ಕಳೆದೊಂದು ತಿಂಗಳಿನಿಂದ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳೆಂದರೆ ಯುದ್ಧ ಹಾಗೂ ಇಂಧನದ ಬೆಲೆ. ಇವೆರಡೂ ವಿಚಾರದಲ್ಲಿ ಭಾರತವು ಅತ್ಯಂತ ನಾಜೂಕಿನ ಜಾಗದಲ್ಲಿ ಕುಳಿತಿದೆ. ಹಾಗೆಯೇ ಭಾರತವು ಜಾಗತಿಕವಾಗಿ ಕಚ್ಛಾತೈಲಗಳ ಆಮದು, ಬಳಕೆದಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿದ್ದರೆ, ಅಚ್ಚರಿಯ ರೀತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲೂ ಎರಡನೇ ಸ್ಥಾನವನ್ನು ಪಡೆದಿದೆ. ಇದು ಭಾರತದ ಪೆಟ್ರೋಲಿಯಂ ವಹಿವಾಟಿನ ಸಂಕೀರ್ಣತೆಯನ್ನು ತೋರಿಸುತ್ತದೆ. ಇಂತಹ ವೈವಿಧ್ಯತೆಯ ಕಾರಣದಿಂದಲೇ ಜಾಗತಿಕ ಸಮರ ಕಾಲದಲ್ಲಿ ಭಾರತವು ಇಂಧನ ಸಂಕಷ್ಟದಲ್ಲಿ ಸಿಲುಕಿಲ್ಲ ಎನ್ನುವ ವಾದವಿದೆ. ಏಕೆಂದರೆ ಕಚ್ಛಾತೈಲಕ್ಕಾಗಿ ಇತರ ದೇಶಗಳನ್ನು ಅವಲಂಬಿಸಿರುವ ರೀತಿಯಲ್ಲೇ ವಿಶ್ವದ ಪ್ರಭಾವಿ ರಾಷ್ಟçಗಳು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಭಾರತದ ಮೇಲೆ ನಿರ್ಭರವಾಗಿವೆ. ಹೀಗಾಗಿಯೇ ಭಾರತವು ಅಮೆರಿಕ, ಯುರೋಪ್ ಜೊತೆಗೆ ಮೈತ್ರಿಯನ್ನು ಹೊಂದಿದೆ. ಇನ್ನೊಂದೆಡೆ ರಷ್ಯಾ, ಇರಾನ್ ಜೊತೆಗಿನ ಸಂಬಂಧವೂ ಉತ್ತಮವಾಗಿದೆ. ಒಂದರ್ಥದಲ್ಲಿ ‘ನಾ ನಿನಗಾದರೆ, ನೀ ಎನಗೆ’ ಎನ್ನುವ ಇಂಧನ ನೀತಿಯಲ್ಲಿ ಭಾರತ ಬದುಕುತ್ತಿದೆ. ಹೀಗಾಗಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಆಮದು-ರಫ್ತು ವಹಿವಾಟು ಹೇಗಿದೆ? ಭಾರತ ಯಾವ್ಯಾವ ದೇಶದಿಂದ ಆಮದು ಮಾಡಿಕೊಳ್ಳುತ್ತಿದೆ? ಯಾವ ದೇಶದಿಂದ ನಾವು ಬಳಸುವ ಅನಿಲಗಳು ಬರುತ್ತವೆ? ನಾವು ಯಾವ್ಯಾವ ದೇಶಕ್ಕೆ ರಫ್ತು ಮಾಡುತ್ತಿದ್ದೇವೆ ಹಾಗೂ ಸ್ಥಳೀಯ ಉತ್ಪಾದನೆ ಎಷ್ಟು ಎನ್ನುವ ಸಮಗ್ರ ಚಿತ್ರಣವನ್ನು ನೀಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಆಮದು-ಸ್ಥಳೀಯ ಉತ್ಪಾದನೆ : ಭಾರತವು ಕಳೆದೊಂದು ಆರ್ಥಿಕ ವರ್ಷದಲ್ಲಿ ಸುಮಾರು 244 ಮಿಲಿಯನ್ ಮೆಟ್ರಿಕ್ ಟನ್ ಕಚ್ಛಾತೈಲವನ್ನು ಆಮದು ಮಾಡಿಕೊಂಡಿದೆ. ಇದಕ್ಕಾಗಿ ಸುಮಾರು 150 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಸ್ಥಳೀಯವಾಗಿ 30 ಮಿಲಿಯನ್ ಮೆಟ್ರಿಕ್ ಟನ್ ಕಚ್ಛಾತೈಲ ದೊರೆತಿದೆ. ಇದರ ಬೆಲೆಯು ಸುಮಾರು 18 ಬಿಲಿಯನ್ ಡಾಲರ್ ಆಗಬಹುದು. ಅಂದರೆ ಭಾರತವು ಸುಮಾರು ಶೇ.88 ರಷ್ಟು ಕಚ್ಛಾತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದೇ ಅವಧಿಯಲ್ಲಿ ಭಾರತವು ಸುಮಾರು 30 ಮಿಲಿಯನ್ ಟನ್ ಅನಿಲವನ್ನು ಆಮದು ಮಾಡಿಕೊಳ್ಳಲು 15 ಬಿಲಿಯನ್ ಡಾಲರ್ ವ್ಯಯಿಸುತ್ತದೆ. ಸ್ಥಳೀಯವಾಗಿ ಭಾರತವು ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ೩೪ ಮಿಲಿಯನ್ ಟನ್ ಅನಿಲವನ್ನು ಉತ್ಪಾದನೆ ಮಾಡುತ್ತದೆ. ಅಲ್ಲಿಗೆ ಭಾರತದ ಅರ್ಧಕ್ಕೂ ಅಧಿಕ ಅನಿಲ ಬೇಡಿಕೆಯು ಸ್ಥಳೀಯವಾಗಿಯೇ ಪೂರೈಕೆಯಾಗುತ್ತದೆ. ಇಷ್ಟಾಗಿಯೂ ಭಾರತಕ್ಕೆ ಅನಿಲದ ಸಮಸ್ಯೆಯಾಗಲು ಕಾರಣವಾಗಿದ್ದು ಏಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಸಾಮಾನ್ಯವಾಗಿ ಅನಿಲವನ್ನು ಸಂಗ್ರಹಿಸಲು ವೆಚ್ಚವು ಹೆಚ್ಚಾಗುತ್ತದೆ ಹಾಗೂ ಅದು ಸಾಧುವಲ್ಲ. ಕಚ್ಛಾತೈಲದಷ್ಟು ಕಡಿಮೆ ದರದಲ್ಲಿ ಅನಿಲವನ್ನು ಸಂಗ್ರಹಿಸಲು ಸಾಧ್ಯವಿಲ್ಲ.
ಆಮದಿನಲ್ಲಿ ರಷ್ಯಾವೇ ನಂ.1 : ಕಳೆದೊಂದು ವರ್ಷದಿಂದ ರಷ್ಯಾದಿಂದ ಕಚ್ಛಾತೈಲ ಆಮದಿನ ಬಗ್ಗೆ ಹಲವಾರು ರೀತಿಯಲ್ಲಿ ವಾದ-ವಿವಾದಗಳು ನಡೆಯುತ್ತಿವೆ. ಜಾಗತಿಕ ಹಾಗೂ ಸ್ಥಳೀಯವಾಗಿ ಈ ಬಗ್ಗೆ ರಾಜಕೀಯ ಚರ್ಚೆಗಳು ಕೂಡ ನಡೆದಿವೆ. ಆದರೆ ಕಳೆದೊಂದು ವರ್ಷದ ಅಂಕಿಅಂಶಗಳನ್ನು ನೋಡಿದಾಗ ಭಾರತವು ರಷ್ಯಾದಿಂದಲೇ ಅತಿ ಹೆಚ್ಚು ಪ್ರಮಾಣದ ಕಚ್ಛಾತೈಲವನ್ನು ಆಮದು ಮಾಡಿಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.25ರಷ್ಟು ಕಚ್ಛಾತೈಲವನ್ನು ರಷ್ಯಾದಿಂದ ಭಾರತ ಖರೀದಿಸಿದೆ. ನಂತರದ ಸ್ಥಾನದಲ್ಲಿರುವ ಇರಾಕ್, ಸೌದಿ ಅರೇಬಿಯಾ, ಯುಎಇ ಹಾಗೂ ಅಮೆರಿಕವು ಕ್ರಮವಾಗಿ ಶೇ.18, ಶೇ.13, ಶೇ.10, ಶೇ.6ರ ಪಾಲನ್ನು ಹೊಂದಿವೆ. ಹಾಗೆಯೇ ಉಳಿದ 35 ದೇಶಗಳು ಶೇ.15ರಷ್ಟು ಕಚ್ಛಾತೈಲವನ್ನು ಪೂರೈಸುತ್ತವೆ. ಇನ್ನು ಅನಿಲದ ವಿಭಾಗದಲ್ಲಿ ಕತಾರ್ನಿಂದ ಶೇ.43, ಅಮೆರಿಕದಿಂದ ಶೇ.17 ಯುಎಇಯಿಂದ ಶೇ.11ರಷ್ಟು ಬರುತ್ತದೆ. ರಷ್ಯಾ ಸೇರಿ ಕೆಲ ರಾಷ್ಟçಗಳಿಂದ ಉಳಿದವು ಬರುತ್ತವೆ. ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗಲು ಕಾರಣವಾಗಿದ್ದೇ ಇದು. ಭಾರತಕ್ಕೆ ಬರುವ ಶೇ.70ಕ್ಕೂ ಅಧಿಕ ಅನಿಲವು ಹರ್ಮುಜ್ ಜಲಸಂಧಿಯನ್ನು ಅವಲಂಭಿಸಿರುವ ಅರಬ್ ರಾಷ್ಟ್ರಗಳಿಂದ ಬರುತ್ತದೆ.
ದುಬಾರಿ ಅಮೆರಿಕ! : ಅಂದಾಜಿನ ಪ್ರಕಾರ ಭಾರತವು ಅಮೆರಿಕದಿಂದ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಕಚ್ಛಾತೈಲ ಹಾಗೂ ಅನಿಲವನ್ನು ದುಪ್ಪಟ್ಟು ಪ್ರಮಾಣದಲ್ಲಿ ಖರೀದಿ ಮಾಡುವ ಸಾಧ್ಯತೆಯಿದೆ. ಅಂದ್ಹಾಗೆ ರಾಜಕೀಯ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ಕಾರಣದಿಂದ ಈ ಖರೀದಿ ಅನಿವಾರ್ಯವಾಗಬಹುದು. ರಷ್ಯಾ ಹಾಗೂ ಅರಬ್ ರಾಷ್ಟ್ರಗಳ ಕಚ್ಛಾತೈಲಕ್ಕಿಂತ ಅಮೆರಿಕದ ತೈಲವು ಶೇ.10ಕ್ಕೂ ಅಧಿಕ ಪ್ರಮಾಣದಲ್ಲಿ ದುಬಾರಿಯಾಗಲಿದೆ. ಹಾಗೆಯೇ ಅರಬ್ ದೇಶಗಳಿಂದ 4-7 ದಿನಗಳಲ್ಲಿ ಭಾರತಕ್ಕೆ ಕಚ್ಛಾತೈಲ ಬಂದರೆ ಅಮೆರಿಕದಿಂದ ಭಾರತಕ್ಕೆ ಬರಲು 45-60 ದಿನಗಳು ಬೇಕಾಗುತ್ತವೆ. ಹಾಗೆಯೇ ಸಾಗಣೆ ವೆಚ್ಚದಲ್ಲೂ ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಜಲಸಂಧಿ ಹಾಗೂ ಹಡಗು ವೆಚ್ಚ : ರಷ್ಯಾದಿಂದ ಬರುವ ತೈಲಗಳು ಕೆಂಪು ಸಮುದ್ರ-ಅರೇಬಿಯನ್ ಸಮುದ್ರ ಹಾಗೂ ಕಪ್ಪು ಸಮುದ್ರದ ಸುಯೇಜ್ ಕಾಲುವೆಯ ಮೂಲಕ ಭಾರತಕ್ಕೆ ಬರುತ್ತದೆ. ಅಮೆರಿಕ ಹಾಗೂ ಆಫ್ರಿಕದ ದೇಶಗಳಿಂದ ಬರುವ ತೈಲಗಳು ಮೆಕ್ಸಿಕೋ ಗಲ್ಫ್ ಹಾಗೂ ಸುಯೇಜ್ ಕಾಲುವೆಗಳ ಮೂಲಕ ಬರುತ್ತವೆ. ಮಾರ್ಗಮಧ್ಯೆ ಕೇಪ್ ಆಪ್ ಗುಡ್ ಹೋಪ್ ಕೂಡ ಬರುತ್ತದೆ. ಇವೆರಡೂ ದುಬಾರಿ ವೆಚ್ಚದ ಸಾಗಣಿಕೆಯ ಮಾರ್ಗಗಳಾಗಿವೆ. ಹೀಗಾಗಿ ಭಾರತಕ್ಕೆ ಹರ್ಮುಜ್ ಜಲಸಂಧಿಯಿoದ ಬರುವ ತೈಲಗಳ ಸಾಗಣೆ ವೆಚ್ಚವು ಅತ್ಯಂತ ಕಡಿಮೆಯಾಗುತ್ತದೆ. ದೇಶವಾರು ತೈಲಗಳ ವೆಚ್ಚ ಈ ರೀತಿ ಇದೆ.
ದೇಶ ಪ್ರತಿ ಬ್ಯಾರೆಲ್ ವೆಚ್ಚ ಸಾಗಣೆ ದಿನ
ಯುಎಇ $1.2 – $1.8 4-6 ಕುವೈತ್ $1.3 – $1.9 5-7
ಇರಾಕ್ $೧.೫ – $2.2 6-8
ಸೌದಿ ಅರೇಬಿಯಾ $1.5 – $2.5 6-9
ರಷ್ಯಾ $೩.೫ – $6.0 3೦-4೦
ಅಮೆರಿಕ $೫.೫ – $8.0 45-60
ಭಾರತದ ಅತ್ಯಾಧುನಿಕ ಸಂಸ್ಕರಣೆ : ಭಾರತದ ಪೆಟ್ರೋಲಿಯಂ ಸಂಸ್ಕರಣೆ ಘಟಕಗಳು ಜಗತ್ತಿನಲ್ಲೇ ಅತ್ಯಂತ ಅತ್ಯಾಧುನಿಕವಾಗಿವೆ. ಅಮೆರಿಕ ಸೇರಿ ಜಗತ್ತಿನ ಹಲವು ದೇಶಗಳ ಸಂಸ್ಕರಣಾ ಘಟಕಗಳು ಅಗತ್ಯಕ್ಕೆ ತಕ್ಕಂತೆ ಬದಲಾಗುವ ಸಾಮರ್ಥ್ಯ ಹೊಂದಿಲ್ಲ. ಆದರೆ ಭಾರತದಲ್ಲಿನ ಸಂಸ್ಕರಣಾ ಘಟಕದಲ್ಲಿ ಜಗತ್ತಿನ ಯಾವುದೇ ಭಾಗದ ತೈಲವನ್ನು ಸಂಸ್ಕರಿಸಬಹುದು. ತೈಲದ ಗುಣಮಟ್ಟ ಹೇಗಿದ್ದರೂ ಭಾರತದಲ್ಲಿ ಅದನ್ನು ಸಂಸ್ಕರಿಸಬಹುದು. ಅಂದ್ಹಾಗೆ ವೆನಿಜುವೆಲ್ಲಾದಲ್ಲಿ ಸಿಗುವ ಅತ್ಯಂತ ಗಡಸು ಕಚ್ಛಾತೈಲವನ್ನು ಕೂಡ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಬೆರಳೆಣಿಕೆಯ ದೇಶದಲ್ಲಿ ಭಾರತ ಒಂದಾಗಿದೆ. ಇದಲ್ಲದೇ ಭಾರತದ ಸಂಸ್ಕರಣೆ ಘಟಕದಲ್ಲಿ ಇನ್ನೊಂದು ಮ್ಯಾಜಿಕ್ ಮಾಡಬಹುದಾಗಿದೆ. ವಿಭಿನ್ನ ಗುಣಮಟ್ಟದ ಕಚ್ಛಾತೈಲವನ್ನು ಸೇರಿಸಿ ಸಂಸ್ಕರಣೆ ಮಾಡಬಹುದು. ಇದರಿಂದ ವೆಚ್ಚವನ್ನು ಸರಿದೂಗಿಸಲು ಭಾರತಕ್ಕೆ ಸಾಧ್ಯವಾಗುತ್ತಿದೆ. ಅಮೆರಿಕದ ದುಬಾರಿ ಕಚ್ಛಾತೈಲದ ಜೊತೆಗೆ ಅರಬ್ನ ಕಚ್ಛಾತೈಲ ಸೇರಿಸಬಹುದಾಗಿದೆ. ಇದೇ ಕಾರಣದಿಂದ ಭಾರತದಲ್ಲಿ ಸಂಸ್ಕರಣೆಯಾಗುವ ಪೆಟ್ರೋಲಿಯಂ ಉತ್ಪಾದನೆ ಮೇಲೆ ಎರಡು ಪಟ್ಟು ಹೆಚ್ಚು ಲಾಭ ಸಿಗುತ್ತದೆ. ಜಾಗತಿಕವಾಗಿ ಪ್ರತಿ ಬ್ಯಾರೆಲ್ಗೆ4-6 ಡಾಲರ್ ದೊರೆತರೆ, ಭಾರತದ ಸಂಸ್ಕರಣೆಯಿoದ ಅದು 8-15 ಡಾಲರ್ಗೆ ಏರುತ್ತದೆ.
ರಫ್ತಿನಲ್ಲಿ ಎರಡನೇ ಸ್ಥಾನ! : ಭಾರತದ ಈ ಸಂಸ್ಕರಣೆಯ ಸಾಮರ್ಥ್ಯದಿಂದ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ ಜಾಗತಿಕವಾಗಿ ಭಾರತವು ಎರಡನೇ ಸ್ಥಾನದಲ್ಲಿದೆ. ಅಮೆರಿಕದ ನಂತರ ಭಾರತವೇ ಅತ್ಯಧಿಕ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ರಷ್ಯಾ, ಅರಬ್ ರಾಷ್ಟçಗಳು ಕೂಡ ಭಾರತದ ನಂತರ ಸ್ಥಾನವನ್ನು ಹೊಂದಿವೆ. ವಾರ್ಷಿಕವಾಗಿ ಸುಮಾರು 90 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತವು ರಫ್ತು ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಯುರೋಪ್, ಆಫ್ರಿಕಾ, ಮಧ್ಯ ಪ್ರಾಚ್ಯ ಹಾಗೂ ಏಷ್ಯಾದ ದೇಶಗಳು ಸೇರಿವೆ. ಇದೇ ಕಾರಣದಿಂದ ಶ್ರೀಲಂಕಾ, ಬಾಂಗ್ಲಾದೇಶ, ಐರೋಪ್ಯ ದೇಶಗಳಿಗೆ ಭಾರತದಿಂದ ಇಂಧನ ರಫ್ತು ಎನ್ನುವ ಸುದ್ದಿ ಆಗಾಗ ಬರುತ್ತಿರುತ್ತದೆ. ಇದರಿಂದ ಭಾರತವು ಸುಮಾರು 105 ಬಿಲಿಯನ್ ಡಾಲರ್ ಅನ್ನು ಗಳಿಸುತ್ತದೆ. ಆದಾಗ್ಯೂ ಕಚ್ಛಾತೈಲ ಕ್ಷೇತ್ರದಲ್ಲಿ ಭಾರತದ ಒಟ್ಟಾರೆ ಕೊರತೆಯು 90 ಬಿಲಿಯನ್ ಡಾಲರ್ನಷ್ಟಿದೆ. ಆದರೆ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ರಫ್ತಿನಲ್ಲಿ ದುಡಿಯುತ್ತಿದೆ ಎನ್ನುವುದು ಸಮಾಧಾನಕರ ವಿಚಾರವಾಗಿದೆ.
