ಉತ್ತಮ ಆರೋಗ್ಯ ರಕ್ಷಣೆಗಾಗಿ ಶುದ್ಧ ನೀರನ್ನೊದಗಿಸುವ ಶುದ್ಧಗಂಗಾ

ಕಳೆದ ಸಂಚಿಕೆಯಲ್ಲಿ ‘ರುದ್ರಭೂಮಿ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರ ಧೀಮಂತ ಚಿಂತನೆಯಿAದ ಮೂಡಿಬಂದ ‘ಶುದ್ಧಗಂಗಾ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ದೇಹದ ಶೇ. 70ರಷ್ಟು ಭಾಗ ದ್ರವದಿಂದ ಕೂಡಿರುತ್ತದೆ.ಹಾಗೆಯೇ ವೈದ್ಯರು ನಿತ್ಯ ಎರಡು-ಮೂರು ಲೀಟರ್ ನೀರು ಅಥವಾ ದ್ರವ ಆಹಾರವನ್ನು ಸೇವಿಸಬೇಕೆಂದು ಹೇಳುತ್ತಾರೆ. ಒಂದು ವೇಳೆ ನಾವು ಕುಡಿಯುವ ನೀರು ಮಲಿನವಾಗಿ ಅನಾರೋಗ್ಯಕ್ಕೆ ಕಾರಣವಾದರೆ, ಅಂತಹ ದುರಾದೃಷ್ಟ ಜನರ ದೈನಂದಿನ ಜೀವನ ಹೇಗಿರಬಹುದು? ಅವರು ಎಷ್ಟು ಬಾರಿ ಖಾಯಿಲೆಗಳಿಗೆ ತುತ್ತಾಗಿರಬಹುದು? ಇವುಗಳನ್ನೆಲ್ಲ ಯೋಚಿಸಿದಲ್ಲಿ, ಬಹುಷಃ ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಶುದ್ಧ ಕುಡಿಯುವ ನೀರು ಒಂದು ಪ್ರಮುಖವಾದ ಸಮಸ್ಯೆ ಆಗಿದೆ. ಇಂದಿಗೂ ಕೂಡಾ ನಮ್ಮ ದೇಶದಲ್ಲಿ 23 ಕೋಟಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕೈಗಾರಿಕೆಗಳು, ಬೆಳೆಯುತ್ತಿರುವ ನಗರಗಳಿಂದ ಪ್ರತಿನಿತ್ಯ ಹೊರಬೀಳುವ ತ್ಯಾಜ್ಯಗಳಿಂದ ಹಾನಿಕಾರಕ ಧಾತುಗಳಾದ ಅರ್ಸೆನಿಕ್, ಕ್ರೋಮಿಯಂ, ಕಾಡ್ಮಿಯಂ, ತಾಮ್ರ, ಕಬ್ಬಿಣ, ಪಾದರಸ, ಸೀಸ, ಸತುಗಳು ಅಂತರ್ಜಲದ ಮೂಲವನ್ನು ಸೇರಿ ನೀರು ಮಲಿನಗೊಳ್ಳುತ್ತಿದೆ ಎಂಬುವುದು ಎಲ್ಲರು ನಂಬಲೇಬೇಕಾದ ಸತ್ಯ. ಇನ್ನು ಸಮೀಕ್ಷೆಯೊಂದರ ಪ್ರಕಾರ ಮುಂದಿನ ದಿನಗಳಲ್ಲಿ ಸುಮಾರು 5 ಕೋಟಿ ಭಾರತೀಯರು ನೀರಿನ ಮಲಿನತೆಯಿಂದ ಬರಬಹುದಾದ ರೋಗದ ಅಪಾಯಕ್ಕೆ ಬಲಿಯಾಗುವ ಸಂಭವವಿದೆಯAತೆ. ಈ ಮಾಹಿತಿ ಎಂಥವರನ್ನು ಬೆಚ್ಚಿ ಬೀಳಿಸುತ್ತದೆ.
