ಧೈರ್ಯ ತುಂಬಿದ ಪೂಜ್ಯರ ಆಗಮನ – ಕೊಡಗಿನ ಮೊಣ್ಣಂಗೇರಿ ಮರುನಿರ್ಮಾಣ

‘ಕೊಡಗು’ ಈ ಹೆಸರನ್ನು ಕೇಳಿದ ಕೂಡಲೇ ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಭಾರತಾಂಬೆಯ ರಕ್ಷಣೆಗೆ ಈ ಭೂಮಿ ನೀಡಿದ-ನೀಡುತ್ತಿರುವ ಕೊಡುಗೆ, ಚುಮುಚುಮು ಚಳಿ, ಕಾಫಿ ತೋಟ, ಸುಂದರ ತಾಣಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಹೂರಣ ನಮ್ಮ ಕಣ್ಣೆದುರಿನಲ್ಲಿ ರಾರಾಜಿಸುತ್ತದೆ. ಆದರೆ 2018ರ ಆಗಸ್ಟ್ 16 ಕೊಡಗಿನ ಸುಂದರ ಬದುಕಿನ ಕಥೆಗೆ ‘ಪ್ರಕೃತಿ ವಿಕೋಪ’ ಹೊಸ ಅಧ್ಯಾಯವೊಂದನ್ನು ಬರೆದಿದೆ.
ನಿಶ್ಯಬ್ಧವಾಗಿದ್ದ ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಂಡು ರೌದ್ರನರ್ತನವನ್ನು ಪ್ರದರ್ಶಿಸಿದ ಪರಿಣಾಮ ಮಕ್ಕಂದೂರು, ಗಾಳಿಬೀಡು, ಮಾದಪುರ, ಮದೆನಾಡು, ಕೆ. ನಿಡುಗನೆ, ಹಟ್ಟಿಹೊಳೆ, ಎರಡನೇ ಮೊಣ್ಣಂಗೇರಿಯಲ್ಲಿ ಎತ್ತರದ ಗುಡ್ಡಗಳು ಜಾರಿ ಬಂದು ಮನೆ, ಕೃಷಿಯನ್ನು ಧ್ವಂಸಗೈದವು. ನೀರು ಎಲ್ಲೆಡೆ ಹರಿದ ಪರಿಣಾಮ ಮನೆ ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು. ರಸ್ತೆ, ವಿದ್ಯುತ್ ಸಂಪರ್ಕಗಳು ಕಡಿತಗೊಂಡು ಜನನಿಬಿಡ ಪ್ರದೇಶ ಅಕ್ಷರಶಃ ಸ್ಮಶಾನವಾಯಿತು. ಇದೀಗ ಕೊಡಗಿನ ಈ ದುರಂತಕ್ಕೆ ಎಂಟು ವರ್ಷಗಳು ತುಂಬುತ್ತಿವೆ. ಇದೀಗ ಅಲ್ಲಿನ ಜನಜೀವನ ಹೇಗಿರಬಹುದು..! ಎಂಬ ಪ್ರಶ್ನೆಗಳನ್ನೊತ್ತು ಮಡಿಕೇರಿಗೆ ಹೊರಟ ‘ನಿರಂತರ’ ತಂಡವನ್ನು ಪ್ರಕೃತಿ ವಿಕೋಪದ ನೋವನ್ನುಂಡಿರುವ ಮೊಣ್ಣಂಗೇರಿ2ರ ನಿವಾಸಿ ಧನಂಜಯ ಅಗೋಳಿಕಜೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿಯವರು ಬರಮಾಡಿಕೊಂಡರು.
ಇತರ ಕಡೆಗಳಿಗೆ ಹೋಲಿಸಿದರೆ ಮೊಣ್ಣಂಗೇರಿ2ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದಿಂದ ಹಾನಿಗಳಾಗಿವೆ. ಆದರೆ ಇಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪ್ರವಾಹದ ದಿನಗಳಲ್ಲಿ ಮೊಣ್ಣಂಗೇರಿ2 ಅನ್ನು ಕಂಡ ಜನ ಇನ್ನೆಂದಿಗೂ ಮೊಣ್ಣಂಗೇರಿ ಮೊದಲಿನಂತೆ ಆಗಲು ಸಾಧ್ಯವೇ ಇಲ್ಲವೆಂದುಕೊಂಡಿದ್ದರು. ಮೊಣ್ಣಂಗೇರಿಯಲ್ಲಿ ಸುತ್ತಾಡಿ ಸಿದ್ಧಗೊಳಿಸಿದ ವಿಶೇಷ ವರದಿಯೊಂದು ಇಲ್ಲಿದೆ. ಬದುಕನ್ನು ಹೇಗೆ ಮರು ನಿರ್ಮಿಸಿಕೊಳ್ಳಬಹುದು ಎಂಬ ಮಾತಿಗೆ ಇಲ್ಲಿನ ಪ್ರಯತ್ನ ಪ್ರೇರಣೆಯಾಗಬಲ್ಲದು.
