ಅನಿಲ್ ಕುಮಾರ್ ಎಸ್. ಎಸ್.
ಸಪ್ಟೆಂಬರ್ 29 ಅನ್ನು ವಿಶ್ವದಾದ್ಯಂತ ಎಲ್ಲಾ ದೇಶಗಳು ‘ವಿಶ್ವ ಹೃದಯ ದಿನ’ವನ್ನಾಗಿ ಆಚರಿಸುತ್ತವೆ. ನಮ್ಮ ಶರೀರದ ಎಲ್ಲಾ ಅಂಗಾoಗಗಳು ಪ್ರಾಮುಖ್ಯತೆಯನ್ನು ಹೊಂದಿದ್ದರೂ ಹೃದಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಾವು ಜೀವಂತವಾಗಿರಲು, ಕ್ರಿಯಾಶೀಲವಾಗಿರಲು ಹೃದಯವು ದಣಿವರಿಯದೆ ಎಷ್ಟೊಂದು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಹೃದಯದ ಮಹತ್ವ ನಮಗೆ ಅರ್ಥವಾಗಬಹುದು.
ನಮ್ಮ ಶರೀರದ ವ್ಯವಸ್ಥೆಯಲ್ಲಿ ಸೃಷ್ಟಿಕರ್ತ ಭಗವಂತ ‘ಹೃದಯ’ವನ್ನು ‘ಹೃದಯ ಸ್ಥಾನ’ದಲ್ಲಿಟ್ಟಿದ್ದಾನೆ. ಮುಷ್ಠಿ ಗಾತ್ರದ ಈ ಪುಟ್ಟ ಹೃದಯ ಇಡೀ ಶರೀರದ ಜೀವಾಧಾರ. ಒಂದೇ ಒಂದು ಕ್ಷಣವು ವಿಶ್ರಾಂತಿಯನ್ನು ಪಡೆಯದೇ ನಿರಂತರವಾಗಿ ಅತ್ಯಂತ ಕಾರ್ಯಕ್ಷಮತೆಯಿಂದ, ನಿಖರತೆಯಿಂದ, ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಏಕೈಕ ಅಂಗ ಅಂದರೆ ಅದು ಹೃದಯವಾಗಿದೆ. ಕೇವಲ ಒಂದು ದಿನದಲ್ಲಿಯೇ ಒಂದು ಲಕ್ಷ ಬಾರಿ ನಮ್ಮ ಹೃದಯವು ಮಿಡಿಯುತ್ತದೆ. ಒಂದು ವರ್ಷಕ್ಕೆ ಇದರ ನಿರಂತರ ಮಿಡಿತ 3.65 ಕೋಟಿ ಬಾರಿ ಆಗುತ್ತದೆ. ಮನುಷ್ಯನ ಸಾಮಾನ್ಯ ಜೀವಿತಾವಧಿಯಲ್ಲಿ ಒಮ್ಮೆಯೂ ವಿಶ್ರಾಂತಿ ಪಡೆಯದೇ ಸುಮಾರು 265 ಕೋಟಿ ಬಾರಿ ಮಿಡಿಯುವ ಮೂಲಕ ಹೃದಯವು ನಿರಂತರವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಾ ಈ ಶರೀರವನ್ನು ಕ್ರಿಯಾಶೀಲವಾಗಿರಿಸಿದೆ. ಇದು ಕೇವಲ ಮಿಡಿತ ಅಷ್ಟೇ ಅಲ್ಲ. ನಮ್ಮ ಶರೀರ ರಚನೆಯ ಸಮಸ್ತ ಅಂಗಾoಗಗಳಿಗೆ ರಕ್ತನಾಳಗಳ ಮೂಲಕ ಎಷ್ಟು ಅಗತ್ಯವಿದೆಯೋ, ಅಷ್ಟೇ ರಕ್ತವನ್ನು ಪೂರೈಸುವ ಜೀವನದಿ. ಇಲ್ಲೂ ಒಂದು ವಿಸ್ಮಯ ಎಂದರೆ ನಮ್ಮ ಶರೀರದಲ್ಲಿರುವ ಎಲ್ಲಾ ರಕ್ತನಾಳಗಳನ್ನು ಜೋಡಿಸುತ್ತಾ ಹೋದಲ್ಲಿ ಸುಮಾರು 97 ಸಾವಿರ ಕಿ.