ನೀರಿನ ಸಮಸ್ಯೆ ರಾಜ್ಯದಲ್ಲೇನೂ ಕಡಿಮೆಯಿಲ್ಲ. ಕೆಲವು ಜಿಲ್ಲೆಗಳ ಜನರು ಅನಿವಾರ್ಯವಾಗಿ ಫ್ಲೋರೈಡ್‌ಯುಕ್ತ ನೀರನ್ನೇ ಬಳಸುತ್ತಿದ್ದರು. ಒಂದು ಸ್ವಯಂಸೇವಾ ಸಂಸ್ಥೆಯ ಸಮೀಕ್ಷಾ ವರದಿಯಂತೆ ರಾಜ್ಯದಲ್ಲಿ ಶೇ. 60ರಷ್ಟು ಕುಡಿಯುವ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ಶೇ. 20ರಷ್ಟು ಅತ್ಯಧಿಕ ನೈಟ್ರೇಟ್ ಮತ್ತು ಶೇ. 35ರಷ್ಟು ಸೂಕ್ಮಾಣುಗಳಿಂದ ಕಲುಷಿತವಾಗಿ ಜನರು ಪ್ರತಿವರ್ಷ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲಾ ಗಂಭೀರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ಹದಿನೇಳು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಶುದ್ಧಗಂಗಾ’ ಎಂಬ ಯೋಜನೆಯನ್ನು ಪ್ರಾರಂಭಿಸಿದರು.
ಹೆಸರೇ ಸೂಚಿಸುವಂತೆ ಗಡಸು ನೀರನ್ನು ಫ್ಲೋರೈಡ್‌ಮುಕ್ತ ನೀರನ್ನಾಗಿ ಶುದ್ಧೀಕರಿಸಿ ವರ್ಷದುದ್ದಕ್ಕೂ ಅಲ್ಲಿನ ಜನರಿಗೆ ಒದಗಿಸುವುದೇ ಇಲ್ಲಿನ ಪ್ರಮುಖ ಗುರಿ. 2009ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮೊದಲ ಶುದ್ಧಗಂಗಾ ಸುಸ್ಥಿರ ಕುಡಿಯುವ ನೀರಿನ ಯೋಜನೆಗೆ ಮಾತೃಶ್ರೀ ಹೇಮಾವತಿ ಅಮ್ಮನವರು ಚಾಲನೆಯನ್ನು ನೀಡಿದರು. ನಂತರದ ದಿನಗಳಲ್ಲಿ ಯಾವುದೇ ಪ್ರಚಾರವನ್ನು ಬಯಸದೇ ನಡೆದು ಬಂದ ‘ಶುದ್ಧಗಂಗಾ’ ಯೋಜನೆ ಇದೀಗ ಕರ್ನಾಟಕದ ಲಕ್ಷಾಂತರ ಜನರಿಗೆ ವರವಾಗಿ ಪರಿಣಮಿಸಿದೆ. ಈಗಾಗಲೇ 24 ಜಿಲ್ಲೆಗಳ116 ತಾಲೂಕುಗಳಲ್ಲಿ 563 ಶುದ್ಧಗಂಗಾ ಘಟಕಗಳು ಕಾರ್ಯಾಚರಿಸುತ್ತಿದ್ದು ಈ ಘಟಕಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದದಿಂದ ನಿರ್ವಹಿಸಲಾಗುತ್ತಿದೆ. ಜನರಲ್ಲಿ ಶುದ್ಧಗಂಗಾ ಯೋಜನೆಯ ಕುರಿತು ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಸಣ್ಣ ಮೊತ್ತವನ್ನು ನಿಗದಿಪಡಿಸಲಾಗಿದೆ. ಒಂದು ಲೀಟರ್ ಶುದ್ಧ ಕುಡಿಯುವ ನೀರಿಗೆ ಇಂದು ರೂ. 20/- ಆದರೆ, ಶುದ್ಧಗಂಗಾ ಯೋಜನೆಯ ಶುದ್ಧ ಕುಡಿಯುವ ನೀರಿನ ಬೆಲೆ ಲೀಟರ್‌ಗೆ ಕೇವಲ 15 ಪೈಸೆ. ಸುಮಾರು 20 ಲೀಟರ್ ನೀರನ್ನು ಪ್ರತೀ ದಿನ ಒಂದು ಕುಟುಂಬ ಕೇವಲ ರೂ. 3/-ಕ್ಕೆ ಪಡೆದುಕೊಳ್ಳಬಹುದಾಗಿದೆ. ನಿತ್ಯ 1,47,453 ಕುಟುಂಬಗಳಿಗೆ 29,49,060 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ. ಪ್ರತೀ ದಿನ 226 ಶಾಲೆ-ಸಂಸ್ಥೆಗಳಿಗೆ ಒಟ್ಟು 4,520 ಲೀಟರ್. ನೀರನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಪ್ರತಿ ಘಟಕಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಘಟಕದ ನಿರ್ವಹಣೆಯನ್ನು ನೋಡಿಕೊಳ್ಳಲು ಸ್ಥಳೀಯ ಒಬ್ಬರನ್ನು ಪ್ರೇರಕರನ್ನಾಗಿ ನೇಮಿಸಲಾಗಿದೆ.
