ಡಾ. ಗೀತಾ ಎ.ಜೆ.
ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಶೇ. 14-15ರಷ್ಟು. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ಮೀಸಲಾತಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂಬ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಪಟ್ಟರೂ ಅಲ್ಲಿ ಮಹಿಳೆಯರ ಪಾಲಿಗೆ ಗೆಲುವು ದೊರೆಯಲಿಲ್ಲ.
ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿಯ ಇತಿಹಾಸದ ಹೆಜ್ಜೆಗಳನ್ನು ಗಮನಿಸುವುದಾದರೆ 1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 33ರಷ್ಟು ಮೀಸಲಾತಿ ನೀಡಿದ್ದು ಮಹಿಳಾ ಸಬಲೀಕರಣದ ಮೊದಲ ಪ್ರಯತ್ನ. ಬಿಹಾರ ರಾಜ್ಯದಲ್ಲಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮೊತ್ತ ಮೊದಲ ಬಾರಿಗೆ ಶೇ. 50 ಮಹಿಳಾ ಮೀಸಲಾತಿಯನ್ನು ನೀಡಲಾಯಿತು. ಇಂದು ಕರ್ನಾಟಕ ಸೇರಿದಂತೆ ಒಟ್ಟು 21ರಾಜ್ಯಗಳಲ್ಲಿ ಮಾತ್ರ ಶೇ. 50 ಮೀಸಲಾತಿ ಇದೆ. ಉಳಿದೆಡೆ ಶೇ. 33 ಮೀಸಲಾತಿ ಅನುಷ್ಠಾನದಲ್ಲಿದೆ.
ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯ ಮಾದರಿಯಲ್ಲಿಯೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಆಗಲೇ ಆರಂಭವಾಗಿತ್ತು. 1996ರಲ್ಲಿ ಹೆಚ್.ಡಿ. ದೇವೇಗೌಡರ ಸರಕಾರ ಈ ಮಸೂದೆಯನ್ನು ಮೊದಲ ಬಾರಿಗೆ ಮಂಡಿಸಿತು. ನಂತರ ವಾಜಪೇಯಿ ಅವರ ಅವಧಿಯಲ್ಲಿ ಮಸೂದೆಯ ಪ್ರತಿಗಳನ್ನು ಹರಿದು ಹಾಕಿದ ಘಟನೆಗಳು ನಡೆದವು. 2010ರಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾದರೂ ಲೋಕಸಭೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಸೆಪ್ಟೆಂಬರ್ 2023ರಲ್ಲಿ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಉಭಯ ಸದನಗಳು ದಾಖಲೆ ಮತಗಳೊಂದಿಗೆ ಈ ಮಸೂದೆಯನ್ನು ಅಂಗೀಕರಿಸಿದವು.
2023 ಮಸೂದೆಯು ಅಂಗೀಕಾರವಾಗಿ ಮಹಿಳೆಯರಲ್ಲಿ ಭರವಸೆಯ ಆಶಾಕಿರಣ ಮೂಡಿಸಿತು. ಆದರೆ ಅಂತಿಮ ಅನುಷ್ಠಾನಕ್ಕಾಗಿ ಕ್ಷೇತ್ರ ಮರುವಿಂಗಡಣೆ ಆಗಬೇಕಿತ್ತು. ಆದರೆ ಆ ಮಸೂದೆ ಇತ್ತೀಚೆಗೆ ತಿರಸ್ಕೃತವಾದ ಕಾರಣ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಹಿನ್ನೆಡೆಯಾಗಿದೆ. ಸದ್ಯ ಕಲ್ಪಿಸಲಾಗಿರುವ ಸದಸ್ಯ ಬಲಕ್ಕೆ ಹೋಲಿಸಿದಾಗ ಶಾಸನ ಸಭೆಗಳಲ್ಲಿ ಕನಿಷ್ಠ 181(ಲೋಕಸಭೆಯಲ್ಲಿ) ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬಹುದು. ಪಂಚಾಯತ್ ಮಟ್ಟದಲ್ಲಿ ಯಶಸ್ವಿಯಾದ ಮಹಿಳಾ ನಾಯಕತ್ವವು ರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸುವ ಹಾದಿ ಸುಗಮವಾಗಲಿದೆ ಎನ್ನುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.
