ರಾಜೀವ ಹೆಗಡೆ
ಸುಮ್ನೇ ಇರೋಣ ಅಂದ್ರೆ ಅಮೆರಿಕ, ಇಸ್ರೇಲ್ನವರು ಇರಾಕ್ ಬಿಡ್ತಿಲ್ಲ. ಅವರಿಬ್ಬರು ಸೇರಿ ಇರಾನ್ ಮೇಲೆ ಹಾಕಿದ ಬೆಂಕಿಯ ಬಿಸಿಯು ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿದೆ. ಇಂದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾವು, ವಿಶ್ವದ ಪ್ರತಿಯೊಂದು ನಗರ, ಹಳ್ಳಿ, ಮನೆ-ಮನೆಗೆ ದಾಳಿಯಿಟ್ಟಿದೆ. ಯುದ್ಧವು ನಮ್ಮದಲ್ಲದಿದ್ದರೂ ಪ್ರತಿಯೊಬ್ಬರೂ ಬೆಲೆ ತೆರಬೇಕಿದೆ. ಇದುವೇ ಯುದ್ಧದ ಕರಾಳ ಮುಖ.
ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿ ಅತ್ಯಂತ ನಿರ್ಣಾಯಕ ಜಾಗದಲ್ಲಿ ಇರಾನ್ ಇದೆ. ಜಗತ್ತಿನ ಶೇ. 70ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ಸಾಗಾಟವಾಗುವ ಹಾರ್ಮುಜ್ ಜಲಸಂಧಿಯು ಇರಾನ್ ಗಡಿಯಲ್ಲಿ ಬರುತ್ತದೆ. ಇರಾಕ್, ಕತಾರ್, ಸೌದಿ ಅರೇಬಿಯಾ, ದುಬೈನಂತಹ ರಾಷ್ಟçಗಳು ಜಾಗತಿಕ ಮಾರುಕಟ್ಟೆ ತಲುಪಲು ಇರುವ ಏಕೈಕ ಜಲಮಾರ್ಗವಿದು. ಏಷ್ಯಾದ ಮಟ್ಟಿಗೆ ಶೇ. 80ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ಇದೇ ಜಲಸಂಧಿ ಮೂಲಕ ದಾಟಿಹೋಗಬೇಕಿದೆ. ಹಾಗೆಯೇ ಅಕ್ಕಿ, ಬೇಳೆ, ಕಾಳು, ರಾಸಾಯನಿಕ ಗೊಬ್ಬರ, ಹಣ್ಣು, ತರಕಾರಿ ಸೇರಿ ಮಧ್ಯಪ್ರಾಚ್ಯಗಳ ದೈನಂದಿನ ಅಗತ್ಯವನ್ನು ಕೂಡ ಇದೇ ಜಲಸಂಧಿ ಪೂರೈಸಬೇಕಿದೆ.
ಹೀಗಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಮಾರುಕಟ್ಟೆಯನ್ನು ಐಸಿಯುಗೆ ಹಾಕುವ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಇರಾನ್ ಮುಂದಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಮೇಲೆ ಒತ್ತಡ ಹೇರಲು ಇರಾನ್ಗೆ ಇದಕ್ಕಿಂತ ದೊಡ್ಡ ಅಸ್ತ್ರ ಬೇಕಿಲ್ಲ. ಯುದ್ಧ ಇನ್ನೊಂದು ತಿಂಗಳು ಮುಂದುವರಿದರೆ, ಜಗತ್ತಿನ ಬಹುತೇಕ ರಾಷ್ಟçಗಳು ಇಂಧನವಿಲ್ಲದೇ ಅಥವಾ ದುಬಾರಿ ಇಂಧನವನ್ನು ಕೊಳ್ಳಲಾಗದೇ ಸ್ತಬ್ಧವಾಗಬೇಕಾಗುತ್ತದೆ. ಹಾಗೆಯೇ ಮಧ್ಯಪ್ರಾಚ್ಯ ದೇಶಗಳು ಅತಿಯಾದ ಆಹಾರ, ದಿನಸಿಗಳ ಕೊರತೆ ಅನುಭವಿಸಬೇಕಾಗುತ್ತದೆ. ಇನ್ನೊಂದೆಡೆ ದೈನಂದಿನ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಲಿದೆ. ಅಷ್ಟಕ್ಕೂ ಇರಾನ್ಗೆ ಇದುವೇ ಬೇಕಿದೆ. ಅಮೆರಿಕವನ್ನು ಯುದ್ಧದ ಮೂಲಕ ಗೆಲ್ಲಲು ಸಾಧ್ಯವಿಲ್ಲ ಹಾಗೂ ಅವರನ್ನು ಕಟ್ಟಿಹಾಕುವುದು ಕಷ್ಟಸಾಧ್ಯ ಎನ್ನುವುದು ಇರಾನ್ನಲ್ಲಿನ ಪ್ರತಿಯೊಬ್ಬರಿಗೂ ತಿಳಿದಿದೆ. ಮಾರುಕಟ್ಟೆಯ ಉಸಿರು ನಿಲ್ಲುವಂತೆ ಮಾಡಿದರೆ, ಅಮೆರಿಕದ ಸ್ಥಿತಿಯೂ ಹೀನಾಯ ಮಟ್ಟಕ್ಕೆ ಹೋಗಲಿದೆ ಎನ್ನುವುದು ಇರಾನ್ ಯುದ್ಧ ತಂತ್ರದ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ.
ಆದರೆ ಈ ಜಾಗತಿಕ ಹುಚ್ಚರ ಕಿತ್ತಾಟದಲ್ಲಿ ಸಂಬಂಧವೇ ಇಲ್ಲದ ಭಾರತದಂಥ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಭಾರತದ ಒಟ್ಟಾರೆ ವೆಚ್ಚದಲ್ಲಿ ರೂ. 3.5 ಲಕ್ಷ ಕೋಟಿಗೂ ಹೆಚ್ಚುವರಿಯಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಕೇವಲ ರಸಗೊಬ್ಬರ ಸಬ್ಸಿಡಿಯೊಂದರಲ್ಲೇ ರೂ. 20 ಸಾವಿರ ಕೋಟಿಗೂ ಅಧಿಕ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮವಾಗಿ ಹಣದುಬ್ಬರವು ಶೇ. 4ರ ಗಡಿ ದಾಟಿದರೆ, ಜಿಡಿಪಿಯು ಶೇ. 7.8ರ ಬದಲಾಗಿ ಶೇ. 6.6ಕ್ಕೆ ಕುಸಿಯಬಹುದು ಎನ್ನುವ ಆತಂಕ ಶುರುವಾಗಿದೆ.
ಒಂದು ಅಂದಾಜಿನ ಪ್ರಕಾರ ಇರಾನ್-ಅಮೆರಿಕ ಸಮರದಿಂದ ಭಾರತಕ್ಕೆ ಪ್ರತಿ ತಿಂಗಳು ಸುಮಾರು ರೂ. 50 ಸಾವಿರ ಕೋಟಿ ಮೌಲ್ಯದ ರಫ್ತಿನ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಭಾರತದಿಂದ ಮಧ್ಯ ಪ್ರಾಚ್ಯ ದೇಶಗಳಿಗೆ ಬಾಸುಮತಿ ಅಕ್ಕಿ, ತರಕಾರಿ, ಹಣ್ಣು ಹಾಗೂ ಔಷಧಿಗಳು ರಫ್ತಾಗುತ್ತವೆ. ಇವೆಲ್ಲವೂ ಭಾರತದ ಕೃಷಿ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಲಿವೆ. ಇದರ ಜೊತೆಗೆ ಮೊಬೈಲ್, ಟೀ, ಕಾಫಿ ಹಾಗೂ ಎಲೆಕ್ಟಾçನಿಕ್ ಉತ್ಪನ್ನಗಳ ರಫ್ತಿನ ಮೇಲೂ ಪರಿಣಾಮ ಬೀರಲು ಈಗಾಗಲೇ ಶುರುವಾಗಿದೆ. ಒಂದೊಮ್ಮೆ ಈ ಯುದ್ಧವು ಸುದೀರ್ಘ ಅವಧಿಗೆ ಮುಂದುವರೆದರೆ ಈ ಉದ್ಯಮಗಳ ವಹಿವಾಟಿನಲ್ಲಿ ಶೇ. 20ಕ್ಕೂ ಅಧಿಕ ಪ್ರಮಾಣ ಕುಸಿತವಾಗುವ ಸಾಧ್ಯತೆಯಿದೆ. ಮೊದಲನೇಯದ್ದಾಗಿ ಭಾರತದ ಒಟ್ಟಾರೆ ರಫ್ತಿನಲ್ಲಿ ಮಧ್ಯ ಪ್ರಾಚ್ಯ ದೇಶಗಳ ಪಾಲು ಶೇ. 17ರಷ್ಟಿದೆ. ಇನ್ನೊಂದೆಡೆ ಹಾರ್ಮುಜ್ ಜಲಸಂಧಿಯ ಸಮಸ್ಯೆಯಿಂದ ಭಾರತದ ಹಡಗುಗಳು ದುಪ್ಪಟ್ಟು ಹಣಕೊಟ್ಟು ಪರ್ಯಾಯ ಮಾರ್ಗದಲ್ಲಿ ಹೋಗಬೇಕಿದೆ.