ಕುಡಿಯುವ ನೀರಿನ ಗುಣಮಟ್ಟದ ಸಮಸ್ಯೆಯಿರುವಲ್ಲಿ ಅಲ್ಲಿನ ಜನರ ಬೇಡಿಕೆ ಮತ್ತು ಬಳಕೆದಾರರ ಸಂಖ್ಯೆಯನ್ನು ಗಮನಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶುದ್ಧಗಂಗಾ ಘಟಕವನ್ನು ಸ್ಥಾಪಿಸಲಾಗುತ್ತದೆ. ಸ್ಥಳೀಯ ಗ್ರಾಮಪಂಚಾಯತ್‌ನ ಸಹಕಾರದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ. ಇತರ ಸಂಘ ಸಂಸ್ಥೆಗಳಿಂದ ಘಟಕ ಸ್ಥಾಪನೆಗೆ ಪ್ರತಿನಿತ್ಯ ಸಾಕಷ್ಟು ಬೇಡಿಕೆಗಳು ಬರುತ್ತಿರುವುದು ಈ ಯೋಜನೆಯ ಜನಪ್ರಿಯತೆಗೆ ಹಿಡಿದ ಕನ್ನಡಿ. ಇಂತಹ ಪ್ರಯತ್ನಗಳತ್ತ ಇತರ ಸಂಘ ಸಂಸ್ಥೆಗಳು ಒಲವು ತೋರಿದಲ್ಲಿ ರಾಜ್ಯದ ಜನತೆಗೆ ಫ್ಲೋರೈಡ್‌ಮುಕ್ತ ನೀರನ್ನು ಒದಗಿಸಿದಂತಾಗಬಹುದು.
ಸುಮಾರು 1.5 ಲಕ್ಷ ಕುಟುಂಬದ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಾ, ಅವರ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೊಂದಿರುವ ‘ಶುದ್ಧಗಂಗಾ’ ಯೋಜನೆಯ ಒಂದು ಹೆಮ್ಮೆಯ ಕಾರ್ಯಕ್ರಮವಾಗಿದೆ. ಪ್ರತೀ ವರ್ಷ ನೀರಿನ ಪ್ರಾಮುಖ್ಯತೆ ಹಾಗೂ ಶುದ್ಧ ಕುಡಿಯುವ ನೀರಿನ ಕುರಿತಾಗಿ ಲಕ್ಷಾಂತರ ಜನರಿಗೆ ಜಾಗೃತಿ ಮೂಡಿಸುವ ಅಭಿಯಾನಗಳನ್ನೂ ಕೈಗೊಳ್ಳಲಾಗುತ್ತಿದ್ದು, ಒಟ್ಟಾರೆಯಾಗಿ ರಾಜ್ಯದ ಜನರ ಆರೋಗ್ಯದ ದೃಷ್ಟಿಯಲ್ಲೂ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ತರ ಸೇವೆಯನ್ನು ಸಲ್ಲಿಸುತ್ತಿದೆ.
ಇನ್ನಷ್ಟು ಕಾರ್ಯಕ್ರಮಗಳ ಕುರಿತಂತೆ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram