗಳೆರಡನ್ನೂ ಗಮನಿಸುತ್ತಿರುತ್ತಾರೆ. ಆದರೆ ಯಾವುದನ್ನೂ ಸ್ವೀಕರಿಸದ ನಿರ್ಲಿಪ್ತ ಮನೋಭಾವ. ಅವರು ಸದಾ ಸಮಾಜ, ವ್ಯಕ್ತಿಗಳಿಂದ ದೂರ ಇರಲು ಬಯಸುತ್ತಾರೆ. ಯಾವ ವಿಚಾರಗಳಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ.
ಸಮಾಜದಲ್ಲಿರುವ ಒಳ್ಳೆಯ ವಿಚಾರಗಳನ್ನು ಸ್ವೀಕರಿಸಲು ನಾವು ನಮ್ಮ ಮನಸ್ಸಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ. ಕೆಟ್ಟ ವಿಚಾರ, ಬುದ್ಧಿಯನ್ನು ತಕ್ಷಣ ಗ್ರಹಿಸುವ ನಮ್ಮ ಮನಸ್ಸು ಒಳ್ಳೆಯ ವಿಚಾರಗಳನ್ನು ಅಷ್ಟು ಬೇಗ ಗ್ರಹಿಸಲಾರದು. ಅದಕ್ಕೆ ನಿರಂತರ ಪ್ರಯತ್ನ ಬೇಕು.
ಬಿರ್ಲಾ ಸಂಸ್ಥೆಗೆ ಅವರ ಕಂಪನಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರಿಂದ ಹಲವು ಕೋಟಿ ರೂಪಾಯಿಗಳ ನಷ್ಟ ಆಯಿತಂತೆ. ಆಗ ಬಿರ್ಲಾರವರು ಆ ಉದ್ಯೋಗಿ ಇಷ್ಟು ವರ್ಷಗಳಲ್ಲಿ ಸಂಸ್ಥೆಯನ್ನು ಹೇಗೆ ಮುನ್ನಡೆಸಿದ್ದಾನೆ, ಯಾವೆಲ್ಲಾ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾನೆ, ಎಷ್ಟು ಆದಾಯ ತಂದುಕೊಟ್ಟಿದ್ದಾನೆ ಹೀಗೆ ಅವನಿಂದಾದ ಒಳಿತುಗಳ ಪಟ್ಟಿ ಮಾಡಿ ಈ ಒಂದು ತಪ್ಪಿಗಾಗಿ ಆತನನ್ನು ಸಂಸ್ಥೆಯಿಂದ ಕೆಲಸದಿಂದ ವಜಾಗೊಳಿಸಬಾರದೆಂಬ ನಿರ್ಧಾರಕ್ಕೆ ಬಂದರಂತೆ. ಇದರಿಂದಾಗಿ ಇಡೀ ಸಂಸ್ಥೆಯಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿದ್ದಲ್ಲದೇ ಸಂಸ್ಥೆಯಲ್ಲಿ ದುಡಿಯುವ ಇತರ ಮಂದಿಗೂ ಒಂದು ರೀತಿಯ ನೆಮ್ಮದಿ ದೊರೆತಂತಾಯಿತು. ನಮ್ಮಿಂದ ಸಂಸ್ಥೆಗೆ ಯಾವುದೇ ರೀತಿಯಲ್ಲಿ ನಷ್ಟ ಆಗಬಾರದೆಂಬ ಸಂಕಲ್ಪವೂ ಕೆಲಸಗಾರರಲ್ಲಿ ಗಟ್ಟಿಯಾಯಿತು. ಸತ್ ಚಿಂತನೆಗಳತ್ತ ಗಮನ ಹರಿಸುವ ಸ್ವಭಾವ ಇದ್ದಾಗ ಮಾತ್ರ ಇಂತಹ ಮಾನವೀಯ ಸಂಬಂಧಗಳು ದೀರ್ಘ ಕಾಲ ಉಳಿಯುವುದಕ್ಕೆ ಸಾಧ್ಯವಾಗುತ್ತದೆ.
ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಭಾಷೆ ಮತ್ತು ಮಾಡುವ ಕೆಲಸದಲ್ಲಿ ಸೂಕ್ಷ್ಮತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಈ ಸೂಕ್ಷ್ಮತೆ ಸಿದ್ಧಿ ಆದಾಗ ನಮ್ಮಿಂದ ಯಾರಿಗೂ ಕೆಡುಕಾಗುವ ಸಾಧ್ಯತೆಗಳಿರುವುದಿಲ್ಲ.
ಸಮಾಜದಲ್ಲಿ ಎಲ್ಲರ ಜೊತೆ ಸೇರುವವರಿಗೆ ವ್ಯಕ್ತಿಯ ಒಳಿತು, ಕೆಡುಕುಗಳ ಬಗ್ಗೆ ಅರಿವಾಗುತ್ತದೆ. ಅಂಥ ಸಂದರ್ಭದಲ್ಲಿ ಕೆಡುಕನ್ನು ಬಿಟ್ಟು ಒಳಿತಿನ ಕಡೆಗೆ ಗಮನಹರಿಸುವುದು ಒಳ್ಳೆಯದು. ಪರರ ನಿಂದನೆಗಿಂತ ಅವರ ಒಳ್ಳೆಯ ಗುಣಗಳನ್ನು ವೈಭವೀಕರಿಸುವುದು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಇಂದು ಮನುಷ್ಯನಿಗೆ ತಾನು, ತನ್ನ ಹೆಂಡತಿ, ಮಕ್ಕಳು, ಮನೆ, ಕಾರು, ಉದ್ಯೋಗ ಇವುಗಳ ಬಗ್ಗೆ ಅಭಿಮಾನ, ಮೋಹ ಅತಿಯಾಗಿ ಇತರರ ಒಳ್ಳೆಯತನ, ಸದ್ಗುಣಗಳು ಕಣ್ಣಿಗೆ ಗೋಚರಿಸುವುದಿಲ್ಲ. ಅವುಗಳಿಗೆ ಕಿವಿ ಕೊಡುವುದಕ್ಕೂ ಮನಸ್ಸಿಲ್ಲ. ಸ್ವಪ್ರತಿಷ್ಠೆ, ದುರಹಂಕಾರಗಳಿಂದಾಗಿ ನಮಗೆ ಗೊತ್ತಿಲ್ಲದೆ ನಾವು ಇತರರಿಂದ ದೂರವಾಗುತ್ತೇವೆ. ಇತರರು ಅವರಿಂದ ನಮ್ಮನ್ನು ದೂರವಾಗಿಸುತ್ತಾರೆ. ಆದ್ದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟು ಸದ್ಗುಣಗಳನ್ನು ಬೆಳೆಸಿಕೊಂಡು ಇತರರ ಕಷ್ಟ-ಸುಖಗಳನ್ನು ಅರ್ಥೈಸಿಕೊಂಡು ಬದುಕುವುದನ್ನು ಕಲಿಯೋಣ. ಆ ಮೂಲಕ ಮಾನವೀಯ ಸಮಾಜವನ್ನು ನಿರ್ಮಿಸೋಣ.

Facebook
Twitter
WhatsApp
LinkedIn
Telegram