ವಾಸ್ತವದ ಕಹಿ ಸತ್ಯ ಮತ್ತು ಬಿಕ್ಕಟ್ಟು
ರಾಜಕೀಯ ವಾಸ್ತವದ ಕಹಿ ಸತ್ಯ ಒಂದು ದೊಡ್ಡ ನಿರೀಕ್ಷೆಯನ್ನು ಹುಸಿಮಾಡಿದೆ. ಜನಸಂಖ್ಯೆ, ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಯ ಲೆಕ್ಕಾಚಾರದ ಸಮಸ್ಯೆ, ಜನಸಂಖ್ಯೆಯನ್ನು ಆಧರಿಸಿ ಸೀಟುಗಳನ್ನು ಹಂಚಿದರೆ ಜನಸಂಖ್ಯೆ ನಿಯಂತ್ರಣವನ್ನು ಪಾಲಿಸಿದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕುಸಿಯುತ್ತದೆ ಎನ್ನುವುದು ಬಹುದೊಡ್ಡ ಟೀಕಾಸ್ತ್ರ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯದಿಂದ ಸಂಸದರ ಸಂಖ್ಯೆ ಕಡಿಮೆಯಾಗಿ ಉತ್ತರದ ರಾಜ್ಯಗಳ ಸದಸ್ಯ ಬಲ ಹೆಚ್ಚಾಗುತ್ತದೆ. ಇದರಿಂದ ಮಹಿಳಾ ಮೀಸಲಾತಿಯು ಉತ್ತರ ಭಾರತದ ಪ್ರಾಬಲ್ಯಕ್ಕೆ ದಾರಿಯಾಗುತ್ತದೆ ಎಂಬುವುದು ಮಸೂದೆಯ ವಿರೋಧಕ್ಕೆ ಕಾರಣಗಳಾದವು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಒಳ ಮೀಸಲಾತಿ ಇಲ್ಲ ಎಂಬುದು ಇನ್ನೊಂದು ಕಾರಣ. ‘ಒಬಿಸಿ’ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡದ ಹೊರತು ಈ ಮಸೂದೆ ಅಪೂರ್ಣ ಎಂಬ ವಾದವು ಮುನ್ನೆಲೆಗೆ ಬಂತು. 2023ರಲ್ಲಿ ಬಹಳ ಸರಳವಾಗಿ ಜಾರಿಯಾದ ಕಾನೂನು ಬಹುಶಃ 2029ರ ಚುನಾವಣೆಯಲ್ಲೂ ಜಾರಿಯಾಗುವುದು ಸಂಶಯ ಎಂಬ ವಾತಾವರಣ ನಿರ್ಮಾಣವಾಗಿ ಮತ್ತಷ್ಟು ಟೀಕೆಗೆ ಗುರಿಯಾಯಿತು. ಆದರೆ ಈ ಎಲ್ಲಾ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ, ಅಂಕಿ ಅಂಶಗಳ ಸಂಕೀರ್ಣತೆಯ ನಡುವೆ ಮರೆಯಾಗಿ ಹೋದ ವಿಷಯ ಎಂದರೆ ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ನಿಜ ಆಶಯ ವ್ಯಕ್ತಪಡದೇ ಇರುವುದು ಮತ್ತು ಮೀಸಲಾತಿ ಜಾರಿಗೆ ಸಂಬಂಧಪಟ್ಟ ತೊಡಕುಗಳೇ ರಾಜಕೀಯ ಪಕ್ಷಗಳ ಮುಂದಿನ ಚುನಾವಣೆಯ ಅಜೆಂಡಾವಾಗಿ ಪರಿವರ್ತನೆ ಆಗಿರುವುದು.
ಮೀಸಲಾತಿ ಜಾರಿಯಾಗಿದ್ದರೆ?
