ಬುದ್ಧಿ ಅಭಾವ

ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿರಬೇಕಾದರೆ ಜೋರಾಗಿ ಬೀಸುತ್ತಿದ್ದ ಬಿರುಗಾಳಿಗೆ ದೋಣಿ ಮಗುಚಿ ಬಿದ್ದು ಕೆಲವರು ನೀರು ಪಾಲಾಗುತ್ತಾರೆ. ಇವರಲ್ಲಿ ಇಬ್ಬರು ಹೇಗೋ ದಡ ಸೇರುತ್ತಾರೆ. ಅವರಲ್ಲಿ ಒಬ್ಬ ತನ್ನ ಲ್ಯಾಪ್‌ಟಾಪ್ ಅನ್ನು ಬ್ಯಾಗ್‌ನಲ್ಲಿ ಇಟ್ಟಿದ್ದ, ಮತ್ತೊಬ್ಬನ ಬ್ಯಾಗ್‌ನಲ್ಲಿ ಒಂದು ಕೊಳಲು ಇತ್ತು. ಅವು ಸುರಕ್ಷಿತವಾಗಿದ್ದವು. ಸ್ವಲ್ಪ ಸಮಯ ಸುಧಾರಿಸಿಕೊಂಡ ಬಳಿಕ ನೋಡಿದರೆ ದೋಣಿ ಒಡೆದು ಅದು ಕೂಡಾ ದಡಕ್ಕೆ ಬಂದು ಸೇರಿಕೊಂಡಿರುತ್ತದೆ. ಇಬ್ಬರಿಗೂ ಈ ನಿರ್ಜನ ಪ್ರದೇಶದಲ್ಲಿ ಏನು ಮಾಡುವುದೆಂದು ತಿಳಿಯುವುದಿಲ್ಲ. ಓರ್ವ ತನ್ನ ಕೊಳಲಿನಿಂದ ಮಧುರ ಧ್ವನಿಯಲ್ಲಿ ಹಾಡಲು ಆರಂಭಿಸುತ್ತಾನೆ. ಕೊಳಲಿನ ಧ್ವನಿ ಕೇಳಿ ದೂರದಲ್ಲಿದ್ದ ಒಂದಷ್ಟು ಮಂದಿ ಇವನ ಹತ್ತಿರ ಬರುತ್ತಾರೆ. ಮತ್ತೋರ್ವ ತನ್ನ ಲ್ಯಾಪ್‌ಟಾಪ್ ಅನ್ನು ಆನ್ ಮಾಡಿ ಈ ಲ್ಯಾಪ್‌ಟಾಪ್‌ನಿಂದ ಏನೆಲ್ಲಾ ಮಾಡಲು ಸಾಧ್ಯವಿದೆ ಎಂದು ವಿವರಿಸಲು ಶುರು ಮಾಡುತ್ತಾನೆ. ಆ ತಾಂತ್ರಿಕತೆ ಅವರಿಗೆ ಅರ್ಥ ಆಗುವುದಿಲ್ಲ. ಆದರೆ ಕೊಳಲಿನ ಮಾಧುರ್ಯಕ್ಕೆ ಮನಸೋಲುತ್ತಾರೆ, ಮಾತ್ರವಲ್ಲ ಅವರಿಗೆ ತಿನ್ನಲು ಬೇಕಾದ ಹಣ್ಣು-ಹಂಪಲುಗಳನ್ನು ತಂದುಕೊಡುತ್ತಾರೆ. ಇವರ ಭಾಷೆ ಅರ್ಥ ಆಗದಿದ್ದರೂ ಒಡೆದ ದೋಣಿಯನ್ನು ಕಂಡು ಅದನ್ನು ರಿಪೇರಿ ಮಾಡಿಕೊಡುತ್ತಾರೆ. ಕೊನೆಗೆ ಅವರಿಗೆ ಕೃತಜ್ಞತೆ ಸಲ್ಲಿಸಿ ಇಬ್ಬರು ದೋಣಿಯನ್ನೇರಿ ಊರು ಸೇರಿಕೊಳ್ಳುತ್ತಾರೆ.
