ಮಳೆಗಾಲದ ವಿಪತ್ತುಗಳ ಬಗ್ಗೆ ಜಾಗರೂಕರಾಗಿರೋಣ!

ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿದ್ದ ಕಾಡಾನೆಯ ಜೊತೆ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಂಡ ಸುದ್ದಿ ಹಿಂದೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಸಾಹಸಗಳನ್ನು ಮಾಡುವುದು ಆಪತ್ತನ್ನು ಮೈ ಮೇಲೆ ಎಳೆದುಕೊಂಡಂತೆ. ಇತ್ತೀಚಿನ ದಿನಗಳಲ್ಲಿ ಅಪಾಯದ ಬಗ್ಗೆ ಅರಿವಿರುವ ವಿದ್ಯಾವಂತರೇ ಭಂಡ ಧೈರ್ಯ ಪ್ರದರ್ಶಿಸಿ ತೊಂದರೆಗಳನ್ನು ಆಹ್ವಾನಿಸುವುದು ದುರಾದೃಷ್ಟಕರ. ಒಂದು ವೇಳೆ ಆನೆ ತುಳಿದು ಗಂಭೀರ ಗಾಯಗಳಾದರೆ, ಜೀವ ಹಾನಿ ಮುಂತಾದ ದುರ್ಘಟನೆ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮುಂದಕ್ಕೆ ಅವರ ಕುಟುಂಬದ ಗತಿ ಏನು? ಕಾಡಾನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಬೇಕಿತ್ತೆ? ಇವೆಲ್ಲ ನಾವು ಚಿಂತಿಸಬೇಕಾದ ವಿಚಾರವಾಗಿದೆ. ಇದೊಂದು ಉದಾಹರಣೆಯಷ್ಟೇ. ಜಲಪಾತಗಳಲ್ಲಿ ಅಪಾಯಕಾರಿ ಸೆಲ್ಫಿ, ಬೆಟ್ಟ ಹತ್ತಿ ಜಾರಿ ಬೀಳುವ, ಸರಿಯಾದ ಮಾರ್ಗದರ್ಶಕರಿಲ್ಲದೆ ಚಾರಣ ಹೋಗಿ ಕಾಡಿನಲ್ಲಿ ದಾರಿ ತಪ್ಪುವುದು ಮುಂತಾದ ಅನೇಕ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ಅದರಲ್ಲೂ ಮಳೆಗಾಲದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕೂಡ ಕಡಿಮೆಯೇ. ಇನ್ನೇನು ಮುಂಗಾರು ಮಳೆ ಚುರುಕುಗೊಳ್ಳುತ್ತದೆ. ನದಿ ತೊರೆಗಳು ತುಂಬಿ ಹರಿಯಲು ಪ್ರಾರಂಭಿಸುತ್ತವೆ. ಜಲಪಾತಗಳು ಮೈದುಂಬಿ ಹರಿಯುತ್ತವೆ. ಇದರೊಂದಿಗೆ ಮಳೆಯಿಂದಾಗಿ ಹಚ್ಚ ಹಸಿರಿನಿಂದ ರಮಣೀಯವಾಗಿ ಕಂಗೋಳಿಸುತ್ತಿರುವ ಈ ಪಕೃತಿಯೂ ಒಮ್ಮೊಮ್ಮೆ ರೌದ್ರ ರೂಪವನ್ನೂ ತಾಳುತ್ತದೆ ಎನ್ನುವುದು ಅಷ್ಟೇ ಸತ್ಯ.