ಮಣ್ಣಿನಡಿ ಸಿಲುಕಿದ ಮೊಣ್ಣಂಗೇರಿ : ಮಡಿಕೇರಿಯಿಂದ 11 ಕಿ.ಮೀ. ದೂರದ ಊರು ಮೊಣ್ಣಂಗೇರಿ೨. ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಮೊಣ್ಣಂಗೇರಿ೨ರಲ್ಲಿ ಎಂಟು ವರ್ಷಗಳ ಹಿಂದೆ ಸುಮಾರು 210 ಮನೆಗಳಿದ್ದವು. ಅಡಕೆ, ಕಾಫಿ ಇಲ್ಲಿನವರಿಗೆ ಆದಾಯವನ್ನು ತರುವ ಪ್ರಮುಖ ಬೆಳೆಗಳಾಗಿದ್ದವು. ವಿದ್ಯುತ್ ಸಂಪರ್ಕವನ್ನು ಕಾಣದ ಈ ಹಳ್ಳಿಯಲ್ಲಿ ಗುಡ್ಡದಿಂದ ಪೈಪ್ ಮೂಲಕ ಮನೆ ತಲುಪುತ್ತಿದ್ದ ನೀರನ್ನು ಎತ್ತರದಿಂದ ಬೀಳುವಂತೆ ಮಾಡಿ ವಿದ್ಯುತ್ ಬಲ್ಬುಗಳನ್ನು ಉರಿಸಿದ ಹೆಗ್ಗಳಿಕೆ ಗ್ರಾಮಾಭಿವೃದ್ಧಿ ಯೋಜನೆಯದ್ದು. ತಾವಾಯಿತು, ತಮ್ಮ ಪಾಡಾಯಿತು ಎಂದುಕೊಂಡು ಹಳ್ಳಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಬದುಕು ಸಾಗಿಸುತ್ತಿದ್ದ ಈ ಕುಗ್ರಾಮದ ಜನತೆಯ ಪಾಲಿಗೆೆ 2018 ಎಂದೆಂದಿಗೂ ಮರೆಯಲಾಗದ ದಿನ.
ಒಂದು ತಿಂಗಳ ಹಿಂದೆ ಭೂಮಿ ಬಿರುಕು : ಕೊಡಗು ದುರಂತಕ್ಕೆ ಒಂದು ತಿಂಗಳ ಹಿಂದೆ ಇಲ್ಲಿನ ಕೆಲವೊಂದು ಭಾಗಗಳಲ್ಲಿ ಮುನ್ಸೂಚನೆಯಾಗಿ ಭೂಮಿ ಬಿರುಕು ಬಿಟ್ಟಿರುವುದು ಧನಂಜಯ ಮತ್ತು ಇತರ ಕೆಲವರ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಊರಿನಲ್ಲಿ ಜಾಗೃತಿ ಮೂಡಿಸುವ, ಪ್ರಕೃತಿ ವಿಕೋಪಕ್ಕಿಂತ ಹಿಂದಿನ ದಿನ ಅಂದರೆ ಆಗೋಸ್ತ್ 15 ರಂದು ಬೆಟ್ಟದಂಚಿನಲ್ಲಿರುವ ಮನೆಮಂದಿಯನ್ನು ಬೇರೆಡೆಗಳಿಗೆ ಕಳುಹಿಸಿಕೊಡುವ ಕೆಲಸವನ್ನು ಧನಂಜಯ ಮತ್ತು ಅವರ ತಂಡ ಮಾಡಿದೆ. ಇದರಿಂದಾಗಿ ಇಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನುತ್ತಾರೆ ಊರಮಂದಿ.
