ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಜಗತ್ತಿನ ಅತ್ಯದ್ಭುತ ಸೃಷ್ಟಿ ಯಾವುದು ಎಂದು ಕೇಳಿದರೆ ಅದು ಮನುಷ್ಯನ ಮನಸ್ಸು. ಅದು ಅದೃಶ್ಯ. ಆದರೆ ತನ್ನ ಇರುವಿಕೆಯನ್ನು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುತ್ತಿರುತ್ತದೆ. ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಶಕ್ತಿಶಾಲಿ ಅಸ್ತçವಿದು.
ಏಕಾಗ್ರತೆ ಹೊಂದಿರುವ ಮನಸ್ಸು, ಚಂಚಲ ಮನಸ್ಸು, ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆಯ ಮನಸ್ಸುಗಳನ್ನು ನಾವು ಕಾಣುತ್ತೇವೆ. ಮನಸ್ಸು ಮನುಷ್ಯನ ನಡತೆಯ ಪ್ರತಿಬಿಂಬದಂತೆ ವರ್ತಿಸುತ್ತದೆ. ದೇಹ ಭೌತಿಕವಾದರೆ ಮನಸ್ಸು ಅಂತರ್ಯ. ಅದನ್ನು ಆತ್ಮದ ಬಂಧು ಎನ್ನಬಹುದು.
ಮನಸ್ಸು ಎಲ್ಲಿದೆ? ಎಂದು ಕೇಳಿದಾಗ ಎಲ್ಲರೂ ನಮ್ಮೊಳಗಿದೆ ಎಂದು ಹೇಳುತ್ತಾರೆ. ಆದರೆ ದೇಹದ ಒಳಗೆ ಎಲ್ಲಿ ಇದೆ ಎಂದು ಕೇಳಿದಾಗ ಎದೆಯ ಭಾಗವನ್ನು ಮುಟ್ಟಿ ತೋರಿಸುತ್ತಾರೆ. ದೇಹದ ಇತರ ಯಾವುದೇ ಅಂಗಗಳಲ್ಲಿ ಮನಸ್ಸಿದೆ ಎಂದು ಯಾರೂ ಹೇಳುವುದಿಲ್ಲ. ರಮಣ ಮಹರ್ಷಿಗಳು ಈ ಸ್ಥಳದಲ್ಲೇ ಮನಸ್ಸು ನೆಲೆಸಿರುವುದು ಎಂದು ಹೇಳಿದ್ದಾರೆ. ಇದರಿಂದ ತಿಳಿಯುವುದೇನೆಂದರೆ ಮನುಷ್ಯನ ದೇಹಕ್ಕೂ ಮನಸ್ಸಿಗೂ ಒಂದು ಅವಿನಾಭಾವ ಸಂಬAಧ ಇದೆ. ದೇಹ ಬಹಿರಂಗವಾದರೆ ಮನಸ್ಸು ಅಂತರಂಗ.
ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿ, ಸಮಾಜ ಶಾಂತವಾಗಿರಬೇಕು ಎಂದು ಸದಾ ಅಪೇಕ್ಷಿಸುತ್ತೇವೆ. ಬಹಿರಂಗದ ಶುಚಿತ್ವಕ್ಕೆ ಅಂತರAಗದ ಶುಚಿತ್ವ ಅತಿ ಮುಖ್ಯ. ನಮ್ಮೊಳಗಿನ ಮನಸ್ಸು ಶುಚಿಯಾಗಿರಬೇಕು. ಮನ ಶುಚಿ ಇಲ್ಲದಿದ್ದರೆ ತನು ಶುಚಿಗೊಂಡರೂ ಪ್ರಯೋಜನವಾಗದು. ಮನುಷ್ಯನ ಮನಸ್ಸು ನಿರ್ಮಲವಾಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಪ್ರಜ್ಞೆ, ವಿವೇಚನೆ, ನಮ್ಮ ನಡೆ, ನುಡಿ, ವರ್ತನೆಯಲ್ಲಿ ಮನಸ್ಸಿನ ಪ್ರಭಾವವಿದೆ. ಚಂಚಲಚಿತ್ತ ಮನಸ್ಸು ಎಂದಿಗೂ ಒಳ್ಳೆಯದಲ್ಲ. ಬಾಲ್ಯದಲ್ಲಿ ಚಂಚಲ ಮನಸ್ಸು ಎಲ್ಲರಿಗೂ ಇಷ್ಟ. ಅದನ್ನು ಎಲ್ಲರೂ ಆನಂದಿಸುತ್ತಾರೆ. ಆದರೆ ಪ್ರೌಢಾವಸ್ಥೆಗೆ ಬಂದಾಗ ಮನಸ್ಸನ್ನು ಕೇಂದ್ರೀಕರಿಸಲು ಕಲಿಯಬೇಕು, ಏಕಾಗ್ರತೆ, ದೃಢ ಮನಸ್ಸನ್ನು ಹೊಂದಬೇಕು, ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕು ಇಲ್ಲವಾದರೆ ಪ್ರೌಢಾವಸ್ಥೆಯ ಸಮಯದಲ್ಲಿ ದುಶ್ಚಟಕ್ಕೆ ದಾಸರಾಗಿ ಸುಂದರ ಜೀವನವನ್ನು ನಮ್ಮ ಕೈಯಾರೆ ಕಳೆದುಕೊಳ್ಳಬೇಕಾಗುತ್ತದೆ.
ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮನುಷ್ಯನ ನಿಜವಾದ ಜಯ. ಕೋಪದ ಕೈಗೆ ಮನಸ್ಸನ್ನು, ಬುದ್ಧಿಯನ್ನು ಕೊಡಬಾರದು. ಮನಸ್ಸು ಎನ್ನುವುದು ಅತೀ ಸೂಕ್ಷö್ಮ. ಅದನ್ನು ಎಷ್ಟು ಜೋಪಾನವಾಗಿ, ಹೇಗೆ ಉಪಯೋಗಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿಂತಿದೆ.
ಇತ್ತೀಚೆಗೆ ಪುಸ್ತಕವೊಂದರಲ್ಲಿ ಮನಸ್ಸಿನ ಕುರಿತ ಕಥೆಯೊಂದನ್ನು ಓದಿದೆ. ಒಬ್ಬ ಶಿಷ್ಯ ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತಿಸುವ ಕಲೆಯನ್ನು ಕರಗತಗೊಳಿಸಿಕೊಳ್ಳಲು ಗುರುವಿನ ಬಳಿ ಹೋಗಿದ್ದನಂತೆ. ಆಗ ಗುರುಗಳು ಆ ವಿದ್ಯೆಯನ್ನು ಆತನಿಗೆ ಒಂದು ಮಂತ್ರದ ಮುಖೇನ ಕಲಿಸಿ ಅಭ್ಯಾಸ ಮಾಡು, ಆದರೆ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ‘ಈ ಮಂತ್ರವನ್ನು ಜಪಿಸುವಾಗ ನೀವು ಕೋತಿಯ ಬಗ್ಗೆ ಯೋಚಿಸಬಾರದು!’ ಎಂದರAತೆ. ಶಿಷ್ಯ ಇದೇನು ಮಹಾ, ಬಲು ಸುಲಭ ಎಂದುಕೊAಡು ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತಿಸುವ ಕಲೆಯನ್ನು ಕಲಿಯಲು ಶುರುಮಾಡಿದ. ಆದರೆ ಪ್ರತಿ ಬಾರಿ ಧ್ಯಾನಕ್ಕೆ ಕುಳಿತಾಗ ಅವನ ಮನಸ್ಸಿಗೆ ಮೊದಲು ಬಂದದ್ದು ಕೋತಿ! ಅವನು ಅದನ್ನು ಮನಸ್ಸಿನಿಂದ ಓಡಿಸಲು ಎಷ್ಟು ಪ್ರಯತ್ನಿಸಿದರೂ ಅದು ಅವನಲ್ಲಿ ಉಳಿಯಿತು.
ಪ್ರತಿ ಕ್ಷಣ ನಮ್ಮ ಮನಸ್ಸಿಗೆ ಬರುವ ಆಲೋಚನೆ, ಆಸೆ, ಭಾವನೆ, ನಿರ್ಧಾರಗಳ ಮೇಲೆ ಗಮನವಿರಬೇಕು. ನಮ್ಮ ಮನಸ್ಸು ಸಂಪೂರ್ಣವಾಗಿ ನಮ್ಮ ಹತೋಟಿಯಲ್ಲಿರಬೇಕು. ಮನಸ್ಸಿನಲ್ಲಿ ಸಿಟ್ಟು, ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಂತಹ ಕಲ್ಮಶ ತುಂಬದAತೆ ಕಾಪಾಡಿಕೊಳ್ಳಬೇಕು. ಮನಸ್ಸು ಸುಂದರ ಹೂದೋಟವಾಗಬೇಕೇ ಹೊರತು ತುಂಬಿದ ಕಸದ ತೊಟ್ಟಿಯಾಗಬಾರದು. ಮನಸ್ಸನ್ನು ಕಲ್ಪವೃಕ್ಷವಾಗುವಂತೆ ರೂಪಿಸಿಕೊಳ್ಳಬೇಕು. ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಧನಾತ್ಮಕ ಯೋಚನೆ, ಯೋಗ, ಧ್ಯಾನ ಅಗತ್ಯ. ಹಾಗಾಗಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಯೋಗ ಸಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.
ಏಕಾಗ್ರತೆ ಹೊಂದಿರದ ಮನಸ್ಸನ್ನು ಚಂಚಲ ಮನಸ್ಸು ಅಥವಾ ಮರ್ಕಟ ಮನಸ್ಸು ಎಂದು ಕರೆಯುತ್ತಾರೆ. ‘ಕಪಿಗೆ ಚಪಲತೆ ಸಹಜಂ’ ಎಂದು ಕವಿ ರನ್ನ ತನ್ನ ಒಂದು ಕವನದಲ್ಲಿ ತಿಳಿಸುತ್ತಾನೆ. ಈ ಮರ್ಕಟ ಮನಸ್ಸು ಒಂದೆಡೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ಒಂದು ಕಥೆ ಇದೆ. ಕೋತಿಗಳ ಉಪವಾಸದ ಹಾಡನ್ನು ನಾವು ಎಳವೆಯಲ್ಲಿ ಕಲಿತಿದ್ದೆವು. ಅದನ್ನು ಮಕ್ಕಳಿಗೆ ಹಿರಿಯರು ಆಗಾಗ ಹೇಳುತ್ತಿರುತ್ತಾರೆ.
ಬಾಳೆಯ ತೋಟದ ಪಕ್ಕದ ಕಾಡಿನಲ್ಲಿ ವಾಸಿಸುತ್ತಿದ್ದ ಕೋತಿಗಳು ಒಟ್ಟಿಗೆ ಸೇರಿ ಒಂದು ದಿನ ಉಪವಾಸವನ್ನು ಮಾಡಿದವಂತೆ. ಏನೂ ತಿನ್ನದೆ ಕೂತಿದ್ದ ಕೋತಿಗಳಿಗೆ ನಾಳೆಯ ತಿಂಡಿಯನ್ನು ಇಂದೇ ಹುಡುಕಿಡುವ ಆಲೋಚನೆ ಬಂದು ಪಕ್ಕದ ಬಾಳೆ ತೋಟಕ್ಕೆ ಹಾರಿದವಂತೆ. ಬಾಳೆಹಣ್ಣುಗಳನ್ನು ನೋಡಿ ಆಸೆ ಹುಟ್ಟಿ ಹಣ್ಣುಗಳನ್ನು ಕೊಯ್ದು ಅದನ್ನು ಸುಲಿದು ಇಡೋಣ, ನಾಳೆ ಉಪವಾಸ ಮುಗಿದೊಡನೆ ತಿನ್ನಬಹುದು ಎಂದು ಸುಲಿದು ಕೈಯಲ್ಲಿ ಇಟ್ಟುಕೊಂಡಿದ್ದವAತೆ. ಆಗ ಮತ್ತೊಂದು ಕೋತಿ ಕೈಯಲ್ಲೇತಕೆ ಬಾಯೊಳಗಿಟ್ಟರೆ ಆಗದೆ? ಎಂದಿತAತೆ. ಎಲ್ಲವೂ ಬಾಯೊಳಗೆ ಇಟ್ಟುಕೊಂಡವು. ಜಗಿದೇ ಬಿಡುವ ಎಂದು ಮತ್ತೊಂದು ಕೋತಿ ಅಂದಾಗ ಎಲ್ಲ ಕೋತಿಗಳೂ ಬಾಳೆ ಹಣ್ಣು ಜಗಿದು ತಿಂದೇ ಬಿಟ್ಟವಂತೆ. ಹೀಗೆ ಅವುಗಳ ಉಪವಾಸ ಮುಗಿಯಿತು. ಕೋತಿಗಳ ಉಪವಾಸದ ಬಗ್ಗೆ ಹಾಸ್ಯವಾಗಿ ತಿಳಿಸಿದರೂ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದನ್ನು ಕಲಿಸುತ್ತದೆ. ಮನೋಬಲದ ಬಗ್ಗೆ ತಿಳಿಸುತ್ತದೆ.