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.೩೩ ಮಹಿಳಾ ಮೀಸಲಾತಿ ಜಾರಿಯಾದರೆ ಭಾರತದ ಚುನಾವಣಾ ವ್ಯವಸ್ಥೆ ಮತ್ತು ರಾಜಕೀಯ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತದೆ. ಪ್ರಮುಖ ಬದಲಾವಣೆಗಳು ಇಲ್ಲಿವೆ.
ಮತಕ್ಷೇತ್ರಗಳ ಸ್ವರೂಪದಲ್ಲಿ ಬದಲಾವಣೆ
ಈಗಿರುವ ಚುನಾವಣಾ ವ್ಯವಸ್ಥೆಯಲ್ಲಿ ಕ್ಷೇತ್ರಗಳು ‘ಎಸ್ಸಿ’ ಮತ್ತು ‘ಎಸ್ಟಿ’ ವರ್ಗಗಳಿಗೆ ಮೀಸಲಾಗಿವೆ. ಮಹಿಳಾ ಮೀಸಲಾತಿ ಬಂದಾಗ ಸುತ್ತುಬಳಕೆ ಪದ್ಧತಿ ಜಾರಿಯಾಗುತ್ತದೆ. ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲೂ ಮೀಸಲು ಕ್ಷೇತ್ರಗಳು ಬದಲಾಗುತ್ತವೆ. ಉದಾಹರಣೆಗೆ ಒಂದು ಜಿಲ್ಲೆಯಲ್ಲಿ 3 ಕ್ಷೇತ್ರಗಳಿದ್ದರೆ, ಒಂದು ಕ್ಷೇತ್ರದಲ್ಲಿ ಈ ಬಾರಿ ಮಹಿಳೆ ಮಾತ್ರ ಸ್ಪರ್ಧಿಸಬಹುದು. ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರ ‘ಜನರಲ್’ ಆಗಿ ಮತ್ತೊಂದು ಕ್ಷೇತ್ರ ಮಹಿಳಾ ಮೀಸಲಾಗುತ್ತದೆ.
ಹಿಡಿತ ತಪ್ಪುವ ಭಯ : ಒಬ್ಬ ನಾಯಕ ತನ್ನ ಕ್ಷೇತ್ರದಲ್ಲಿ 10-15 ವರ್ಷ ಕೆಲಸ ಮಾಡಿ ಪ್ರಭಾವ ಬೆಳೆಸಿಕೊಂಡಿರುತ್ತಾನೆ. ಕ್ಷೇತ್ರ ಮಹಿಳಾ ಮೀಸಲಾದಾಗ ಅವರು ಆ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ಇದು ರಾಜಕೀಯ ನಾಯಕರಲ್ಲಿ ‘ಕ್ಷೇತ್ರದ ಮೇಲಿನ ಹಿಡಿತ’ ತಪ್ಪುವ ಭೀತಿಯನ್ನು ಹುಟ್ಟಿಸುತ್ತದೆ.
ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಪ್ರಸ್ತುತ ರಾಜಕೀಯ ಪಕ್ಷಗಳು ‘ಗೆಲ್ಲುವ ಅಭ್ಯರ್ಥಿ’ ಎಂಬ ಮಾನದಂಡದ ಮೇಲೆ ಹೆಚ್ಚಾಗಿ ಪುರುಷರಿಗೇ ಟಿಕೆಟ್ ನೀಡುತ್ತವೆ. ಮೀಸಲಾತಿ ಜಾರಿಯಾದರೆ ಪಕ್ಷಗಳು ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಗಳನ್ನು ಹುಡುಕಲೇಬೇಕು. ಇದು ಪಕ್ಷದ ಆಂತರಿಕ ರಚನೆಯಲ್ಲಿ ಮಹಿಳಾ ಘಟಕಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಪುರುಷ ನಾಯಕರು ತಮ್ಮ ಕ್ಷೇತ್ರ ಮಹಿಳಾ ಮೀಸಲಾದಾಗ ತಮ್ಮ ಪತ್ನಿ, ಮಗಳು ಅಥವಾ ಕುಟುಂಬದ ಮಹಿಳೆಯರನ್ನು ಕಣಕ್ಕಿಳಿಸುವ ಸಾಧ್ಯತೆ ಇರುತ್ತದೆ. ಆದರೆ ಕಾಲಕ್ರಮೇಣ ಅವರು ಸ್ವತಂತ್ರ ನಾಯಕಿಯರಾಗಿ ಬೆಳೆಯುವ ಅವಕಾಶವೂ ಇರುತ್ತದೆ.