ಪರ್ಯಾಯ ಮಾರ್ಗಗಳ ಸಮಸ್ಯೆ ಏನು?
‘ಹಾರ್ಮುಜ್’ ಜಲಸಂಧಿ ಹೊರತುಪಡಿಸಿ ಇತರ ಪರ್ಯಾಯ ಮಾರ್ಗಗಳನ್ನು ಬಳಸಿಯೂ ಹೋಗಬಹುದಾಗಿದೆ. ಆದರೆ ಹಡಗುಗಳ ವೆಚ್ಚದಲ್ಲಿ 2-3 ಪಟ್ಟು ಏರಿಕೆಯಾಗುತ್ತದೆ. ಇದರಿಂದ ಉತ್ಪನ್ನಗಳ ದರದಲ್ಲಿ ಏರಿಕೆಯಾಗಿ, ಮಾರುಕಟ್ಟೆ ಕುಸಿತ ಕಾಣಲಿದೆ. ಇದರ ಜೊತೆಗೆ ಯುದ್ಧದಂತ ಕಾರ್ಮೋಡಗಳಿರುವಾಗ ಹಡಗುಗಳ ಮೇಲಿನ ವಿಮಾ ಪ್ರೀಮಿಯಂ ಅನ್ನು ಕಂಪನಿಗಳು ಹೆಚ್ಚಿಸುತ್ತವೆ. ಇದರಿಂದ ಯುದ್ಧದ ಸಂದರ್ಭದಲ್ಲಿ ಸಮುದ್ರಯಾನ ಮಾಡುವುದೇ ದುಬಾರಿಯ ಕೆಲಸವಾಗಿದೆ.
ಭಾರತಕ್ಕೆ ರಫ್ತಿನ ಜೊತೆಗೆ ವಿದೇಶದಲ್ಲಿರುವ ಭಾರತೀಯರು ತವರಿಗೆ ಕಳುಹಿಸುವ ಹಣದ ಪ್ರಮಾಣವೂ ದೊಡ್ಡದಿದೆ. ಭಾರತಕ್ಕೆ ರವಾನೆಯಾಗುವ ವಿದೇಶಿ ಹಣದಲ್ಲಿ ಶೇ. 38 ರಷ್ಟು ಮಧ್ಯ ಪ್ರಾಚ್ಯದಲ್ಲಿನ ಭಾರತೀಯ ಉದ್ಯೋಗಿಗಳಿಂದ ಬರುತ್ತದೆ. ಅಂದರೆ ಪ್ರತಿ ವರ್ಷ ಸುಮಾರು ರೂ. 4 ಲಕ್ಷ ಕೋಟಿ ಹಣ ಬರುತ್ತದೆ. ಯುದ್ಧದ ಕಾರಣದಿಂದ ಇವರ ಉದ್ಯೋಗಗಳಿಗೆ ಸಮಸ್ಯೆಯಾದರೆ, ಭಾರತಕ್ಕೆ ರವಾನೆಯಾಗುವ ಹಣದಲ್ಲಿಯೂ ಇಳಿಕೆಯಾಗಬಹುದು. ಕೇರಳದಂಥ ರಾಜ್ಯದ ಸಂಪೂರ್ಣ ಆರ್ಥಿಕತೆಯೇ ಇದರ ಮೇಲೆ ನಿಂತಿದೆ.
ಜಲಸಂಧಿ ನಿರ್ಮಾಣ ಹೇಗೆ?