ಮಹಾಭಾರತದಲ್ಲೂ ಅರ್ಜುನನು ಬಿಲ್ಲು ವಿದ್ಯೆ ಕಲಿಯುವ ಸಂದರ್ಭ ಆಚಾರ್ಯ ದ್ರೋಣರು ಎಲ್ಲಾ ಶಿಷ್ಯಂದಿರಲ್ಲಿ ಮರದ ಮೇಲೆ ಏನು ಕಾಣುತ್ತಿದೆ ಎಂದು ಕೇಳಿದಾಗ ಎಲ್ಲರೂ ಅವರ ಮನಸ್ಸಿಗೆ ತೋಚಿದ್ದನ್ನು ಹೇಳಿದರು. ಆದರೆ ಅರ್ಜುನ ಮಾತ್ರ ತಲುಪಬೇಕಾದ ಗುರಿ ಮಾತ್ರ ಕಾಣುತ್ತಿದೆ ಎಂದು ಹೇಳಿದ. ಇದರಿಂದ ತಿಳಿಯುವುದೇನೆಂದರೆ ಒಂದು ವಿಚಾರಕ್ಕೆ ಕೇಂದ್ರೀಕರಿಸದೆ ಅನೇಕ ವಿಚಾರಗಳತ್ತ ಮನಸ್ಸನ್ನು ಬದಲಾಯಿಸುತ್ತಾ ಹೋದಾಗ ಯಾವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಯಾವುದೇ ವಿಷಯದಲ್ಲಿ ಇವರು ಪೂರ್ಣವಾದ ಮಾಹಿತಿಯನ್ನು ಪಡೆಯಲಾರರು ಅಥವಾ ಸೂಕ್ತ ನಿರ್ಧಾರವನ್ನೂ ಕೈಗೊಳ್ಳಲಾರರು. ಪರಿಣಾಮ ಮನಸ್ಸು ಪ್ರಕ್ಷುಬ್ದಗೊಂಡು, ಆತಂಕ, ಚಂಚಲತೆಯಿಂದಾಗಿ ಜೀವನದಲ್ಲಿ ಏನನ್ನೂ ಸಾಧಿಸಲಾರರು. ಇಂತವರು ನಂಬಿಕೆಗೂ ಅನರ್ಹರಾಗುತ್ತಾರೆ. ಅನೇಕ ಬಾರಿ ನಾವು ಹೇಳುವುದಿದೆ. ‘ಆತ ನೋಡಿದ ಹಾಗೆ ಇಲ್ಲ. ಆತನ ರೂಪಕ್ಕೂ ಆತನ ಮನಸ್ಸಿಗೂ ಸಂಬಂಧವೇ ಇಲ್ಲ. ನೋಡಲು ಮುಗ್ಧನಂತೆ ಕಂಡರೂ ವರ್ತನೆ ಮಾತ್ರ ವ್ಯಾಘ್ರನಂತೆ.’ ಎಷ್ಟೋ ಭಾರಿ ಇಂತಹ ಅನುಭವಗಳು ನಮಗೆ ಆಗಿರುತ್ತವೆ. ನೋಡಲು ಒಳ್ಳೆಯವರಂತೆ ಕಂಡರೂ, ಕುತಂತ್ರ, ಮೋಸ ಮಾಡುವ ಮನಸ್ಸುಳ್ಳವರನ್ನು ಅನೇಕ ನಿದರ್ಶನಗಳಲ್ಲಿ ನೋಡಿದ್ದೇವೆ.
ಅಂಗುಲಿಮಾಲನ ಕಥೆ ನೆನಪು ಮಾಡಿಕೊಳ್ಳೋಣ. ಕೊಲೆಗಾರನಾಗಿದ್ದ ಅಂಗುಲಿಮಾಲನನ್ನು ಗೌತಮ ಬುದ್ಧನು ಪರಿವರ್ತಿಸಿದ ಬಗೆಯನ್ನು ನಾವು ಆ ಕಥೆಯಲ್ಲಿ ತಿಳಿದುಕೊಳ್ಳುತ್ತೇವೆ. ಬಳಿಕ ಅಂಗುಲಿಮಾಲ ಬುದ್ಧನ ಶಿಷ್ಯನಾಗಿ ಆತನ ತತ್ವಾದರ್ಶಗಳನ್ನು ಜನರಿಗೆ ತಿಳಿಸುವಲ್ಲಿ ಶ್ರಮಿಸುತ್ತಾನೆ. ಕೊಳಕು ಮನಸ್ಸನ್ನು ಶುಭ್ರಮಾಡಿಕೊಳ್ಳಬಹುದು ಎಂಬ ಸಂದೇಶ ಇಲ್ಲಿದೆ.
ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಒಂದು ಸಮಾಜವನ್ನು ಕಟ್ಟಲು ಮನಸ್ಸು ಬೇಕು, ಅಂತೆಯೇ ಕೆಡವಲು ಕೂಡಾ ಹತಾಶೆಯ ಮನೋಭಾವನೆ ಇದ್ದರೆ ಸಾಕು. ಹಾಗಾಗಿ ಜಗತ್ತಿನ ಅನೇಕ ಯುದ್ಧ, ಅಶಾಂತಿಗಳಿಗೆ ವಿಚಲಿತ ಮನಸ್ಸು, ಮನಸ್ಥಿತಿಗಳೇ ಕಾರಣ. ಮನಸ್ಸು ಮಂದಿರವಾಗಬೇಕು. ನಾವು ಹೇಗೆ ನಮ್ಮ ದೇವಾಲಯವನ್ನು, ಮನೆಯಲ್ಲಿ ದೇವರನ್ನಿಡುವ ಜಾಗವನ್ನು ಶುಚಿಯಾಗಿಟ್ಟುಕೊಳ್ಳುತ್ತೇವೆಯೋ ಅಂತೆಯೇ ಮನೋ ಮಂದಿರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿಯವರು ಅನುಸರಿಸುತ್ತಿದ್ದ ಶತಮಾನದ ಜಪಾನಿನ ಮೂರು ಕೋತಿಗಳ ಸೂತ್ರ-ತತ್ವವನ್ನು ಅಳವಡಿಸಿಕೊಳ್ಳಬೇಕು.
ಕೆಟ್ಟದ್ದನ್ನು ನೋಡದ, ಕೆಟ್ಟದ್ದನ್ನು ಕೇಳದ ಮತ್ತು ಕೆಟ್ಟದ್ದನ್ನು ಮಾತನಾಡದ ಮೂರು ಬುದ್ಧಿವಂತ ಕೋತಿಗಳ ಪ್ರತಿಮೆಯನ್ನು ಗಾಂಧೀಜಿಯವರು ಹೊಂದಿದ್ದರು. ಅವರು ಆ ತತ್ವದಲ್ಲೇ ಬದುಕನ್ನು ಸಾಗಿಸಿದರು. ಅಹಿಂಸೆಯನ್ನು ಪರಿಪಾಲಿಸಿದರು. ‘ಮನಸ್ಸಿನ ನಿಯಂತ್ರಣ’ ಎಂಬುದು ಹೊರಗಿನವರಿಂದ, ಔಷಧಿ ಅಥವಾ ಚಿಕಿತ್ಸೆಯಿಂದ ಸಾಧ್ಯವಿಲ್ಲ, ಅದನ್ನು ಸ್ವತಃ ಅಭ್ಯಾಸ ಮಾಡಬೇಕು. ಯೋಗ, ಧ್ಯಾನಗಳ ಮೂಲಕ ಮನಸ್ಸನ್ನು ಶುದ್ಧ, ನಿರ್ಮಲವಾಗಿ ಇರಿಸಿಕೊಳ್ಳಬೇಕು. ಆವೇಗ, ದುಗುಡ, ಆತಂಕ, ಅನಿಶ್ಚಿತತೆಯ ಈ ಸಾಮಾಜಿಕ ವಾತಾವರಣವನ್ನು ಹೋಗಲಾಡಿಸಿ ಶಾಂತಿ, ಸೌಹಾರ್ದತೆಯ ಬದುಕು ರೂಪಿಸಿಕೊಳ್ಳಬೇಕಾದರೆ ಮೊದಲು ಚಂಚಲ ಮನವನ್ನು ನಿಗ್ರಹಿಸಬೇಕು. ಅಂತರAಗವನ್ನು ಅರಿತುಕೊಳ್ಳಬೇಕು. ಭಗವಾನ್ ಮಹಾವೀರರು; ‘ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ’ ಎಂದಿದ್ದಾರೆ.
ನಮ್ಮ ಮನಸ್ಸು, ಅಂತಸಾಕ್ಷಿಯನ್ನು ಗೆಲ್ಲುವ ಕಡೆ ಚಿತ್ತ ಹರಿಸೋಣ. ಆರೋಗ್ಯಕರ ವಿಷಯಗಳತ್ತ ಗಮನಹರಿಸೋಣ. ಉತ್ತಮ ವಿಚಾರಗಳನ್ನು ಅರಿತು ಸನ್ಮಾರ್ಗದಲ್ಲಿ ಮುನ್ನಡೆಯೋಣ. ಒಳ್ಳೆಯ ಹವ್ಯಾಸ, ಆಲೋಚನೆ, ದೃಷ್ಟಿಕೋನವನ್ನು ಬೆಳೆಸಿಕೊಂಡು ಸಮಾಜವನ್ನು ಧನಾತ್ಮವಾಗಿ ಬಲಪಡಿಸುವ ಕಾರ್ಯ ನಮ್ಮಿಂದಾಗಲಿ.