ಧೈರ್ಯ ತುಂಬಿದ ಶ್ರೀ ಹೆಗ್ಗಡೆಯವರು : ಕೊಡಗಿಗೆ ಶ್ರೀ ಹೆಗ್ಗಡೆಯವರು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿದ್ದಾರೆ. ಅಲ್ಲಿನವರಿಗೆ ತಕ್ಷಣ ಅಗತ್ಯ ವಸ್ತುಗಳನ್ನು ವ್ಯವಸ್ಥೆಗೊಳಿಸಿದ್ದಾರೆ. ಆ ದಿನಗಳಲ್ಲಿ ಊರಿನ ಹೆಚ್ಚಿನ ಮಂದಿ ಮುಂದೆಂದೂ ನಾವು ಇಲ್ಲಿ ವಾಸಿಸುವುದಿಲ್ಲವೆಂದುಕೊಂಡು ಊರನ್ನು ಬಿಡುವ ನಿರ್ಧಾರವನ್ನು ಮಾಡಿದ್ದರು. ಇವರಿಗೆ ಶ್ರೀ ಹೆಗ್ಗಡೆಯವರು ಪ್ರಕೃತಿ ವಿಕೋಪದ ನೋವನ್ನು ಮರೆತು ಎಚ್ಚರಿಕೆಯಿಂದ ಹೊಸ ಬದುಕನ್ನು ಕಟ್ಟಿಕೊಳ್ಳುವಂತೆ ಮಾರ್ಗದರ್ಶನವನ್ನು ನೀಡಿದ್ದಾರೆ. ಶ್ರೀ ಹೆಗ್ಗಡೆಯವರ ಮಾತಿನಿಂದ ಪ್ರೇರಣೆಗೊಂಡು ಊರಿನವರೆಲ್ಲ ಸೇರಿ ಮೊಣ್ಣಂಗೇರಿಯ ಮರು ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ.
ಮೊಣ್ಣಂಗೇರಿ ಬದುಕಿಗೆ ಮರುಜೀವ : ಸುಮಾರು ಒಂದು ವರ್ಷಗಳ ಕಾಲ ಮೊಣ್ಣಂಗೇರಿ2 ಮರು ನಿರ್ಮಾಣದ ಕೆಲಸಗಳು ನಡೆದಿವೆ. ಗ್ರಾಮಾಭಿವೃದ್ಧಿ ಯೋಜನೆ ಇವರಿಗೆ ಸದಾ ಮಾರ್ಗದರ್ಶನ, ಅಗತ್ಯ ಸಹಕಾರವನ್ನು ನೀಡಿದೆ. ಎತ್ತರದ ಗುಡ್ಡದಿಂದ ಮಣ್ಣು ಮತ್ತು ಬಂಡೆಕಲ್ಲುಗಳು ಜಾರಿ ಬಂದ ಪರಿಣಾಮ ಇಲ್ಲಿನ 20 ಮನೆಗಳು ನೆಲಸಮವಾಗಿ 40ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿತ್ತು. ಹಾನಿಯಾದ ಎಲ್ಲ ಮನೆಗಳನ್ನು ಮತ್ತೆ ನಿರ್ಮಿಸಲಾಗಿದೆ. ರಸ್ತೆ, ಮೋರಿ ನಿರ್ಮಾಣ, ವಿದ್ಯುತ್ ಕಂಬಗಳ ಅಳವಡಿಕೆ ಹೀಗೆ ಎಲ್ಲ ಕೆಲಸಗಳನ್ನು ಊರಮಂದಿ ಜೊತೆಯಾಗಿ ಮಾಡಿದ್ದಾರೆ.