ಜಗತ್ತಿನಲ್ಲಿ ನೈಸರ್ಗಿಕ ಹಾಗೂ ಕೃತಕ ಜಲಸಂಧಿಗಳಿವೆ. ಎರಡು ಸಾಗರಗಳನ್ನು ಸಂಧಿಸುವ ಕಿರಿದಾದ ಜಲಮಾರ್ಗಗಳೇ ಜಲಸಂಧಿಯಾಗಿವೆ. ಈ ಜಲಸಂಧಿಗಳ ಮೂಲಕವೇ ವಿಶ್ವದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹಡಗಿನ ಮೂಲಕ ವಹಿವಾಟು ನಡೆಸಲಾಗುತ್ತದೆ. ಸಮುದ್ರದೊಳಗಿನ ಸವೆತ ಹಾಗೂ ಭೂಮಿಯ ಚಲನೆ ಕಾರಣದಿಂದ ಜಗತ್ತಿನ ಹಲವೆಡೆ ಜಲಸಂಧಿಗಳು ನಿರ್ಮಾಣವಾಗಿವೆ. ಹಾರ್ಮುಜ್ ಹೊರತಾಗಿ ಮಲಾಕ್ಕಾ, ಬಬ್-ಎಲ್-ಮಂದೇಬ್, ಬಾಸ್ಪರಸ್, ಗಿಬ್ರಲ್ಟಾರ್ ಎನ್ನುವ ಪ್ರಮುಖ ಜಲಸಂಧಿಗಳಿವೆ. ಇದನ್ನು ಹೊರತುಪಡಿಸಿ ಸುಯೇಜ್ ಹಾಗೂ ಪನಾಮಾ ಎನ್ನುವ ಎರಡು ಕೃತಕ ಜಲಸಂಧಿಗಳಿವೆ. ಸುಯೇಜ್ನ್ನು ಇಂಗ್ಲೆಂಡ್ ಸರಕಾರ ನಿರ್ಮಿಸಿದ್ದರೆ, ಪನಾಮಾವನ್ನು ಅಮೆರಿಕ ನಿರ್ಮಿಸಿದೆ.
ಎಚ್ಚರಿಕೆ ಎಲ್ಲಿ ಬೇಕು? : ಭಾರತವು ಆಮದು ಮಾಡಿಕೊಳ್ಳುವ ಉತ್ಪನ್ನಗಳ ಬಳಕೆಗೆ ನಾವು ಮಿತಿ ಹಾಕಿಕೊಳ್ಳಬೇಕಿದೆ. ಅದರಿಂದ ಭಾರತದ ಮೇಲಿನ ಒತ್ತಡ ಕಡಿಮೆ ಆಗಲಿದೆ. ಹಾಗೆಯೇ ಇದು ದೇಶದ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ. ಇನ್ನೊಂದೆಡೆ ವಿದೇಶಕ್ಕೆ ರಫ್ತಾಗುವ ಪದಾರ್ಥಗಳಿಗೆ ದೇಶೀಯ ಮಟ್ಟದಲ್ಲಿ ಮಾರುಕಟ್ಟೆ ವಿಸ್ತಾರ ಮಾಡಿಕೊಳ್ಳಬೇಕಿದೆ. ಇಂತಹ ಆಪತ್ಕಾಲದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ, ದೇಶಿಯ ಉದ್ಯೋಗಗಳು ಸ್ಥಿರವಾಗಿರಲು ಸಹಾಯವಾಗುತ್ತದೆ.
ಕೊನೆಯದಾಗಿ : ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ನಡೆಸಿ ನಿಲ್ಲಿಸಿದಾಗ ಯುದ್ಧ ಮಾಡಬೇಕು ಎಂದು ಹಲವರು ಗೀಳಿಟ್ಟಿದ್ದರು. ಯುದ್ಧ ಶುರು ಮಾಡುವುದು ಸುಲಭ. ಆದರೆ ಇಂದಿನ ಕಾಲದಲ್ಲಿ ಸರ್ವನಾಶವಾಗುವರೆಗೂ ಯುದ್ಧ ನಿಲ್ಲುವ ಲಕ್ಷಣ ಕಾಣಿಸುವುದಿಲ್ಲ. ರಷ್ಯಾ-ಉಕ್ರೇನ್ನಲ್ಲಿ ಏನಾಗಿದೆಯೋ, ಅದರ ಮುಂದುವರಿದ ಭಾಗವು ಮಧ್ಯ ಪ್ರಾಚ್ಯದಲ್ಲಿ ಕಾಣಿಸುತ್ತಿದೆ. ಒಂದೊಮ್ಮೆ ಕೆಲವೇ ದಿನಗಳಲ್ಲಿ ಯುದ್ಧ ನಿಂತಿತು ಎನಿಸಿದರೂ, ಯುದ್ಧೋನ್ಮಾದದ ಹಗೆತನವು ದಶಕಗಳ ಕಾಲ ಮುಂದುವರಿಯಲಿದೆ. ಇವತ್ತಿನ ಈ ಅನಿಶ್ಚಿತತೆಯೂ ಒಂದಿಷ್ಟು ವರ್ಷಗಳ ಕಾಲ ಇರಲಿದೆ. ಭೀಕರ ಭೂಕಂಪನವಾದಾಗ ಲಘು ಭೂಕಂಪನಗಳು ಸಾಮಾನ್ಯ ಎನ್ನುವ ಹಾಗೆ, ಮಧ್ಯ ಪ್ರಾಚ್ಯದ ಸ್ಥಿತಿ ಆಗಬಹುದು.