ಮಹಿಳಾ ಮತ ಮತ್ತು ವಿಚಾರಗಳಿಗೆ ಪ್ರಾಮುಖ್ಯತೆ
ಮೀಸಲಾತಿ ಬಂದಾಗ ಮಹಿಳಾ ಮತದಾರರ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ರಾಜಕೀಯ ಪಕ್ಷಗಳು ಕೇವಲ ಉಚಿತ ಕೊಡುಗೆಗಳನ್ನು ನೀಡುವುದಕ್ಕಿಂತ ಮುಖ್ಯವಾಗಿ ಮಹಿಳೆಯರ ಭದ್ರತೆ, ಶಿಕ್ಷಣ ಮತ್ತು ಆರ್ಥಿಕ ಹಕ್ಕುಗಳ ಬಗ್ಗೆ ಗಂಭೀರವಾದ ನೀತಿಗಳನ್ನು ರೂಪಿಸಬೇಕಾಗುತ್ತದೆ. ಶಾಸನ ಸಭೆಗಳಲ್ಲಿ ಚರ್ಚೆಗಳ ಗುಣಮಟ್ಟ ಬದಲಾಗಬಹುದು. ಮಹಿಳಾ ಮತ್ತು ಶಿಶು ಕಲ್ಯಾಣ, ಆರೋಗ್ಯದಂತಹ ವಿಷಯಗಳು ಹೆಚ್ಚಿನ ಆದ್ಯತೆಯನ್ನು ಪಡೆಯಬಹುದಾಗಿದೆ.
ಒಳ ಮೀಸಲಾತಿಯ ಸಂಕೀರ್ಣತೆ
ಈಗಿರುವ ವ್ಯವಸ್ಥೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ. ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ಇದೆ. ಹೊಸ ವ್ಯವಸ್ಥೆಯಲ್ಲಿ, ಎಸ್.ಸಿ. ಮತ್ತು ಎಸ್.ಟಿ. ವರ್ಗಕ್ಕೆ ಮೀಸಲಾದ ಒಟ್ಟು ಸ್ಥಾನಗಳಲ್ಲಿ ಶೇ. 33 ಸ್ಥಾನಗಳನ್ನು ಆಯಾ ವರ್ಗದ ಮಹಿಳೆಯರಿಗೇ ಮೀಸಲಿಡಬೇಕಾಗುತ್ತದೆ. ಇದು ಚುನಾವಣಾ ಆಯೋಗಕ್ಕೆ ಸೀಟುಗಳ ಹಂಚಿಕೆಯಲ್ಲಿ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ.
ಮಹಿಳಾ ಸಬಲೀಕರಣಕ್ಕೆ ನಿಜವಾಗಿಯೂ ಬೇಕಿರುವುದು ಏನು?
ತಾರ್ಕಿಕವಾಗಿ ನೋಡಿದರೆ ಮಹಿಳಾ ಸಬಲೀಕರಣದ ಹಜ್ಜೆಗಳು, ಮೀಸಲಾತಿ ಮಸೂದೆ, ರಾಜಕೀಯ ಸಂಘರ್ಷ, ಲಾಭ ನಷ್ಟದ ಲೆಕ್ಕಾಚಾರಕ್ಕಿಂತಲೂ ಮಿಗಿಲಾದುದು. ಅದರ ಆಳ ಅಗಲ ಕೇವಲ ಚುನಾವಣೆಗೆ ಸ್ಪರ್ಧಿಸುವ ಮತ್ತು ಪ್ರಾತಿನಿಧ್ಯ ಪಡೆಯುವ ವಿಷಯಕ್ಕಷ್ಟೇ ಸೀಮಿತವಾಗಿಲ್ಲ. ರಾಜಕೀಯಕ್ಕೆ ಬರಲು ಬೇಕಾದ ಆರ್ಥಿಕ ಶಕ್ತಿ ಮತ್ತು ಸಂಪನ್ಮೂಲಗಳ ಮೇಲೆ ಮಹಿಳೆಯರಿಗೆ ಅಧಿಕಾರವಿರಬೇಕು. ಮಹಿಳಾ ನಾಯಕತ್ವವನ್ನು ಸಮಾಜವು ಸಹಜವಾಗಿ ಸ್ವೀಕರಿಸುವಂತಾಗಬೇಕು. ಸಂಸತ್ತಿನಲ್ಲಿ ಮಹಿಳೆಯರು ಮೌನ ಪ್ರೇಕ್ಷಕರಾಗಬಾರದು.