ಲೋ. ಮೀಟರ್ನಷ್ಟು ಉದ್ದವಾಗಬಹುದು. ಈ ವ್ಯವಸ್ಥೆಯ ಪ್ರತಿ ಸೂಕ್ಷಾö್ಮತಿಸೂಕ್ಷö್ಮ ರಕ್ತನಾಳಗಳಿಗೂ ಹೃದಯದ ಪ್ರತಿ ಮಿಡಿತದಲ್ಲಿ ಅಗತ್ಯವಿರುವಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತದೆ. ಇದು ಒಂದು ಮಿಡಿತದ ಜವಾಬ್ದಾರಿಯಾದರೆ, ಇನ್ನು ಜೀವಿತಾವಧಿಯ 265 ಕೋಟಿ ಮಿಡಿತದ ಒಟ್ಟಾರೆ ಜವಾಬ್ದಾರಿಯ ಬಗ್ಗೆ ಹೇಗೆ ವರ್ಣಿಸೋಣ! ತನಗಾಗಿ ಒಮ್ಮೆಯೂ ಯಾವ ವಿಶ್ರಾಂತಿಯನ್ನು ಪಡೆಯದೇ, ಒಮ್ಮೆಯೂ ತಪ್ಪು ಮಾಡದೇ, ನಿಖರತೆಯಿಂದ ಎಲ್ಲಾ ಅಂಗಾoಗಗಳ ಬೇಡಿಕೆಯನ್ನು ಈಡೇರಿಸುತ್ತಾ ಕಾರ್ಯನಿರ್ವಹಿಸುತ್ತದೆ.
ಇದು ಯಾವುದೋ ಬ್ರಹ್ಮಾಂಡದ ಕಥೆಯಲ್ಲ. ಇದು ನಮ್ಮ ಶರೀರದಲ್ಲಿರುವ ಪುಟ್ಟ ಹೃದಯದ ವಾಸ್ತವತೆ. ಇಷ್ಟೇ ಅಲ್ಲ ಒಂದು ನಿಮಿಷಕ್ಕೆ 5.50 ಲೀಟರ್ನಷ್ಟು ರಕ್ತವನ್ನು ರಕ್ತನಾಳದ ವ್ಯೂಹಗಳಿಗೆ ಪಂಪ್ ಮಾಡುವ ಈ ಹೃದಯ ಮನುಷ್ಯನ ಸರಾಸರಿ ಜೀವಿತಾವಧಿಯಲ್ಲಿ ಸುಮಾರು 74 ಲಕ್ಷ ಕ್ಯÆಸೆಕ್ನಷ್ಟು (ಸುಮಾರು 18 ಸಾವಿರ ಬೃಹತ್ ಟ್ಯಾಂಕರ್ಗಳಷ್ಟು) ರಕ್ತವನ್ನು ಅತ್ಯಂತ ಕ್ಲಿಷ್ಟಕರವಾದ ರಕ್ತನಾಳಗಳ ಮೂಲಕ ಅಂಗಾoಗಗಳಿಗೆ ಸಮರ್ಪಕವಾಗಿ ಪೂರೈಸುತ್ತದೆ.
ಒಂದು ಕಡೆ ನಿರಂತರವಾಗಿ ಕೆಲಸ ಮಾಡಬೇಕು, ಇನ್ನೊಂದು ಕಡೆ ನಿಖರತೆಯಿಂದ ಲೆಕ್ಕಾಚಾರವನ್ನು ಹಾಕಬೇಕು, ಮತ್ತೊಂದು ಕಡೆ ಅಂಗಾAಗಗಳ ಮುಂದಿನ ಬೇಡಿಕೆಯನ್ನು ಸ್ವೀಕರಿಸಬೇಕು ಹಾಗೂ ಆ ಬೇಡಿಕೆಗಳನ್ನು ಯಥಾವತ್ತಾಗಿ ಪೂರೈಸಬೇಕು.