ಒಂದು ವರ್ಷದ ನಂತರ ಶಾಲೆಯ ಬಾಗಿಲು ತೆರೆಯಿತು : ಒಂದು ಅಂಗನವಾಡಿ ಕೇಂದ್ರ ಮತ್ತು ಐದನೇ ತರಗತಿಯವರೆಗೆ ಶಿಕ್ಷಣ ನೀಡುವ ಶಾಲೆಯೊಂದು ಇಲ್ಲಿದೆ. ಒಂದು ವರ್ಷ ಮುಚ್ಚಿದ ಶಾಲೆಯ ಬಾಗಿಲು ಗ್ರಾಮಸ್ಥರ ಪ್ರಯತ್ನದ ಫಲವಾಗಿ ಮತ್ತೆ ತೆರೆದಿದೆ. ಪ್ರವಾಹದ ಪರಿಣಾಮವಾಗಿ 14 ಭಾಗವಾಗಿ ಹಂಚಿಹೋಗಿದ್ದ ಮೊಣ್ಣಂಗೇರಿ2 ಇದೀಗ ಮತ್ತೆ ಜೋಡಣೆಗೊಂಡಿದೆ. ಗ್ರಾಮಾಭಿವೃದ್ಧಿ ಯೋಜನೆಯ ಅನುದಾನ ಮತ್ತು ಊರವರ ಸಹಭಾಗಿತ್ವದಡಿ ಹೊಸ ಭಜನಾ ಮಂದಿರವೊಂದು ನಿರ್ಮಾಣಗೊಂಡಿದೆ. ಇದೀಗ ಮೊಣ್ಣಂಗೇರಿಯಲ್ಲಿ ಸುಮಾರು 700 ಮಂದಿ ವಾಸಿಸುತ್ತಿದ್ದಾರೆ. ಬದುಕು ಹಿಂದಿನ ವೈಭವದತ್ತ ಮರಳಿದೆ. ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವವು ನಡೆಯುತ್ತದೆ. ಇಲ್ಲಿನವರಿಗಾಗಿ ಸುಮಾರು 60ರಷ್ಟು ಮನೆಗಳನ್ನು ಸರಕಾರ ಇತರೆಡೆಗಳಲ್ಲಿ ನಿರ್ಮಿಸಿಕೊಟ್ಟಿದೆ. ಆದರೆ ಕೃಷಿಗಳೆಲ್ಲವು ಮೊಣ್ಣಂಗೇರಿಯಲ್ಲಿರುವ ಕಾರಣ ಹೆಚ್ಚಿನವರು ಮತ್ತೆ ಇಲ್ಲೆ ವಾಸಿಸುತ್ತಿದ್ದಾರೆ.
‘ಹಿಂದಿನ ಘಟನೆಯನ್ನು ನೆನಪಿಸಿಕೊಂಡಾಗ ಜನ ಭಯಪಡುತ್ತಾರೆ. ಹಾಗೆಂದು ಇಲ್ಲಿನ ಜನ ಎಕರೆಗಟ್ಟಲೆ ಜಮೀನು, ಕೃಷಿ ತೋಟ, ಮನೆಗಳನ್ನು ಬಿಟ್ಟು ಇತರೆಡೆಗಳಿಗೆ ತೆರಳುವುದು ಅಷ್ಟು ಸುಲಭದ ಮಾತಲ್ಲ. ಪ್ರಕೃತಿ ವಿಕೋಪದ ಬಗ್ಗೆ ಸದಾ ಜಾಗರೂಕರಾಗಿ ಬದುಕಬೇಕಾದ ಅನಿವಾರ್ಯತೆ ಇಲ್ಲಿದೆ’ ಎನ್ನುತ್ತಾರೆ ಯೋಜನೆಯ ಜನಜಾಗೃತಿ ಜಿಲ್ಲಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಧನಂಜಯರವರು.
ದೂರದಿಂದ ಜಾರಿಕೊಂಡು ಬಂದ ಗುಡ್ಡ, ಬಂಡೆಕಲ್ಲುಗಳು, ಕಣ್ಮರೆಯಾದ ರಸ್ತೆಯ ಕುರುಹು, ನದಿಯಂತೆ ನೀರು ಹರಿದ ಪರಿಣಾಮ ಕಾಣಿಸಿಕೊಂಡ ಹೊಂಡಗಳು, ತೊರೆಗಳು, ಪಾಳುಬಿದ್ದ ಮನೆಗಳ ಅವಶೇಷಗಳು, ಅಲ್ಲಲ್ಲಿ ತುಂಡಾಗಿ ಬಿದ್ದಿರುವ ವಿದ್ಯುತ್ ಕಂಬಗಳು, ಗುಡ್ಡದಿಂದ ಜಾರಿ ಬಂದ ಮಣ್ಣು-ಬಂಡೆಕಲ್ಲುಗಳು 2018ರ ಮನೆಯ ಕುರುಹು ಆಗಿ ಆ ದಿನಗಳನ್ನು ಮತ್ತೆ ನೆನಪಿಸುತ್ತಿವೆ. ಅದೇನೇ ಇರಲಿ ಊರಮಂದಿ ಮನಸ್ಸು ಮಾಡಿದರೆ ಒಂದು ಗ್ರಾಮವನ್ನು ಹೇಗೆ ಮರುನಿರ್ಮಿಸಬಹುದೆಂಬ ಮಾತಿಗೆ ಮೊಣ್ಣಂಗೇರಿ2 ಮಾದರಿ ಉದಾಹರಣೆಯಾಗಬಲ್ಲದು.

Facebook
Twitter
WhatsApp
LinkedIn
Telegram