ಇಂದು ನಮ್ಮ ಬದುಕಿನಲ್ಲಿ ಭಾವನೆಗಳಿಗಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಮನ್ನಣೆ ದೊರೆತಿದೆ. ಆಧುನಿಕತೆಯ ಮೋಡಿಗೊಳಗಾಗಿ ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಂಡಿದ್ದಾರೆ. ಆಟ ಆಡುವ ಮನಸ್ಸಿಲ್ಲ. ಯಾವುದೇ ವಿಚಾರ ಅವರಲ್ಲಿ ವಿಸ್ಮಯವನ್ನುಂಟು ಮಾಡುವುದಿಲ್ಲ. ಮನೆ ಊಟವಂತೂ ರುಚಿಸುವುದೇ ಇಲ್ಲ. ಒಂದು ಕಾಲದಲ್ಲಿ ಮಕ್ಕಳನ್ನು ಆಟದ ಬಯಲಿನಿಂದ ಮನೆಗೆ ಕರೆ ತರುವುದೇ ದೊಡ್ಡ ಸಾಹಸವಾಗಿತ್ತು. ಊರ ಜಾತ್ರೆ, ಗದ್ದೆ ಕೊಯ್ಲು, ಪ್ರಾಣಿಪಕ್ಷಿ, ಅಜ್ಜಿ ಹೇಳುವ ಕತೆ, ಒಗಟುಗಳು ಮಕ್ಕಳಿಗೆ ಮುದ ನೀಡುತ್ತಿದ್ದವು. ಮನೆ ಊಟದ ಜೊತೆಗೆ ವಿಶೇಷ ಸಂದರ್ಭಗಳಲ್ಲಿ ಮಾಡುವ ಪಾಯಸ, ಪಂಚಕಜ್ಜಾಯ, ಚಕ್ಕುಲಿ, ನಿಪ್ಪಟ್ಟು, ಹಪ್ಪಳ ಇವುಗಳೇ ಅವರ ಬಾಯಿಯಲ್ಲಿ ನೀರೂರಿಸುವುದಕ್ಕೆ ಸಾಕಾಗಿತ್ತು. ನೆಂಟರಿಷ್ಟರು ಬರುವಾಗ ತರುವ ಬಿಸ್ಕೆಟ್, ಚಾಕಲೇಟ್‌ಗಳು, ಅವರು ಖರ್ಚಿಗೆಂದು ಮಕ್ಕಳ ಕೈಯಲ್ಲಿಡುವ ಪುಡಿಕಾಸುಗಳು ಅವರ ಬಗ್ಗೆ ಪ್ರೀತಿ-ಗೌರವದ ಭಾವನೆಯನ್ನು ಮೂಡಿಸುತ್ತಿದ್ದವು.
ಎಷ್ಟೇ ದೊಡ್ಡ ಹುದ್ದೆಯಲ್ಲಿರಲಿ ತಮ್ಮ ಆಯಾಸ, ನಿರುತ್ಸಾಹ, ಖಿನ್ನತೆಯನ್ನು ಪರಿಹರಿಸಿಕೊಳ್ಳಬೇಕಾದರೆ ಕಲೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ಸಂಗೀತ, ನಾಟಕ, ಪುಸ್ತಕಗಳನ್ನು ಓದುವುದು, ಪ್ರವಾಸಗಳು, ವಾದ್ಯಗಳನ್ನು ನುಡಿಸುವ, ಕ್ರೀಡೆಗಳಲ್ಲಿ ಭಾಗವಹಿಸುವ ಹೀಗೆ ಯಾವುದಾದರೊಂದು ಹವ್ಯಾಸಗಳನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ನಿತ್ಯ ನವೋಲ್ಲಾಸವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಮ್ಮಿಂದ ಕಲಿಯಲು ಆಗದಿದ್ದರೆ ಇತರರು ಪ್ರದರ್ಶಿಸುವ ಕಲೆಯನ್ನು ನೋಡಿ ಆನಂದಿಸುವ ಹವ್ಯಾಸವನ್ನಾದರೂ ಬೆಳೆಸಿಕೊಂಡರೆ ಬದುಕು ಹಗುರವಾಗುತ್ತದೆ, ನಮ್ಮ ಭಾವಜಗತ್ತು ವಿಸ್ತಾರಗೊಳ್ಳುತ್ತದೆ. ಮನುಷ್ಯ ಸಂವೇದನಶೀಲನಾಗುತ್ತಾನೆ. ಭಾವನೆ, ಸಹೃದಯತೆ, ಸಂವೇದನೆಗಳಿಲ್ಲದಾಗ ಮನಸ್ಸು ಕೊರಡಿನಂತಾಗುತ್ತದೆ.
ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಪಟ್ಟಿಯನ್ನು ತೆರೆದು ನೋಡಿದರೆ ಅದರಲ್ಲಿ ಹಾಡಿದವರೆಲ್ಲರೂ ಇಂಜಿನಿಯರ್, ವೈದ್ಯರುಗಳೇ ಆಗಿದ್ದರು. ಅವರು ಶಿಕ್ಷಣದ ಜೊತೆಗೆ ತಮ್ಮ ಬಾಲ್ಯದಿಂದಲೇ ಹಾಡುವ ಹವ್ಯಾಸವನ್ನು ತಮ್ಮದಾಗಿಸಿಕೊಂಡದ್ದು ಮಾತ್ರವಲ್ಲ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಬಂದು ಶ್ರೀ ಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಅಂದರೆ ಸಂಗೀತದ ಮೇಲೆ ಅವರಿಗಿರುವ ಆಸಕ್ತಿ, ಅವರ ಮನೆಮಂದಿ ನೀಡಿದ ಪ್ರೋತ್ಸಾಹವೇ ಇದಕ್ಕೆ ಮುಖ್ಯ ಕಾರಣ.
ನಾವು ಪೂಜಿಸುವ ಶಿವ, ಸರಸ್ವತಿ, ಗಣಪತಿ ಇವರೆಲ್ಲ ಕಲೆಯ ಆರಾಧ್ಯ ದೇವರುಗಳು. ನಟರಾಜನ ಮೂರ್ತಿ ಇಲ್ಲದೆ, ಗಣಪತಿಯ ಪೂಜೆ ಮಾಡದೆ ನೃತ್ಯ ಆರಂಭವಾಗುವುದಿಲ್ಲ. ಹಾಗೇಯೆ ಸಂಗೀತದಲ್ಲೂ ಗಣಪತಿಯೇ ಪ್ರಥಮ ವಂದಿತ. ಶಾಲೆಗಳಲ್ಲಿ ಹಿಂದೆ ಪ್ರತಿವಾರ ಭಜನೆ ನಡೆಯುತ್ತಿದ್ದು ನವರಾತ್ರಿಯಲ್ಲಿ ಸರಸ್ವತಿ ದೇವಿಗೆ ಮಕ್ಕಳು ನಡೆಸುವ ‘ಶಾರದಾ ಪೂಜೆ’ಯ ವೇಳೆ ಶಾರದೆಯೊಂದಿಗೆ ಅವರ ಪಾಠ ಪುಸ್ತಕಗಳೂ ಪೂಜೆಗೊಳ್ಳುತ್ತಿದ್ದವು. ಮನೆಯಲ್ಲಿ ಓದುವ ಮಕ್ಕಳಿಗೆ ಮೊದಲಿಗೆ ಹೇಳಿ ಕೊಡುವ ಶ್ಲೋಕವೇ ‘ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭA ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ’ ಎಂಬುದಾಗಿ.
ಹೀಗೆ ಭಾರತೀಯ ಕಲೆಗೆ ಧಾರ್ಮಿಕ ಮಹತ್ವವೂ ಇದೆ. ಇಂಥಾ ಕಲೆಗಳು ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿಗಳನ್ನು ಕರುಣಿಸುವ ಜೊತೆಗೆ ಕುಳಿತು ನೋಡುವ, ಕೇಳುವ ಸೋತ್ರುಗಳಿಗೂ ಆನಂದವನ್ನುAಟು ಮಾಡುತ್ತವೆ. ಆದ್ದರಿಂದ ಈಗಿನ ಕೃತಕಬುದ್ಧಿಮತ್ತೆ ಮುಂತಾದ ತಂತ್ರಜ್ಞಾನಗಳನ್ನು ಯಾವುದಕ್ಕೆ, ಎಲ್ಲಿ, ಎಷ್ಟು ಬೇಕು, ಅಷ್ಟಕ್ಕೆ ಮಾತ್ರ ಸೀಮಿತವಾಗಿಟ್ಟುಕೊಂಡು ಅವು ನಮ್ಮ ಗುಲಾಮರಾಗಿರುವಂತೆ ನೋಡಿಕೊಳ್ಳಬೇಕಲ್ಲದೆ ನಾವು ಅವುಗಳ ಗುಲಾಮರಾಗದಂತೆ ಎಚ್ಚರವಹಿಸಬೇಕಾಗಿದೆ. ಆ ಮೂಲಕ ಸುಂದರ ಬದುಕಿನ ಸೌಂದರ್ಯವನ್ನು ಸವಿಯೋಣ.

Facebook
Twitter
WhatsApp
LinkedIn
Telegram