ಒಂದು ಕ್ಷಣವೂ ವಿಶ್ರಾಂತಿ ಪಡೆಯದೆ ನಮ್ಮ ಜೀವಂತಿಕೆ ಹಾಗೂ ಕ್ರಿಯಾಶೀಲತೆಯನ್ನು ಕಾಪಾಡುತ್ತಿರುವ ಈ ಹೃದಯದ ಜೋಪಾನವನ್ನು ನಾವು ಮಾಡಬೇಕು. ಆದರೆ ನಾವು ನಮ್ಮ ನಾಲಗೆಯ ಚಪಲಕ್ಕೆ ದುರಾಭ್ಯಾಸಗಳಿಗೆ ಬಲಿಯಾಗಿ ದೇಹದಲ್ಲಿ ಕೊಬ್ಬಿನಾಂಶ, ಮಾದಕ ವಸ್ತುಗಳನ್ನು ಸೇರಿಸಿ ಹೃದಯಕ್ಕೆ ಎಲ್ಲಿಲ್ಲದ ಹೊರೆಯನ್ನು ಹೊರಿಸುತ್ತೇವೆ. ಅತ್ಯಂತ ಪರಿಪಕ್ವತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಹೃದಯದ ಲೆಕ್ಕಾಚಾರವನ್ನು ತಪ್ಪಿಸುತ್ತೇವೆ. ರಾತ್ರಿ ಹಗಲೆನ್ನದೆ ಒಂದು ಕ್ಷಣವೂ ವಿಶ್ರಾಂತಿ ಪಡೆಯದೆ, ನಮಗಾಗಿ ಮಿಡಿಯುತ್ತಿರುವ ಹೃದಯಕ್ಕೆ ನಾವು ಡ್ರಗ್ಸ್, ಮದ್ಯಪಾನದಂತಹ ವಿಷವನ್ನು ಉಣಬಡಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದನ್ನು ಗಮನಿಸಿದರೆ ಈ ಎಲ್ಲಾ ಅಂಶಗಳು ಬೆಳಕಿಗೆ ಬರುತ್ತವೆ. ಹಾಗೆಯೇ ಒತ್ತಡದ ಜೀವನ, ನಿದ್ರಾಹೀನತೆ, ಅತಿಯಾದ ಮೊಬೈಲ್ ಜಾಲತಾಣಗಳ ಬಳಕೆ, ಜಂಕ್ ಫುಡ್ಗಳ ಸೇವನೆ ಇತ್ಯಾದಿಗಳು ಹೃದಯಾಘಾತಕ್ಕೆ ಕಾರಣವಾಗಿವೆ. ನಮ್ಮನ್ನು ಇಷ್ಟೊಂದು ಜೋಪಾನ ಮಾಡುವ ಹೃದಯವನ್ನು ನಾವು ಜೋಪಾನ ಮಾಡೋಣ. ಸಪ್ಟೆಂಬರ್ 29ರಂದು ಎಲ್ಲರು ತಮ್ಮ ಹೃದಯವನ್ನು ಜೋಪಾನ ಮಾಡುವ ಸಂಕಲ್ಪವನ್ನು ಕೈಗೊಳ್ಳೋಣ. ಹೃದಯಕ್ಕೆ ಪುಷ್ಟಿ ಕೊಡುವಂತಹ ಜೀವನಶೈಲಿ ರೂಢಿಸಿಕೊಳ್ಳೋಣ. ಧ್ಯಾನ, ವ್ಯಾಯಾಮ ಮಾಡುವುದರಿಂದ ಹಿಡಿದು ನಮ್ಮ ಆಹಾರ ಶೈಲಿಯ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳೋಣ.