ಮಹಿಳಾ ಮೀಸಲಾತಿಯೆಂದರೆ ಅದು ಕೇವಲ ಆದರ್ಶದ ಮಾತುಗಳಲ್ಲ. ರಾಜಕೀಯ ಅಸ್ತ್ರವೂ ಅಲ್ಲ. ಯಾಕೆಂದರೆ ಅಧಿಕಾರ ಹಂಚಿಕೆಯು ರಾಜಕೀಯ ಚೌಕಾಶಿಯ ವಸ್ತುವಲ್ಲ. ಅದು ದೇಶದ ಅರ್ಧದಷ್ಟು ಜನರ ಹಕ್ಕು. ಪ್ರಸ್ತುತ 2023ರ ಭರವಸೆಗಳು 2029ರ ವಾಸ್ತವದ ಸಂಘರ್ಷದಲ್ಲಿ ಸಿಲುಕಿಕೊಂಡಿವೆ. ಯಾವಾಗ ಮಹಿಳೆಯರು ತಮ್ಮ ಹಕ್ಕನ್ನು ‘ಕೇಳಿ ಪಡೆಯುವ’ ಬದಲು ‘ತಮ್ಮದಾಗಿಸಿಕೊಳ್ಳುತ್ತಾರೋ’ ಅಂದೇ ಈ ಮಸೂದೆಗೆ ನಿಜವಾದ ಅರ್ಥ ಸಿಗಲಿದೆ. ಭಾರತದ ಪ್ರಜಾಪ್ರಭುತ್ವವು ಪರಿಪೂರ್ಣವಾಗಲು ‘ಸಮಪಾಲು ಮತ್ತು ಸಮಬಾಳು’ ಎಂಬ ತತ್ವದಡಿ ಮಹಿಳೆಯರ ಪಾಲಿಗೆ ಅಧಿಕಾರದ ಭದ್ರ ಬುನಾದಿ ದೊರೆಯಬೇಕಿದೆ. ಆಗ ಸಮಾನತೆಗೊಂದು ಅರ್ಥ ದೊರೆತಂತಾಗುತ್ತದೆ.
ಮಹಿಳಾ ಮೀಸಲಾತಿ ಹೆಜ್ಜೆಗಳು
1996 : ಹೆಚ್.ಡಿ. ದೇವೇಗೌಡರ ಕಾಲದಲ್ಲಿ ಮೊದಲ ಮಂಡನೆ-ಲೋಕಸಭೆ ವಿಸರ್ಜನೆಯಿಂದ ರದ್ದಾಯಿತು.
1998-2003 : ವಾಜಪೇಯಿ ಸರಕಾರದಿಂದ ನಾಲ್ಕು ಬಾರಿ ಪ್ರಯತ್ನ-ಪ್ರಬಲ ವಿರೋಧದಿಂದ ವಿಫಲ.
2010 : ರಾಜ್ಯಸಭೆಯಲ್ಲಿ ಅಂಗೀಕಾರವಾದರೂ ಲೋಕಸಭೆಯಲ್ಲಿ ಮಂಡನೆಯಾಗಲಿಲ್ಲ.
2023 : ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿ ಷರತ್ತುಬದ್ಧ ಕಾನೂನಾಗಿ ಜಾರಿ.
2026 : ಕ್ಷೇತ್ರ ವಿಂಗಡಣೆ ವಿವಾದ-ಅನುಷ್ಠಾನದ ಬಗ್ಗೆ ರಾಜಕೀಯ ಬಿಕ್ಕಟ್ಟು.