ಕೆಲ ದಶಕಗಳ ಹಿಂದೆ ಮಳೆಗಾಲ ಬಂದಾಗ ಮಕ್ಕಳು ಮಳೆಯಲ್ಲಿ ನೆನೆಯುವುದು, ನೀರಾಟವಾಡುವುದು, ದೋಣಿ ತಯಾರಿಸಿ ನೀರಲ್ಲಿ ತೇಲಿ ಬಿಡುವ ಆಟಗಳನ್ನು ಆಡುತ್ತಿದ್ದರು. ಹೆತ್ತವರು ಮಕ್ಕಳನ್ನು ಮಳೆಗಾಲದ ಸಂದರ್ಭ ತೊರೆ, ಹಳ್ಳದ ಕಡೆ ಹೋಗದಿರುವಂತೆ ಗದರುತ್ತಿದ್ದರು ಮತ್ತು ಎಚ್ಚರಿಕೆ ವಹಿಸುತ್ತಿದ್ದರು. ಪ್ರವಾಸವೆಲ್ಲ ನಿಷಿದ್ಧವಾಗಿತ್ತು. ಆದರೆ ಈಗ ಸಾಕಷ್ಟು ಬದಲಾಗಿದೆ. ಮಳೆಗಾಲದಲ್ಲಿ ಪ್ರವಾಸ ಹೋಗುವುದು ಹೆಚ್ಚಾಗಿದೆ. ಪ್ರಕೃತಿ, ಗಿರಿ ಪ್ರದೇಶ, ಮೈದುಂಬಿ ಹರಿಯುವ ಜಲಪಾತಗಳ ವೀಕ್ಷಣೆ, ಕಡಲ ಬಳಿ ವಿಹಾರಗಳಿಗೆ ಜನ ಹಾತೊರೆಯುತ್ತಾರೆ. ಯುವ ಜನತೆಯಲ್ಲಿ ಸಾಹಸ ಮನೋಭಾವವೂ ಹೇರಳವಾಗಿದೆ. ಪ್ರಕೃತಿ ವೀಕ್ಷಣೆ ತಪ್ಪಲ್ಲ, ಆದರೆ ನಿಷೇಧಿತ ಪ್ರದೇಶಗಳಿಗೆ ತೆರಳುವುದು, ಚಾರಣದಲ್ಲಿ ಸಾಹಸ ಪ್ರದರ್ಶಿಸುವುದು, ಪ್ರಾಣವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನದಿಯಲ್ಲಿ ಈಜುವ ಸಾಹಸ ಮಾಡುವುದು ಹೀಗೆ ಜೀವಕ್ಕೆ ಅಪಾಯ ತಂದೊಡ್ಡುವ ಸನ್ನಿವೇಶಗಳಿಗೆ ಸಿಲುಕುವುದನ್ನು ಸ್ವಯಂಕೃತ ಅಪರಾಧ ಎನ್ನಬಹುದು. ಅಪಾಯಕ್ಕೆ ಆಹ್ವಾನ ನೀಡುವ ಹುಚ್ಚಾಟಗಳಿಂದ ಆದಷ್ಟು ದೂರವಿರಬೇಕಾಗಿದೆ.
ವಿಪರೀತ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ತಗ್ಗು ಪ್ರದೇಶಗಳು ಮುಳುಗಡೆಯಾಗುವುದು, ಕಡಲ್ಕೊರೆತ, ಸಿಡಿಲು ಬಡಿತ, ಭೂ ಕುಸಿತ ಹೀಗೆ ಅನೇಕ ರೀತಿಯಲ್ಲಿ ಜನ ಜೀವನಕ್ಕೆ ಕುತ್ತು ಉಂಟಾಗುತ್ತದೆ. ಇಂತಹ ಪ್ರಾಕೃತಿಕ ವಿಕೋಪಗಳಿಂದ ಆಗುವ ಅಪಾಯ, ಹಾನಿಗಳು ಸಂಭವಿಸುವುದು ಒಂದೆಡೆಯಾದರೆ, ನಾವೇ ಆಪತ್ತನ್ನು ಆಹ್ವಾನಿಸುವುದು ಮತ್ತೊಂದು ಸಂಗತಿ.
ಕಳೆದ ವರ್ಷವೂ ಮಳೆಗಾಲದಲ್ಲಿ ಅನೇಕರು ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಜಲಪಾತಗಳ ತೀರ ಸನಿಹ ಹೋಗಬೇಡಿ, ನೀರಿನಲ್ಲಿ ಈಜಬೇಡಿ, ಇಳಿಜಾರು ಪ್ರದೇಶ ಎಚ್ಚರದಿಂದಿರಿ, ಕಣಿವೆಗಳ ಬಳಿ ಇಳಿಯಬೇಡಿ, ದೂರದಿಂದಲೇ ವೀಕ್ಷಿಸಿ ಎಂಬ ಎಚ್ಚರಿಕೆಯ ಫಲಕಗಳಿದ್ದರೂ ಅದನ್ನು ನೋಡಿಯೂ ನೋಡದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಮೋಜಿಗಾಗಿ, ಸೆಲ್ಫಿಗಾಗಿ ಜೀವವನ್ನೇ ಕಳೆದುಕೊಳ್ಳುವ ಯುವ ಜನತೆಗೆ ಜೀವದ ಮೌಲ್ಯದ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ.
ಕಾಲೇಜು, ದೇವಸ್ಥಾನ, ಇನ್ನೆಲ್ಲಿಗೋ ಹೋಗುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತರ ಜೊತೆ ಸೇರಿ ನದಿಯಲ್ಲಿ ಈಜುವುದಕ್ಕೆ, ಜಲಪಾತಗಳಲ್ಲಿ ಸ್ನಾನ ಮಾಡುವುದಕ್ಕೆ ತೆರಳಿ ಸಾವನ್ನಪ್ಪಿದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಇನ್ನೂ ಬಾಳಿ ಬದುಕಬೇಕಾದ ಮಕ್ಕಳು, ಯುವಜನತೆ ಇಂತಹ ದುರಂತಗಳಿಗೆ ಬಲಿಯಾಗುವುದು ನಿಜಕ್ಕೂ ದುರಾದೃಷ್ಟಕರ. ಅಪರೂಪದ ಫೋಟೋ ಕ್ಲಿಕ್ಕಿಸಬೇಕು, ಯಾರೂ ಮಾಡದ ಸಾಹಸ ಮಾಡಬೇಕು ಎಂಬ ಸಂಗತಿಗಳೇ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಪ್ರೇರಣೆ ನೀಡುತ್ತವೆ. ಈ ಬಗ್ಗೆ ‘ಸಾಹಸ ಮಾಡಿ ಸಾವನ್ನು ಆಹ್ವಾನಿಸಬೇಡಿ’ ಎಂದು ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಪ್ರತಿ ವರ್ಷವೂ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೂ, ಎಚ್ಚರಿಕೆ ಫಲಕಗಳನ್ನು ಕಡೆಗಣಿಸುವುದು ಹಾಗೂ ಗೊತ್ತಿದ್ದೂ ತಪ್ಪು ಮಾಡುವುದು ಖೇದಕರ.
ಮಳೆಗಾಲದಲ್ಲಿ ವಾಹನ ಚಾಲನೆಯ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಳೆಯಿಂದ ರಸ್ತೆಗಳು ಜಾರುವುದು, ಹೊಂಡ ಗುಂಡಿಗಳು ನೀರಿನಿಂದ ತುಂಬುವುದರಿAದ ಸ್ಕಿಡ್ ಆಗುವುದು, ನಿಯಂತ್ರಣ ತಪ್ಪುವುದು ಹೆಚ್ಚು. ಜೊತೆಗೆ ರಸ್ತೆ ಮತ್ತು ರಸ್ತೆಯಲ್ಲಿ ಬರುವ ವಾಹನಗಳು ಸರಿಯಾಗಿ ಕಾಣದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಯುವ ಜನತೆ ವೇಗವಾಗಿ ಬೈಕ್ ಚಾಲನೆ ಮಾಡುವುದು ಮಾತ್ರವಲ್ಲದೆ ವ್ಹೀಲಿಂಗ್, ಸ್ಟಂಟ್‌ನಂತಹ ಅಪಾಯಕಾರಿ ಸಾಹಸಕ್ಕೆ ತೊಡಗಿಸಿಕೊಳ್ಳುವುದೂ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಮಳೆಗಾಲದಲ್ಲಿ ರಸ್ತೆ ಅಪಘಾತಗಳ ಬಗ್ಗೆ ಅರಿತು ನಿಧಾನವಾಗಿ ವಾಹನ ಚಾಲನೆ ಮಾಡುವುದರ ಜೊತೆಗೆ ವಾಹನ ಚಾಲನೆ ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವುದು ಜವಾಬ್ದಾರಿಯುತ ಚಾಲಕನ ಕರ್ತವ್ಯವಾಗಿದೆ. ಒಂದು ವಾಹನದಿಂದ ಮತ್ತೊಂದು ವಾಹನದ ನಡುವೆ ಅಂತರ ಕಾಪಾಡುವುದು, ವಾಹನಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು, ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅಗತ್ಯ. ಕಚೇರಿ, ನಿಗದಿತ ಸ್ಥಳಗಳಿಗೆ ಮನೆಯಿಂದ ತುಸು ಮುಂಚಿತವಾಗಿಯೇ ಹೊರಡುವುದು, ಹೆಲ್ಮೆಟ್ ಮತ್ತಿತರ ಸುರಕ್ಷಾ ಕ್ರಮಗಳನ್ನು ಅನುಸರಿಸಿ ತಾಳ್ಮೆಯಿಂದ ನಿಧಾನವಾಗಿ ವಾಹನ ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು. ಇದು ಮಳೆಗಾಲಕ್ಕೆ ಮಾತ್ರವಲ್ಲ, ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದು. ಅತಿಯಾದ ವೇಗದ ಚಾಲನೆ, ಮದ್ಯ ಸೇವನೆ ಮಾಡಿ, ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವುದು ಸದಾ ನೆತ್ತಿಯ ಮೇಲೆ ಅಪಾಯದ ತೂಗುಗತ್ತಿ ಇದ್ದಂತೆ.
ಕೆಲವು ನಗರ ಪ್ರದೇಶಗಳಲ್ಲಿ ರಸ್ತೆಯಲ್ಲೇ ಮಳೆ ನೀರು ಚರಂಡಿಯ ರೀತಿ ಹರಿಯುವುದರಿಂದ ಮ್ಯಾನ್‌ಹೋಲ್, ಮತ್ತಿತರ ಗುಂಡಿಗಳ ಬಗ್ಗೆಯೂ ಎಚ್ಚರವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತುಂಬಿ ಹರಿಯುವ ನದಿಯನ್ನು, ತೂಗು ಸೇತುವೆ, ಕಾಲು ಸಂಕಗಳನ್ನು ದಾಟುವಾಗ ಹೆಚ್ಚು ಎಚ್ಚರವಾಗಿರಬೇಕು. ಶಾಲಾ ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ.
ಮಳೆಗಾಲದಲ್ಲಿ ಅಲ್ಲಲ್ಲಿ ಪ್ರಾಕೃತಿಕ ವಿಕೋಪ, ಗುಡ್ಡ ಕುಸಿತ, ಮನೆ ಕುಸಿತ ಮುಂತಾದ ಅವಘಡಗಳು ಘಟಿಸುವುದು ಹೆಚ್ಚು. ಈ ಬಗ್ಗೆಯೂ ನಾವೆಲ್ಲ ಸಾಕಷ್ಟು ಎಚ್ಚರವಹಿಸಬೇಕು. ಕಳೆದ ಕೆಲವು ವರ್ಷಗಳಿಂದ ಈಚೆಗೆ ಮಳೆಗಾಲದಲ್ಲಿ ಅತೀ ಹೆಚ್ಚು ಗುಡ್ಡ ಕುಸಿತ ಸಂಭವಿಸಿರುವುದನ್ನು ನಾವೆಲ್ಲ ತಿಳಿದಿದ್ದೇವೆ. ಇದರ ಜೊತೆಗೆ ವಿದ್ಯುತ್ ತಂತಿ ತುಂಡಾಗಿ ಬೀಳುವುದು, ಶಾರ್ಟ್ ಸರ್ಕ್ಯೂಟ್ ಅವಘಡ, ಮರ ಬಿದ್ದು ಮನೆ, ವಾಹನಗಳಿಗೆ ಹಾನಿ ಮುಂತಾದ ಸಮಸ್ಯೆಗಳಿಂದ ಆಸ್ತಿ-ಪಾಸ್ತಿ ಮಾತ್ರವಲ್ಲದೆ ಜೀವ ಹಾನಿಯೂ ಸಂಭವಿಸಿರುವುದನ್ನು ಕಂಡಿದ್ದೇವೆ. ಈ ಬಾರಿಯ ಮಳೆಗಾಲದಲ್ಲಿ ಇಂತಹ ದುರ್ಘಟನೆಗಳು ಸಂಭವಿಸದೇ ಇರಲಿ, ಯಾವೊಂದು ತೊಂದರೆಗಳು ಆಗದೇ ಇರಲಿ ಎಂದು ನಾವೆಲ್ಲ ಪ್ರಾರ್ಥಿಸೋಣ. ಮಳೆಗಾಲದಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ತುಂಡಾಗಿ ಬಿದ್ದ ಕಂಬ, ವಿದ್ಯುತ್ ತಂತಿಗಳನ್ನು ಸರಿಪಡಿಸಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸಲು ಶ್ರಮಿಸುವವರು ಪವರ್ ಮ್ಯಾನ್‌ಗಳಾದ ಲೈನ್‌ಮ್ಯಾನ್‌ಗಳು. ಅವರ ಈ ಸೇವಾ ಕಾರ್ಯವನ್ನು ನಾವೆಲ್ಲ ಗೌರವಿಸಿ ಅಭಿನಂದಿಸಲೇಬೇಕು. ಅವರಂತೆಯೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹೀಗೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಜನರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆಲ್ಲ ಕೃತಜ್ಞತೆಯನ್ನು ತಿಳಿಸಲೇಬೇಕು.
ಮಳೆಯಿಂದ ಎಷ್ಟು ಖುಷಿ ಸಿಗುತ್ತದೋ ಅಷ್ಟೇ ನೋವು ಹಾನಿ, ಅವಘಡ ಸಂಭವಿಸಿದಾಗ ಆಗುತ್ತದೆ. ಅವಘಡ, ಪಾಕೃತಿಕ ವಿಕೋಪ ಹೀಗೆ ಯಾವುದೇ ರೀತಿಯಲ್ಲಿ ಜನರಿಗೆ ಸಮಸ್ಯೆಗಳು ಉಂಟಾದಾಗ ನೆರವಿಗೆ ಧಾವಿಸಿ ಅಪಾಯವನ್ನು ತಡೆಗಟ್ಟುವ ಹಾಗೂ ಸಂತ್ರಸ್ತರಿಗೆ ಸಹಾಯ ನೀಡಿ, ಧೈರ್ಯ ತುಂಬುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯಡಿಯಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ’ಯನ್ನು ೨೦೧೯ರಲ್ಲಿ ಆರಂಭಿಸಿದ್ದೇವೆ. ಈ ಶೌರ್ಯ ತಂಡದಲ್ಲಿ ಸಹಾಯ ಹಾಗೂ ಸಮಾಜ ಸೇವೆ ಮಾಡಲು ಆಸಕ್ತಿ ಇರುವ ಪುರುಷರು ಹಾಗೂ ಮಹಿಳೆಯರು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಾ ವಿಪತ್ತು ಪರಿಹಾರ, ವಿಪತ್ತು ಮುನ್ನೆಚ್ಚರಿಕೆ, ಸಮಾಜ ಸೇವೆ, ವೈಯಕ್ತಿಕ ತುರ್ತು ಸೇವೆಗಳನ್ನು ನೀಡುತ್ತಾರೆ.
ಶೌರ್ಯ ಸ್ವಯಂ ಸೇವಕರಿಗೆ ಕೇಂದ್ರ ಸರಕಾರದ ಎನ್.ಡಿ.ಆರ್.ಎಫ್., ರಾಜ್ಯ ಸರಕಾರದ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗೃಹರಕ್ಷಕ ದಳದಿಂದ ಸೂಕ್ತ ತರಬೇತಿಯನ್ನು ಒದಗಿಸಲಾಗಿದೆ. ವಿಪತ್ತು ಕಾರ್ಯಾಚರಣೆಯನ್ನು ನಿರ್ವಹಿಸಲು ಬೇಕಾಗುವ ಲೈಫ್‌ಜಾಕೆಟ್, ಲ್ಯಾಡರ್, ಸ್ಟೆçಚರ್, ಸೇಫ್ಟಿ ಹೆಲ್ಮೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇತ್ಯಾದಿ ಎಲ್ಲ ಅಗತ್ಯ ಪರಿಕರಗಳನ್ನು ಅವರು ಹೊಂದಿದ್ದಾರೆ. ಅಪಘಾತ, ಅಗ್ನಿ ಅವಘಡ, ಮಳೆಗಾಲದಲ್ಲಿ ಜನರ ರಕ್ಷಣೆ, ರಸ್ತೆಗೆ ಬಿದ್ದ ಮರಗಳ ತೆರವು, ಕಿಂಡಿ ಅಣ್ಣೆಕಟ್ಟು ಸ್ವಚ್ಛತೆ, ನೀರಲ್ಲಿ ಕೊಚ್ಚಿ ಹೋದವರ ಹುಡುಕಾಟ, ಮನೆ ದುರಸ್ಥಿ ಕಾರ್ಯ, ಜಾನುವಾರುಗಳ ರಕ್ಷಣೆ, ರಸ್ತೆ ರಿಪೇರಿ, ಶ್ರಮದಾನ ಹೀಗೆ ಅನೇಕ ರೀತಿಯಲ್ಲಿ ಶೌರ್ಯ ತಂಡಗಳು ಸಹಾಯ ಹಸ್ತವನ್ನು ಚಾಚಿ ಸಂಕಷ್ಟ ಸಮಯದಲ್ಲಿ ನೆರವಾಗುತ್ತಾರೆ. ಕಳೆದ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದು ಅನೇಕ ಜನರ ಪ್ರಾಣವನ್ನು ಉಳಿಸಿದ್ದಾರೆ. ಇವರ ಈ ಸಮಾಜಮುಖಿ ಕಾರ್ಯವು ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರದ ಶೌರ್ಯ ವಿಪತ್ತು ನಿರ್ವಹಣಾ ತಂಡಗಳು ಕರ್ನಾಟಕ ರಾಜ್ಯದ 90 ತಾಲೂಕುಗಳಲ್ಲಿ ಸಕ್ರಿಯವಾಗಿದ್ದು ಸುಮಾರು 7700ಕ್ಕೂ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಪ್ರಾಕೃತಿಕ ಹಾಗೂ ಇನ್ನಿತರ ಅವಘಡಗಳ ಸಮಯದಲ್ಲಿ ಸರಕಾರದ ಇಲಾಖೆಗಳ ಜೊತೆ ಸೇರಿ 1.50 ಲಕ್ಷಕ್ಕೂ ಹೆಚ್ಚು ವಿಪತ್ತು ಸೇವೆಗಳನ್ನು ನೀಡಿದೆ.
ಈ ಬಾರಿಯ ಮಳೆಗಾಲದಲ್ಲೂ ನಮ್ಮ ಕ್ಷೇತ್ರದ ಶೌರ್ಯ ತಂಡಗಳು ಯಾವುದೇ ರೀತಿಯ ವಿಪತ್ತುಗಳನ್ನು ನಿರ್ವಹಿಸಲು, ಜನರಿಗೆ ಸೂಕ್ತ ಸಹಾಯ, ನೆರವು ಒದಗಿಸಲು ಸನ್ನದ್ಧವಾಗಿವೆ. ಜೊತೆಗೆ ನಾವು ಪ್ರತಿಯೊಬ್ಬರೂ ಕೂಡ ನಿರ್ಲಕ್ಷö್ಯ ತೋರದೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಚ್ಚರದಿಂದ ಇರೋಣ. ಯಾವುದೇ ರೀತಿಯ ವಿಪತ್ತುಗಳು ಬಾರದಿರಲಿ. ಅನಾಹುತ, ಪ್ರಾಕೃತಿಕ ವಿಕೋಪ ಸಂಭವಿಸದಿರಲಿ. ಎಲ್ಲರೂ ನೆಮ್ಮದಿಯಿಂದ ಇದ್ದು, ಮಳೆಗಾಲವು ಎಲ್ಲರಲ್ಲಿ ಹರ್ಷ, ಸಮೃದ್ಧಿಯನ್ನು ತರಲಿ ಎಂಬುದೇ ನಮ್ಮ ಆಶಯ.

Facebook
Twitter
WhatsApp
LinkedIn
Telegram